Advertisement

ಪರ್ಯಾಯ ಭೋಜನದ ಭಕ್ಷ್ಯದಲ್ಲಿ ಸಕ್ಕರೆ, ಮೈದಾ ನಿಷೇಧ

10:57 PM Jan 14, 2020 | mahesh |

ಉಡುಪಿ: ಪಲಿಮಾರು ಶ್ರೀಪಾದರು ಶ್ರೀ ಕೃಷ್ಣ ಮಠದ ಅಡುಗೆಯಲ್ಲಿ ಮೈದಾ ಹಾಗೂ ಸಕ್ಕರೆ ಬಳಕೆ ನಿಷೇಧ ಮಾಡಿದ್ದು, ಈ ಬಾರಿ ಅದಮಾರು ಪರ್ಯಾಯದ ಭಕ್ಷ್ಯದಲ್ಲಿಯೂ ಮೈದಾ ಹಾಗೂ ಸಕ್ಕರೆಯನ್ನು ನಿಷೇಧಿಸಲಾಗಿದೆ.

Advertisement

ಅದಮಾರು ಪರ್ಯಾಯದಲ್ಲಿ ಬೆಲ್ಲದ ಪಾಕದಿಂದ ತಲಾ 60,000 ಸಾವಿರ ಕಾಳು ಲಾಡು, ಗೋಧಿ ಹಿಟ್ಟಿನ ಬರ್ಫಿ, 1.2 ಲಕ್ಷ ಅಕ್ಕಿ ವಡೆ ತಯಾರಿಸಲಾಗಿದೆ. ಎರಡು ಮೂರು ದಿನಗಳಿಂದ ಬೆಳಗ್ಗೆ 7ರಿಂದ ಸಂಜೆ 5 ವರೆಗೆ ಬಾಣಿಸಿಗರು ಭಕ್ಷ್ಯ ತಯಾರಿಕೆಯಲ್ಲಿ ನಿರತರಾಗಿದ್ದಾರೆ.

ಕೃಷ್ಣ ಮಠ ಪಾರ್ಕಿಂಗ್‌ ಏರಿಯಾ ಬಳಿಯ ಬೈಲಕೆರೆ ಸೇರಿಗಾರ ಕುಟುಂಬಸ್ಥರ ಸುಮಾರು ಒಂದೂವರೆ ಎಕರೆ ಸ್ಥಳದಲ್ಲಿ ಪ್ರಸಾದ ತಯಾರಿ ಮತ್ತು ವಿತರಣೆಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ. ಉದ್ಯಾವರ ವಿಷ್ಣು ಮೂರ್ತಿ ನೇತೃತ್ವದ ತಂಡ 100ಕ್ಕೂ ಅಧಿಕ ಬಾಣಸಿಗರು ಅಡುಗೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಅದಮಾರು ಪರ್ಯಾಯದಲ್ಲಿ ಈ ತಂಡ ಭೋಜನವನ್ನು ತಯಾರಿಸಿತ್ತು.

ಭೋಜನದ ಮೆನು
ಜ. 17ರಂದು ರಾತ್ರಿ 35ರಿಂದ 40 ಸಾವಿರ ಭಕ್ತರಿಗೆ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಜೆ 7ರಿಂದ 9 ಗಂಟೆಯ ವರೆಗೆ ಪ್ರಸಾದ ವಿತರಣೆ ನಡೆಯಲಿದೆ. ಅಡಿಕೆ ಹಾಳೆ ತಟ್ಟೆಯಲ್ಲಿ ಊಟವನ್ನು ಬಡಿಸಲಿದ್ದು ಅನ್ನ, ಸಾಂಬಾರು, ಪಾಯಸ, ಮಜ್ಜಿಗೆ ಇರಲಿದೆ. ಜ.18ರಂದು ಮಹಾ ಅನ್ನಸಂತರ್ಪಣೆ ನಡೆಯಲಿದ್ದು 40ರಿಂದ 50 ಸಾವಿರ ಜನರು ಪ್ರಸಾದ ಸ್ವೀಕರಿಸುವ ನಿರೀಕ್ಷೆ ಇದೆ. ಭೋಜನದಲ್ಲಿ ಉಪ್ಪಿನಕಾಯಿ, ಪಲ್ಯ, ಅನ್ನ, ಸಾರು, ಮಟ್ಟುಗುಳ್ಳ ಸಾಂಬಾರು, ಗೋಧಿ ಪಾಯಸ, ಲಾಡು, ಗೋಧಿ ಬರ್ಫಿ, ಅಕ್ಕಿ ವಡೆ, ಮಜ್ಜಿಗೆ ಇರಲಿದೆ. ಊಟಕ್ಕೆ ಬಫೆ ಮತ್ತು ಟೇಬಲ್‌ ವ್ಯವಸ್ಥೆ ಇರಲಿದೆ.

