Advertisement

ಸಂಕಟಗಳೇ ಸಾವಧಾನ

06:15 PM Jul 16, 2019 | mahesh |

ಎರಡು ತಿಂಗಳ ಹಿಂದೆ ಅವಳ ತಾಯಿ ತೀರಿಕೊಂಡರು. ಅದಕ್ಕೂ ಸ್ವಲ್ಪ ದಿನಗಳ ಮೊದಲು, ಅಕ್ಕ ಹೆರಿಗೆಗಾಗಿ ತವರಿಗೆ ಬಂದಿದ್ದಾಳೆ. ಅಮ್ಮನಿಗೆ ಹೃದಯದ ಕಾಯಿಲೆ ಇತ್ತು. ಆಪರೇಷನ್‌ ಮಾಡಿಸಲು ಹಣ ಹೊಂದಿಸಿಕೊಳ್ಳುವಷ್ಟರಲ್ಲಿ, ಸಾವು ಸಂಭವಿಸಿತ್ತು. ಈ ಮಧ್ಯೆಯೇ ಅಕ್ಕನಿಗೆ ಹೆರಿಗೆಯಾಯಿತು…

Advertisement

ದಿನವೂ ಕಾಲೇಜಿಗೆ ತಪ್ಪದೇ ಬರುವ ವಿದ್ಯಾರ್ಥಿನಿ ಅವತ್ತು ಬಂದಿರಲಿಲ್ಲ. ಗೆಳತಿಯರಲ್ಲಿ ಕಾರಣ ಕೇಳಿದರೆ, “ಮೇಡಂ, ಬಹುಶಃ ಅವಳಿಗೆ ರಾತ್ರಿ ನಿದ್ದೆ ಆಗಿರಲಿಕ್ಕಿಲ್ಲ, ಅದಕ್ಕೇ ಬಂದಿಲ್ಲವೇನೋ’ ಅಂದರು. ನಾನು, “ರಾತ್ರಿ ನಿದ್ದೆ ಆಗಿಲ್ಲ ಅಂದ್ರೆ ಕಾಲೇಜು ತಪ್ಪಿಸಿ ಹಗಲು ನಿದ್ದೆ ಮಾಡೋ ಪ್ಲಾನ್‌ ಇದೆಯಾ ಅವಳದು?’ ಅಂದಾಗ, ಹುಡುಗಿಯರು “ಹೂಂ’ ಎಂದು ತಲೆಯಾಡಿಸಿದರು. ನಾನು ತಮಾಷೆ ಮಾಡಿದರೂ, ಮಕ್ಕಳು ಗಂಭೀರವಾಗಿ ಉತ್ತರಿಸಿದ್ದರು.

ಏನಾಯ್ತು ಅವಳಿಗೆ ಅಂತ ಕೇಳಿದಾಗ, “ಮಗು ರಾತ್ರಿಯೆಲ್ಲ ಕಾಡಿರಬೇಕು. ಅದನ್ನು ಸಮಾಧಾನ ಮಾಡಲು ಆಕೆ ರಾತ್ರಿ ಪೂರ್ತಿ ನಿದ್ದೆ ಮಾಡಿಲ್ಲ ಅಂತ ಕಾಣುತ್ತೆ’ ಅಂತ ಒಗಟಾಗಿ ಉತ್ತರಿಸಿದರು. ಯಾರ ಮಗು, ಏನು ಕಥೆ ಅಂತ ಅರ್ಥವಾಗಲಿಲ್ಲ. ಆಗ ವಿದ್ಯಾರ್ಥಿನಿಯರು ಅವಳ ಮನೆಯ ಕಥೆ ಹೇಳಿದರು.

