ಚಿಂಚೋಳಿ: ಕಲಬುರಗಿ-ಚಿಂಚೋಳಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಪರಿವರ್ತಿತ ಸಕ್ಕರೆ ಕಾರ್ಖಾನೆ ವಾಸ್ತು ಪೂಜೆ, ಯಂತ್ರೋಪಕರಣಗಳ ಜೋಡಣಾ ಕಾರ್ಯಾರಂಭ, ಸಿದ್ಧಸಿರಿ ಸೌಹಾರ್ದ ಸಹಕಾರಿಯ 136ನೇ ನೂತನ ಶಾಖೆ ಉದ್ಘಾಟನೆ ಸಮಾರಂಭ ನ.22ರಂದು ನಡೆಯಲಿದೆ ಎಂದು ಸಿದ್ಧಸಿರಿ ಸೌಹಾರ್ದ ಸಹಕಾರಿ ಬ್ಯಾಂಕ್ ನ ಸಹಾಯಕ ಪ್ರಧಾನ ಕಾರ್ಯದರ್ಶಿಗಳಾದ (ಎಜಿಎಂ) ಭೀಮು ಕುಳಗೇರಿ, ಉಮೇಶ ಹರವಾಳ ತಿಳಿಸಿದ್ದಾರೆ.
ಶುಕ್ರವಾರ ಜಂಟಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಸಕ್ಕರೆ ಕಾರ್ಖಾನೆ ಪ್ರಾರಂಭವಾಗದೇ ಇರುವುದರಿಂದ ಸಿದ್ಧಸಿರಿ ಸೌಹಾರ್ದ ಸಹಕಾರಿ ವತಿಯಿಂದ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಜವಾಬ್ದಾರಿ ಕೈಗೊಳ್ಳಲಾಗಿದೆ ಎಂದರು.
ಚಿಂಚೋಳಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರತಿನಿತ್ಯ 5000 ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯವಿದೆ. 2022ರ ವಿಜಯ ದಶಮಿ ಹಬ್ಬದ ದಿವಸ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಲಿದೆ. ಆದ್ದರಿಂದ ಕಬ್ಬು ಬೆಳೆಯುವುದಕ್ಕಾಗಿ ಸಹಕಾರಿ ಬ್ಯಾಂಕ್ ವತಿಯಿಂದ ರೈತರಿಗೆ ಶೂನ್ಯ ಬಡ್ಡಿ ರಹಿತವಾಗಿ ಒಟ್ಟು 3ಲಕ್ಷ ರೂ. ವರೆಗೆ ಸಾಲ-ಸೌಲಭ್ಯ ನೀಡಲಾಗುವುದು. ವರ್ಷಕ್ಕೆ 7 ಲಕ್ಷ ಟನ್ ಪ್ರತಿ ವರ್ಷ ಕಬ್ಬು ಬೆಳೆಯಲು ರೈತರನ್ನು ಪ್ರೋತ್ಸಾಹಿಸಲಾಗುವುದು ಎಂದರು.
ಸಕ್ಕರೆ ಕಾರ್ಖಾನೆಯ ತುಕ್ಕು ಹಿಡಿದ ಯಂತ್ರೋಪಕರಣಗಳ ದುರಸ್ತಿಗೆ ನುರಿತ ಮೆಕ್ಯಾನಿಕಲ್ ಸಿಬ್ಬಂದಿ ಆಗಮಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಕ್ಕರೆ ಕಾರ್ಖಾನೆಯಿಂದ ಉತ್ಪಾದಿಸುವ ಇಥೆನಾಲ್‌ನ್ನು ಕೇಂದ್ರ ಸರ್ಕಾರ 63.35ರೂ.ಗೆ ಖರೀದಿಸುತ್ತಿದೆ. ಆದ್ದರಿಂದ 100 ಕೋಟಿ ರೂ. ಸಬ್ಸಿಡಿ ಸಿಗಲಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿಯ ಒಟ್ಟು 31 ಶಾಖೆಗಳಿದ್ದು, ಬೆಂಗಳೂರಿನಲ್ಲಿ-6, ಕಲಬುರಗಿ ಜಿಲ್ಲೆಯಲ್ಲಿ-18, ಯಾದಗಿರಿ ಜಿಲ್ಲೆಯಲ್ಲಿ-6, ಬೀದರ ಜಿಲ್ಲೆಯಲ್ಲಿ-6 ಶಾಖೆಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಒಟ್ಟು 200 ಶಾಖೆ ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಈ ಸಹಕಾರಿಗೆ ಒಟ್ಟು 25 ಕೋಟಿ ರೂ. ಡಿಪಾಜಿಟ್ ಮಾಡಲಾಗಿದೆ ಎಂದು ಭೀಮು ಕುಳಗೇರಿ, ಉಮೇಶ ಹರವಾಳ ಜಂಟಿಯಾಗಿ ತಿಳಿಸಿದರು. ಅಲ್ಲದೇ ಪಟ್ಟಣದಲ್ಲಿ ಸೂಪರ್ ಮಾರ್ಕೇಟ್, ಗೋಶಾಲೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಪೂಜ್ಯ ಡಾ| ಚೆನ್ನವೀರ ಶಿವಾಚಾರ್ಯರು ಹಾರಕೂಡ, ಶಾಸಕ ಡಾ| ಅವಿನಾಶ ಜಾಧವ, ಸಿದ್ಧಸಿರಿ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಸವನಗೌಡ ಪಾಟೀಲ ಯತ್ನಾಳ,ಬಾಬುರಾವ್ ಪಾಟೀಲ, ಶಿವಶರಣಪ್ಪ ಜಾಪಟ್ಟಿ, ಗೌತಮ ಪಾಟೀಲ, ರಮೇಶ ಯಾಕಾಪುರ, ರಾಜ್ಯಸಭೆ ಮಾಜಿ ಸದಸ್ಯ ಡಾ| ಬಸವರಾಜ ಪಾಟೀಲ ಸೇಡಂ, ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ| ಉಮೇಶ ಜಾಧವ, ದತ್ತಾತ್ರೇಯ ಪಾಟೀಲ, ರಾಜಕುಮಾರ ಪಾಟೀಲ, ಪ್ರಕಾಶ ಖಂಡ್ರೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ನ್ಯಾಯವಾದಿ ಶಿವಶರಣಪ್ಪ ಜಾಪಟ್ಟಿ, ದುಡ್ಡಣ್ಣಗೌಡ ಪಾಟೀಲ, ಬಾಹುಬಲಿ ಪ್ರಥಮಶೆಟ್ಟಿ, ಹಳೆಪ್ಪಗೌಡ ಬಿರಾದಾರ, ಸುರೇಶ ದಾಡಗೆ ಇದ್ದರು.