ರಾಮ- ಲಕ್ಷ್ಮಣ ಪಾತ್ರೆ
ಜ. 18ರ ಬೆಳಗ್ಗೆ 3 ಗಂಟೆಗೆ ಅಡುಗೆ ಕೆಲಸ ಆರಂಭವಾಗುತ್ತದೆ. ರಾಮ ಮತ್ತು ಲಕ್ಷ್ಮಣ ಎಂಬ ಎರಡು ಬೃಹತ್‌ ತಾಮ್ರದ ಕಠಾರಗಳಿದ್ದು ಇವುಗಳಲ್ಲಿ ಸಾರು ಮತ್ತು ಸಾಂಬಾರನ್ನು ತಯಾರಿಸಲಾಗುತ್ತದೆ.

Advertisement

ಪರಿಸರಸ್ನೇಹಿ ಊಟದ ವ್ಯವಸ್ಥೆ
ಪರಿಸರ ಸಂರಕ್ಷಣೆ ದೃಷ್ಟಿಯಿಂದ ಊಟದ ವೇಳೆ ಪ್ಲಾಸ್ಟಿಕ್‌ ಲೋಟದ ಜತೆಗೆ ಕಾಗದದ ಲೋಟಗಳನ್ನೂ ನಿಷೇಧಿಸಲಾಗಿದೆ. ಅದರ ಬದಲಿಗೆ ಸುಮಾರು 3,000 ಸ್ಟೀಲ್‌ ಲೋಟಗಳನ್ನು ಖರೀದಿಸಿದ್ದು, ಮುಂದಿನ ಎರಡು ವರ್ಷಗಳ ಕಾಲವೂ ಇವುಗಳನ್ನು ಬಳಸಲಾಗುತ್ತದೆ.

ವಿದ್ಯಾರ್ಥಿಗಳಿಂದ ಆಮಂತ್ರಣ ಪತ್ರಿಕೆ ಹಂಚಿಕೆ
ಶ್ರೀ ಕೃಷ್ಣ ಮಠದ ಪರ್ಯಾಯದಲ್ಲಿ ಇದೇ ಮೊದಲ ಬಾರಿ ಪರ್ಯಾಯ ಆಮಂತ್ರಣ ಪತ್ರಿಕೆ ರಾಜಕಾರಣಿ, ಗಣ್ಯರಿಗೆ ಮಾತ್ರವಲ್ಲದೆ ಜನಸಾಮಾನ್ಯರ ಮನೆಗಳಿಗೂ ಆಮಂತ್ರಣ ಪತ್ರಿಕೆ ತಲುಪಿದೆ. ಅದಮಾರು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉಡುಪಿ ನಗರದ 5 ಕಿ.ಮೀ. ವ್ಯಾಪ್ತಿಯ ಮನೆಗಳಿಗೆ ತೆರಳಿ ಆಮಂತ್ರಣ ಪತ್ರಿಕೆ ಹಂಚಿದ್ದಾರೆ.

ನೂರಕ್ಕೂ ಅಧಿಕ ಮಂದಿ ಬಾಣಸಿಗರು
ಪ್ರಸ್ತುತ ನೂರಕ್ಕೂ ಅಧಿಕ ಮಂದಿ ಬಾಣಸಿಗರು ಅಡುಗೆ ಕೆಲಸದಲ್ಲಿ ಕೈ ಜೋಡಿಸಲಿದ್ದಾರೆ. ಒಂದು ಬಾರಿಗೆ 1,000 ಜನರು ಕುಳಿತು ಭೋಜನ ಮಾಡಬಹುದು. ಬಫೆ ವ್ಯವಸ್ಥೆಯಲ್ಲಿ ಎಷ್ಟೂ ಜನರು ಪಾಲ್ಗೊಳ್ಳಬಹುದು. ಪಾರ್ಕಿಂಗ್‌ ಪ್ರದೇಶ ಮತ್ತು ಭೋಜನ ಶಾಲೆ, ಅನ್ನಬ್ರಹ್ಮ ಸಭಾಂಗಣದಲ್ಲಿ ಭೋಜನ ಪ್ರಸಾದದ ವ್ಯವಸ್ಥೆ ಇರಲಿದೆ.
-ವಿಷ್ಣು ಮೂರ್ತಿ ಭಟ್‌ , ಉದ್ಯಾವರ, ಮುಖ್ಯ ಬಾಣಸಿಗ.

Advertisement

Udayavani is now on Telegram. Click here to join our channel and stay updated with the latest news.

Next