ಎರಡು ತಿಂಗಳ ಹಿಂದೆ ಅವಳ ತಾಯಿ ತೀರಿಕೊಂಡರು. ಅದಕ್ಕೂ ಸ್ವಲ್ಪ ದಿನಗಳ ಮೊದಲು, ಅಕ್ಕ ಹೆರಿಗೆಗಾಗಿ ತವರಿಗೆ ಬಂದಿದ್ದಾಳೆ. ಅಮ್ಮನಿಗೆ ಹೃದಯದ ಕಾಯಿಲೆ ಇತ್ತು. ಆಪರೇಷನ್‌ ಮಾಡಿಸಲು ಹಣ ಹೊಂದಿಸಿಕೊಳ್ಳುವಷ್ಟರಲ್ಲಿ, ಸಾವು ಸಂಭವಿಸಿತ್ತು. ಈ ಮಧ್ಯೆಯೇ ಅಕ್ಕನಿಗೆ ಹೆರಿಗೆಯಾಯಿತು. ಹೀಗಾಗಿ, ಅಮ್ಮ ಮಾಡಬೇಕಿದ್ದ ಜವಾಬ್ದಾರಿಯೆಲ್ಲಾ ಅವಳ ಹೆಗಲಿಗೇರಿದೆ.

ಅಕ್ಕ ಮತ್ತು ಮಗುವಿನ ಜಳಕಕ್ಕೆ ನೀರು, ಅಡುಗೆ, ಕಸ-ಮುಸುರೆ ತೆಗೆಯುವುದು, ಬಟ್ಟೆ ಒಗೆಯುವುದು… ಹೀಗೆ, ಎಲ್ಲವನ್ನೂ ಅವಳೇ ಮಾಡಬೇಕು. ಒಂದು ತಿಂಗಳ ಮಗು ರಾತ್ರಿ ಮಧ್ಯೆ ಮಧ್ಯೆ ಎಚ್ಚರಾಗಿ ಅತ್ತರೆ, ಅಕ್ಕ ಹಾಗೂ ಈಕೆಯೇ ಸಂಭಾಳಿಸುವುದು. ನಿನ್ನೆಯೂ ಹೀಗೆಯೇ ಆಗಿರಬೇಕು. ಮಗು ರಾತ್ರಿಯೆಲ್ಲ ಕಾಡಿರಬೇಕು. ಹೀಗಾಗಿಯೇ ಆಕೆ ಕಾಲೇಜಿಗೆ ಬಂದಿರಲಿಕ್ಕಿಲ್ಲ. ಈ ಎಲ್ಲ ವಿಷಯವನ್ನೂ ಆಕೆಯೇ ನಮಗೆ ಹೇಳಿದ್ದಾಳೆ. ಪಾಪ, ತುಂಬಾ ಕೆಲಸ ಅವಳಿಗೆ… ಎಂದು ಒಂದೇ ಉಸಿರಿನಲ್ಲಿ ಹೇಳಿದರು.

Advertisement

ವಿದ್ಯಾರ್ಥಿನಿಯ ಕಥೆ ಕೇಳಿ ಪಾಪ ಎನಿಸಿತು. ಅವಳಿನ್ನೂ ಹದಿನೇಳು ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿನಿ. ಇಂಥ ಚಿಕ್ಕ ವಯಸ್ಸಿನಲ್ಲಿ ಅವಳು ಅಮ್ಮನ ಜವಾಬ್ದಾರಿ ಹೊರಬೇಕಾಗಿದೆ. ತಾಯಿಯನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ, ಅದೇ ದುಃಖದಲ್ಲಿಯೇ ಅಕ್ಕನ ಬಾಣಂತನ ಮಾಡಬೇಕಾದ ಅನಿವಾರ್ಯತೆ. ಇದ್ದ ಮಕ್ಕಳಲ್ಲಿ ಈಕೆಯೇ ಕೊನೆಯವಳು. ತಾಯಿ ಎಲ್ಲರನ್ನೂ ಉದ್ಧರಿಸಿ, ಒಂದೆರಡು ವರ್ಷಗಳಲ್ಲಿ ಈಕೆಗೂ ಒಂದು ನೆಲೆ ಕಲ್ಪಿಸುವವಳಿದ್ದಳು. ಅಷ್ಟರಲ್ಲೇ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿಬಿಟ್ಟಿತ್ತು.

