ಚಾಮರಾಜನಗರ: ಕಬ್ಬು ಖರೀದಿಸಿದ ಸಕ್ಕರೆ ಕಾರ್ಖಾನೆಗಳಿಂದ ಹೆಚ್ಚುವರಿ 150 ರೂ. ದರ ಕೊಡಿಸಲು ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ವತಿಯಿಂದ ಫೆ.28 ರಂದು ಮಂಗಳವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ನಡೆದ ಪೂರ್ವಭಾವಿಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಬ್ಬಿನ ಹೆಚ್ಚುವರಿ ದರ 150 ರೂ.ಗಳನ್ನು, ಸಕ್ಕರೆ ಕಾರ್ಖಾನೆಗಳಿಂದ ಕೊಡಿಸುವಂತೆ ಸೇರಿ ರೈತರ ನಾನಾ ಹಕ್ಕೊತ್ತಾಯಗಳ ಈಡೇರಿಕೆಗೆ ಒತ್ತಾಯಿಸಿ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ಅಂದು ಮೈಸೂರಿನ ಗನ್‌ಹೌಸ್ ವೃತ್ತದಿಂದ ಬೆಳಿಗ್ಗೆ 11 ಕ್ಕೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುತ್ತಿಗೆ ಹಾಕಲಾಗುವುದು ಈ ಕಾರ್ಯ ಕ್ರಮಕ್ಕೆ ಚಾಮರಾಜನಗರ ಜಿಲ್ಲೆಯ ರೈತರು ಸ್ವಯಂ ಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಕೆರೆಕಟ್ಟೆ ತುಂಬಿಸಿ: ಅರಿಶಿನಕ್ಕೆ ಎಂಐಎಸ್ ಯೋಜನೆಯಡಿ ಸರ್ಕಾರ ಮಧ್ಯಪ್ರವೇಶ ಮಾಡಿ ಒಂದು ಕ್ವಿಂಟಲ್‌ಗೆ 17,500 ರೂ. ಗಳನ್ನು ಕೊಡಬೇಕು. ಕಾವೇರಿ-ಕಬಿನಿ ಅಚ್ಚುಕಟ್ಟು ನಾಲೆಗಳ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಕಬ್ಬು ಬಾಳೆ, ಇನ್ನಿತರ ಬೆಳೆಗಳ ರಕ್ಷಣೆಗಾಗಿ ಬೇಸಿಗೆಯಲ್ಲಿ ದನಕರುಗಳ ಕುಡಿಯುವ ನೀರಿಗಾಗಿ ಕೆರೆಕಟ್ಟೆಗಳನ್ನು ತುಂಬಿಸಬೇಕು. ನಾಲೆಗಳಿಗೆ ನೀರು ಹರಿಸಬೇಕು. ಕೃಷಿ ಪಂಪ್ ಸೆಟ್‌ಗಲಿಗೆ ಬೆಳಗ್ಗೆ 6ರಿಂದ ಸಂಜೆ 6 ರವಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ನೀಡಬೇಕು. ಪ್ರಧಾನಿ ಫಸಲ್ ಬಿಮಾ ಬೆಳೆವಿಮೆ ಪದ್ದತಿ ರೈತರಿಗೆ ಸಹಕಾರಿಯಲ್ಲ. ರೈತರ ಅನುಕೂಲಕ್ಕೆ ತಕ್ಕಂತೆ ನಿಮಯಗಳನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್. ಮೂಕಹಳ್ಳಿ ಮಹದೇವಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಮೂಡ್ಲುಪುರ ಪಟೇಲ್ ಶಿವಮೂರ್ತಿ, ತಾಲೂಕ ಉಪಾಧ್ಯಕ್ಷ ಹಾಲಿನ ನಾಗರಾಜು, ಹೆಗ್ಗೊಠಾರ ಶಿವಸ್ವಾಮಿ, ಕಿನಕಹಳ್ಳಿ ಬಸವಣ್ಣ, ಮಂಜುನಾಥ ಉಡಿಗಾಲ, ಗುರುಪ್ರಸಾದ್, ಗುರು, ಗುರುಮಲ್ಲಪ್ಪ, ಮಹೇಶ, ಗುರುಸಿದ್ದಶೆಟ್ಟಿ, ಸುಧಾಕರ, ಮಲೆಯೂರು ಹರ್ಷ, ಪ್ರವೀಣ್ ಭಾಗವಹಿಸಿದ್ದರು.