Advertisement
ಹಲವರ ಪರಿಶ್ರಮದಿಂದ ಸ್ಥಾಪಿತವಾಗಿದ್ದ ಕಾರ್ಖಾನೆ ಪುನಾರಂಭಕ್ಕೆ ಜನಪ್ರತಿನಿಧಿಗಳೂ ಇಚ್ಛಾಶಕ್ತಿ ತೋರುತ್ತಿಲ್ಲ. ಈಭಾಗದ ಜನರು ಕೂಡ ಧ್ವನಿ ಎತ್ತುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಶ್ರೀರಾಮ ಸಕ್ಕರೆ ಕಾರ್ಖಾನೆ ಇತಿಹಾಸ ಪುಟಕ್ಕೆ ಸೇರಲಿದೆ.
Related Articles
Advertisement
2006ರಲ್ಲಿ ಕಾರ್ಖಾನೆಯಲ್ಲಿ ಅಧಿಕಾರ ನಡೆಸುತ್ತಿದ್ದ ಆಡಳಿತ ಮಂಡಳಿ ರಾಜಕೀಯ ಕಾರಣಗಳಿಂದ ರಾಜೀನಾಮೆ ನೀಡಿ ನಿರ್ಗಮಿಸಿತು. ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಶಾಸಕ ಸಾ.ರಾ.ಮಹೇಶ್ ಖಾಸಗಿಯವರಿಗೆ ವಹಿಸಲು ಒತ್ತಡ ತಂದಿದ್ದರಿಂದ ಚೆನ್ನೈ ಮೂಲದ ಅಂಬಿಕಾ ಶುಗರ್ಸ್ ಕಂಪನಿ 22 ವರ್ಷಗಳ ಅವಧಿಗೆ 169 ಕೋಟಿ ರೂ.ಗಳಿಗೆ ಗುತ್ತಿಗೆ ಪಡೆಯಿತು.ಆದರೆ, ಗುತ್ತಿಗೆ ನೀಡಿಕೆಯಲ್ಲಿ ಎಡವಿದ ಸರ್ಕಾರ ಅಂಬಿಕಾ ಶುಗರ್ಸ್ಗೆ ಕಾರ್ಖಾನೆಯನ್ನು ನೋಂದಣಿ ಮಾಡಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ ಕಂಪನಿಯವರು ಸರ್ಕಾರಕ್ಕೆ ತೆರಿಗೆ ವಂಚಿಸಿ 5ವರ್ಷಗಳ ನಂತರ ರೈತರು ಮತ್ತು ಕಾರ್ಮಿಕರಿಗೆ ಕೈಕೊಟ್ಟು ಕಾರ್ಖಾನೆಯಿಂದ ಕಾಲ್ಕಿತ್ತಿತು. ಇದರಿಂದ ತಾಲೂಕಿನ ಸಾವಿರಾರು ರೈತರು, 400ಕ್ಕೂ ಅಧಿಕ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರು ಅತಂತ್ರರಾಗಿದ್ದಾರೆ.
ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ಕಾರ್ಖಾನೆಯ ಪುನರಾರಂಭದ ಬಗ್ಗೆ ಮನಸ್ಸು ಮಾಡಿಲ್ಲ.ಇತ್ತೀಚೆಗೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆಗೆ ನೀಡಲು ಹಲವಾರು ಬಾರಿ ಟೆಂಡರ್ ಕರೆಯಲಾಗಿತ್ತಾದರೂ ಯಾರೂ ಟೆಂಡರ್‌ಪ್ರಕ್ರಿಯೆಯಲ್ಲಿ ಭಾಗವಹಿಸದಿದ್ದರಿಂದ ಮತ್ತೆ ನನೆಗುದಿಗೆ ಬಿದ್ದಿದೆ. ಸಕ್ಕರೆ ಕಾರ್ಖಾನೆಯನ್ನುಸರ್ಕಾರವೇ ವಹಿಸಿಕೊಂಡು ಕೂಡಲೇ ಕಬ್ಬು ಅರೆಯುವ ಕಾರ್ಯ ಆರಂಭಿಸದಿದ್ದರೆ ಯಂತ್ರೋಪಕರಣಗಳು ತುಕ್ಕು ಹಿಡಿದು ಹಾಳಾಗುವುದು ನಿಶ್ಚಿತ. ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರು ಕಾರ್ಖಾನೆಯ ಸಮಸ್ಯೆಯ ಬಗ್ಗೆ ಮಾತನಾಡುತ್ತಿದ್ದು, ಪರಿಹಾರ ಮತ್ತು ಪರ್ಯಾಯ ಕ್ರಮಗಳ ಬಗ್ಗೆ ಚಿಂತಿಸುತ್ತಿಲ್ಲ. ಸರ್ಕಾರ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಉಳಿಸಿಕೊಳ್ಳದಿದ್ದರೆ ರೈತರ ಪರಿಶ್ರಮದಿಂದಲೇ ಜನ್ಮ ತಾಳಿದ ಕಾರ್ಖಾನೆ ಬಾಗಿಲು ಹಾಕಿಕೊಳ್ಳುವ ದಿನಗಳು ದೂರವಿಲ್ಲ.
ಕಾಂಗ್ರೆಸ್ ಸರ್ಕಾರದಲ್ಲಿ ನಮ್ಮ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿ ಗಳಾಗಿದ್ದಾಗ ಶೀಘ್ರದಲ್ಲೇ ಕಾರ್ಖಾನೆ ಆರಂಭವಾಗುತ್ತದೆ ಎಂದು ರೈತರು ನಿರೀಕ್ಷೆಯ ಮೂಟೆಯನ್ನೇ ಹೊತ್ತಿದ್ದರು. ಆದರೆ, ಒಮ್ಮೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರು ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಸಕ್ಕರೆ ಕಾರ್ಖಾನೆಯ ಬಗ್ಗೆ ತುಟಿ ಬಿಚ್ಚಲಿಲ್ಲ. ಜತೆಗೆ ಕಾರ್ಖಾನೆ ವ್ಯಾಪ್ತಿಯ ಆಡಳಿತ ಪಕ್ಷದ ಶಾಸಕರೂ ಅವರ ಗಮನಕ್ಕೆ ತರಲಿಲ್ಲ.ಪ್ರಸಕ್ತ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು,ರೈತಪರ ಹೋರಾಟಗಾರ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿರುವುದರಿಂದ ಈಗಲಾದರೂ ಮುಖ್ಯಮಂತ್ರಿಗಳು 9 ವರ್ಷಗಳಿಂದ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿರುವ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭದ ಬಗ್ಗೆಗಮನ ಹರಿಸಬೇಕು ಎಂಬುದು ತಾಲೂಕಿನ ರೈತರಒಕ್ಕೊರಲ ಒತ್ತಾಯವಾಗಿದೆ.
- ಗೇರದಡ ನಾಗಣ್ಣ