ಮಾರನೆಯ ದಿನ ಕಾಲೇಜಿಗೆ ಬರದಿದ್ದಕ್ಕೆ ಕಾರಣ ಕೇಳಿದಾಗ, ವಿಷಯವನ್ನು ಮುಚ್ಚಿಡಲು ಪ್ರಯತ್ನಿಸಿ, ಹುಷಾರಿರಲಿಲ್ಲವೆಂದು ಹೇಳಿದಳು. “ವಿಷಯ ಎಲ್ಲ ಗೊತ್ತಾಗಿದೆ’ ಎಂದಾಗ ಅವಳ ಕಣ್ಣಲ್ಲಿ ದಳದಳ ನೀರು ಸುರಿದೇ ಬಿಟ್ಟಿತ್ತು. ಎಲ್ಲವನ್ನೂ ಕೂಲಂಕಷವಾಗಿ ವಿವರಿಸಿದಳು. ತಾಯಿಯ ಆಪರೇಷನ್‌ಗಾಗಿ ಕಳೆದ ಎರಡು ವರ್ಷಗಳಿಂದ ಹಣ ಸಂಗ್ರಹಿಸಲು ಪಟ್ಟ ಪಾಡು, ಅಮ್ಮನ ಕೊನೆಯ ದಿನದ ಬಗ್ಗೆ ಹೇಳಿದಳು. ಮನೆಯಲ್ಲಿ ಅಪ್ಪ, ಅಜ್ಜಿ ಇದ್ದಾರೆ. ಅಜ್ಜಿಗೆ ವಯಸ್ಸಾಗಿದ್ದು, ಅವರ ಕೆಲಸವನ್ನೂ ಉಳಿದವರೇ ಮಾಡಬೇಕಿದೆ. ಯಾವ ಸಾಂತ್ವನದ ಮಾತುಗಳಿಂದ ಅವಳನ್ನು ಸಮಾಧಾನಿಸುವುದು ಎಂದು ತಿಳಿಯದಾದೆ.

ತಾಯಿ ಬದುಕಿದ್ದರೂ ಈಕೆ ಅಕ್ಕನ ಬಾಣಂತನದಲ್ಲಿ ಕೈ ಜೋಡಿಸಲೇಬೇಕಿತ್ತು. ಆದರೆ, ಇಷ್ಟೊಂದು ಜವಾಬ್ದಾರಿ ಇರುತ್ತಿರಲಿಲ್ಲ. ಹಾಗೆ ನೋಡಿದರೆ, ಕೆಲವೊಂದು ಜವಾಬ್ದಾರಿಗಳು ಹೆಣ್ಣಿಗೆ ಎಂದೂ ತಪ್ಪುವುದಿಲ್ಲ. ಅಂಥ ಜವಾಬ್ದಾರಿಗಳು ಈ ಹುಡುಗಿಯ ಹೆಗಲನ್ನು ವಯಸ್ಸಿಗೆ ಮುಂಚೆಯೇ ಏರಿಬಿಟ್ಟಿವೆ.

ಜೀವನದಲ್ಲಿ ಕಷ್ಟಗಳು ಯಾವಾಗ ಬಂದೆರಗುತ್ತವೆ ಎಂದು ಊಹಿಸಲು ಸಾಧ್ಯವೇ ಇಲ್ಲ. ಎಲ್ಲ ಸರಿಯಾಗಿಯೇ ನಡೆಯುತ್ತಿದೆ ಎನ್ನುವಾಗ ಏನೋ ಒಂದು ಆಗಿಬಿಡುತ್ತದೆ. ಆದರೆ, ಸಾವಿನಂಥ ತೀವ್ರತರ ನೋವನ್ನು ಭರಿಸುವುದು ಅಸಹನೀಯವೇ. ಅಂಥ ಸಂದರ್ಭಗಳಲ್ಲಿ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ನಿಭಾಯಿಸುವುದು ಇನ್ನೂ ಕಠಿಣ. ಅಂಥ ಕಷ್ಟದ ಸಂದರ್ಭಗಳಿಗೆ ಅನಿರೀಕ್ಷಿತವಾಗಿ ಸಿಕ್ಕಿಕೊಳ್ಳುವ ಯಾವ ಹುಡುಗಿಯ ಆತ್ಮಸ್ಥೈರ್ಯವೂ ಕುಸಿಯದಿರಲಿ. ಒಳ್ಳೆಯ ದಿನಗಳು ಜೊತೆಯಾಗಲಿ.

-ಮಾಲಾ ಅಕ್ಕಿಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next