Advertisement
ಹೇಗೋ ರೈತರ ಬಾಕಿ ಕೊಡಬೇಕೆಂದರೆ, ಉತ್ಪಾದನೆಯಾದ ಸಕ್ಕರೆ, ವಿದ್ಯುತ್ ಹಾಗು ಕಾಕಂಬಿಗಳಿಗೆ ಸ್ಥಿರ ಬೆಲೆಗಳಿಲ್ಲ. ಸದ್ಯ, ರೈತರು ಇಚ್ಛಿಸಿದ ಕಬ್ಬಿನ ಬೆಲೆ ಹಾಗು ಸಕ್ಕರೆ ಉದ್ಯಮಕ್ಕೆ ಬರುವ ಉತ್ಪನ್ನಗಳ ಆದಾಯದಲ್ಲಿ ಅಜಗಜಾಂತರವಿದೆ. ಇಂಥ ಪರಿಸ್ಥಿತಿಯಲ್ಲಿ ಸಕ್ಕರೆ ಉದ್ಯಮವನ್ನು ಬದುಕಿಸುವುದು ಹೇಗೆ? ಎಂಬುದು ಹಲವರ ಪ್ರಶ್ನೆಯಾಗಿದೆ. ಕೇಂದ್ರ ಸರಕಾರವು ಕಬ್ಬು ಬೆಳೆಗೆ ನಿರ್ಧಿಷ್ಟಪಡಿಸುವ ಊಕದರದಂತೆ ಸಕ್ಕರೆ ಉದ್ಯಮದ ಉತ್ಪನ್ನಗಳಿಗೂ ನಿರ್ದಿಷ್ಟವಾದ ದರ ನಿಗದಿಪಡಿಸಬೇಕು. ಯಾವುದೇ ದರದಲ್ಲಿ ವ್ಯತ್ಯಾಸವಾದರೆ ಸರಕಾರವೆ ನಷ್ಟ ತುಂಬಿ ಕೊಡಬೇಕು, ಆಗ ಮಾತ್ರ ಉದ್ಯಮಕ್ಕೆ ಭವಿಷ್ಯವಿದೆ.
Related Articles
Advertisement
ಭಾರತದಲ್ಲಿ ಕಬ್ಬು ಬೆಳೆಯ ಅತ್ಯಧಿಕ ಉತ್ಪಾದಕ ರಾಜ್ಯವಾದ ಉತ್ತರಪ್ರದೇಶದಲ್ಲಿ ಕಾಕಂಬಿಯನ್ನು ಶೇಖರಿಸಿಡಲು ಸ್ಥಳವಿಲ್ಲದ ಕಾರಣ ಅತ್ಯಂತ ಕನಿಷ್ಠ ಬೆಲೆಗೆ ಮಾರಾಟ ಮಾಡುತ್ತಿರುವುದಲ್ಲದೇ ತಕ್ಷಣದಲ್ಲಿ ಖರೀದಿಸುವವರಿಗೆ ಸಾಗಾಣಿಕೆಯ ವೆಚ್ಚದಲ್ಲಿ ಸಹಾಯಧನ ಕೊಡುತ್ತಿವೆ. ಈ ತೆರನಾದ ಸಕ್ಕರೆ ಉದ್ಯಮದ ಸ್ಥಿತಿ-ಗತಿಯನ್ನು ಅಭ್ಯಸಿಸಿದ ಬ್ಯಾಂಕುಗಳು ಸಹ ಯಾವುದೇ ರೀತಿಯ ಸಾಲ ನೀಡಲು ಮುಂದೆ ಬರುತ್ತಿಲ್ಲ. ಹೀಗಿರುವಾಗ ಕೇಂದ್ರ ಸರಕಾರ ನಿಗದಿ ಪಡಿಸಿದ ಊಕದರವನ್ನು ಹೇಗೆ ಕೊಡುವುದು? ಇದು ಯಕ್ಷ ಪ್ರಶ್ನೆಯಾಗಿದೆ.
ಕೇಂದ್ರ ಸರ್ಕಾರವು ಸಕ್ಕರೆಯ ಬದಲಾಗಿ ಎಥೆನಾಲ್ ತಯಾರಿಸಲು ಅನುಮತಿ ನೀಡಿದೆ. ಈವರೆಗೂ ಸಕ್ಕರೆ ಉತ್ಪಾದಿಸುತ್ತಿದ್ದ ಕಾರ್ಖಾನೆಗಳು ಈಗ ಒಮ್ಮೆಲೆ ಕೋಟ್ಯಂತರ ಹಣ ವಿನಿಯೋಗಿಸಿ ಎಥೆನಾಲ್ ಉತ್ಪಾದನೆಯ ಯಂತ್ರೋಪಕರಣಗಳನ್ನು ಅಳವಡಿಸುವುದು ಕಷ್ಟಸಾಧ್ಯವಾಗಿರುವುದು. ಒಂದು ವೇಳೆ ಸಕ್ಕರೆ ಉದ್ಯಮವು ಸಾಲಾ-ಸೋಲಾ ಮಾಡಿ ಎಥೆನಾಲ್ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡಿದ್ದಾದಲ್ಲಿ ಭವಿಷ್ಯದಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರವು ಇಳಿಕೆಯಾದಾಗ ದೇಶದಲ್ಲಿಯೂ ಪೆಟ್ರೋಲಿಯಮ್ ಉತ್ಪನ್ನಗಳ ಬೆಲೆಗಳಲ್ಲಿ ಇಳಿಕೆಯಾಗುವುದು ಸ್ವಾಭಾವಿಕ,
ಆಗ ಕೇಂದ್ರ ಸರಕಾರವು ದಿಢೀರನೆ ಎಥೆನಾಲ್ ಬೆಲೆಯನ್ನು ಕಡಿಮೆ ಮಾಡಿದರೆ ಗತಿಏನು? ಎಂಬ ಚಿಂತೆಯೂ ಕಾರ್ಖಾನೆಗಳ ಮಾಲೀಕರನ್ನು ಕಾಡುತ್ತಿದೆ. ಭಾರತದಲ್ಲಿ ಸದ್ಯ ಚಾಲನೆಯಲ್ಲಿರುವ ಅಂದಾಜು 700 ಸಕ್ಕರೆ ಕಾರ್ಖಾನೆಗಳ ಪೈಕಿ ಕರ್ನಾಟಕದಲ್ಲಿ 81 ಸಕ್ಕರೆ ಕಾರ್ಖಾನೆಗಳಿವೆ. ಅವುಗಳ ಪೈಕಿ ಕೇವಲ 38 ಕಾರ್ಖಾನೆಗಳು ಮಾತ್ರ ಡಿಸ್ಟಿಲರಿ ಘಟಕವನ್ನು ಹೊಂದಿವೆ. ಇವುಗಳಲ್ಲಿ ಕೇವಲ 21 ಕಾರ್ಖಾನೆಗಳು ಮಾತ್ರ ಎಥೆನಾಲ್ ಉತ್ಪಾದನೆಯನ್ನು ಮಾಡುತ್ತಿವೆ. ಭಾರತದಲ್ಲಿ ಎಥೆನಾಲ್ ಯಂತ್ರೋಪಕರಣಗಳನ್ನು ಅಳವಡಿಸುವ ಗುತ್ತಿಗೆದಾರ ಸಂಸ್ಥೆಗಳು ಕಡಿಮೆ ಪ್ರಮಾಣದಲ್ಲಿದ್ದು,
ಏಕಕಾಲದಲ್ಲಿ ಎಲ್ಲಾ ಕಾರ್ಖಾನೆಗಳಿಗೂ ದೇಶಾದ್ಯಂತ ಎಥೆನಾಲ್ ಉತ್ಪಾದನಾ ಯಂತ್ರಗಳನ್ನು ಅಳವಡಿಕೆ ಮಾಡುವುದು ಅಸಾಧ್ಯದ ಮಾತು. ಒಂದು ವೇಳೆ ಹಣಕಾಸಿನ ಅನುಕೂಲತೆಗಳಿದ್ದ ಪಕ್ಷದಲ್ಲಿ ಎಥೆನಾಲ್ ಉತ್ಪಾದನೆ ಕಾರ್ಯರೂಪಕ್ಕೆ ಬರಬೇಕಾದರೆ ಕನಿಷ್ಠ 2 ರಿಂದ 3 ವರ್ಷವಾದರೂ ಬೇಕು. ಅಲ್ಲಿಯವರೆಗೆ ಸಕ್ಕರೆ ಉದ್ಯಮ ಜೀವಂತವಿರುವುದಾದರು ಹೇಗೆ? ರೈತರು ಹಾಗು ಕಾರ್ಮಿಕರು ಉಳಿಯಬೇಕಾದರೆ ಸಕ್ಕರೆ ಉದ್ಯಮವು ಪ್ರಗತಿಯ ಪಥದಲ್ಲಿ ನಡೆಯಬೇಕು. ಅಂಥದೊಂದು ಮಾರ್ಗ ರೂಪಿಸುವ ಹೊಣೆ ಸರ್ಕಾರಗಳ ಮೇಲಿದೆ.
* ಬಸವರಾಜ ಶಿವಪ್ಪ ಗಿರಗಾಂವಿ