ಸ್ವಾಮಿ ವಿವೇಕಾನಂದರು ಜೇನುತುಪ್ಪವಿದ್ದಂತೆ. ಹಳೆಯದಾದಷ್ಟು ಅಮೃತ. ಇಂದು ಅವರ ಜನ್ಮ ದಿನ. ಪ್ರತಿ ವರ್ಷವೂ ಈ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಪರಿವ್ರಾಜಕನಾಗಿ ದೇಶವೆಂಬ ಕುಟುಂಬ ಕಟ್ಟಿದ ಮಹಾಪುರುಷನ ಕುರಿತು ಸಮುದ್ರವನ್ನು ಬೊಗಸೆಯಲ್ಲಿ ಹಿಡಿಯುವ ಪ್ರಯತ್ನ ‘ಸುದಿನ’ದ್ದು
ಮಕ್ಕಳ ಗುಂಪೊಂದು ನದಿಯನ್ನು ಕಂಡ ಕೂಡಲೇ ಏನು ಮಾಡುತ್ತದೆ?
ಒಂದೇ ಉತ್ತರವೆಂದರೆ, ಎಲ್ಲರೂ ಚಂಗನೆ ನೀರಿಗೆ ಹಾರಿ ಖುಷಿಪಡುತ್ತಾರೆ. ಅದೇ ಅಮೃತ ವಾಹಿನಿ ಹರಿಯುತ್ತಿದ್ದರೆ ನಾವೆಲ್ಲಾ ಏನು ಮಾಡ ಬೇಕು? ಬೊಗಸೆಯೊಡ್ಡಿ ಮನಸಾರೆ ಕುಡಿಯಬೇಕು. ಸ್ವಾಮಿ ವಿವೇಕಾನಂದರು ಅಂಥ ಅಮೃತವಾಹಿನಿ. ನಿತ್ಯವೂ ಹರಿಯುತ್ತಿರುವಂಥವರು. ನಾವು ಬದುಕಿನಲ್ಲಿ ಬಹುತೇಕ ಬಾರಿ ಸಂದರ್ಭವನ್ನು ತೆಗಳುತ್ತಾ ಹೋಗುತ್ತೇವೆ. ಅದು ಪ್ರಯೋಜನವಿಲ್ಲ. ಯಾಕೆಂದರೆ ಸಂದರ್ಭವನ್ನು ನಿರ್ಮಿಸಿಕೊಳ್ಳುವುದು ನಾವೇ. ಇದು ವಿವೇಕಾನಂದರ ಬದುಕಿನ ಸಾರದಲ್ಲಿ ಪ್ರಮುಖವಾದುದು. ನಾವು ಕಲಿಯುವುದು ಏನನ್ನು? ಮತ್ತು ಅದನ್ನು ಅನ್ವಯಿಸುವ ಬಗೆ ಎಂಥದ್ದು? ಸಂಸ್ಕೃತಿ ಎಂಬುದು ಎಲ್ಲಿದೆ? ಇಂಥವುಗಳಿಗೆಲ್ಲಾ ಬೇಕಾದಷ್ಟು ಉತ್ತರವಿದೆ.
ಸ್ವಾಮಿ ವಿವೇಕಾನಂದರು ಅಂತಾರಾಷ್ಟ್ರೀಯ ಧರ್ಮ ಸಮ್ಮೇಳನಕ್ಕೆ ಹೊರಡಲು ಸಿದ್ಧತೆ ನಡೆಸುತ್ತಿರುವಾಗ ತನ್ನ ಮಗ ಈ ಮಿಷನ್‌ಗೆ ಪರಿಪೂರ್ಣನಾಗಿ ತರಬೇತುಗೊಂಡಿದ್ದಾನೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕೆನಿಸುತ್ತದೆ. ಆ ಹಿನ್ನೆಲೆಯಲ್ಲಿ ಭೋಜನಕ್ಕೆ ಕರೆಯುತ್ತಾಳೆ ತಾಯಿ. ವಿವೇಕಾನಂದರು ಬಂದಾಗ ಅವರಿಗೆ ಇಷ್ಟವಾದ ಅಡುಗೆಯನ್ನು ಬಡಿಸುತ್ತಾಳೆ. ಊಟ ಮುಗಿದ ಮೇಲೆ ಹಣ್ಣು ಮತ್ತು ಚಾಕುವನ್ನು ಕೊಟ್ಟು ತಿನ್ನು ಎಂದು ಕೊಡುತ್ತಾಳೆ. ಅದರಂತೆ ವಿವೇಕಾನಂದರು ಹಣ್ಣನ್ನು ಕತ್ತರಿಸಿ ತಿಂದು ಮುಗಿಸುತ್ತಾರೆ. ಆಗ ಅಮ್ಮ, ‘ಎಲ್ಲಿ ಮಗು, ಆ ಚಾಕುವನ್ನು ಕೊಡು’ ಎಂದು ಕೇಳಿದಾಗ ವಿವೇಕಾನಂದರು ಚಾಕುವನ್ನು ಹಸ್ತಾಂತರಿಸುತ್ತಾರೆ. ಅದಕ್ಕೆ ಅಮ್ಮ ಸಂಪ್ರೀತಳಾಗಿ, ‘ನೀನು ನನ್ನ ಪರೀಕ್ಷೆಯಲ್ಲಿ ಗೆದ್ದಿದ್ದೀಯ. ಹೋಗು, ನಮ್ಮ ಸಂಸ್ಕೃತಿ ಕುರಿತು ಪ್ರಚಾರ ಮಾಡಿ ಬಾ’ ಎಂದು ಹರಸುತ್ತಾಳೆ. ವಿವೇಕಾನಂದರಿಗೆ ಇದನ್ನು ಕೇಳಿ ಅಚ್ಚರಿಯಾಗುತ್ತದೆ. ಅಮ್ಮ ನನ್ನನ್ನು ಹೇಗೆ ಪರೀಕ್ಷಿಸಿದಳು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆಗ ಅಮ್ಮಾ, ‘ನೀನು ನನ್ನನ್ನು ಪರೀಕ್ಷಿಸಿದ ಬಗೆ ಎಂಥದ್ದು?’ ಎಂದು ಕೇಳಿದರು. ‘ಚಾಕುವಿನ ಹರಿತವಾದ ತುದಿಯನ್ನು ನಿನ್ನೆಡೆಗೆ ಇರಿಸಿಕೊಂಡು ಮರದ ಹಿಡಿಯ ತುದಿಯನ್ನು ನನಗೆ ಕೊಟ್ಟೆ. ಇದೇ ನಮ್ಮ ಸಂಸ್ಕೃತಿ’ ಎಂದು ಮನಸಾರೆ ಆಶೀರ್ವದಿಸಿದರಂತೆ.
ಈ ಕಥೆಯಲ್ಲಿನ ವಿವೇಕಾನಂದರ ನಡವಳಿಕೆ ನಮ್ಮ ಶಿಕ್ಷಣ, ನಮ್ಮ ಅನ್ವಯ ಜ್ಞಾನ ಹಾಗೂ ಸಂಸ್ಕೃತಿ ಎಲ್ಲದರ ಬಗ್ಗೆಯೂ ವಿವರಿಸುತ್ತದೆ. ಇದೇ ಸಾಮಾನ್ಯ ಮತ್ತು ಅಸಾಮಾನ್ಯನ ನಡುವೆ ಪ್ರತ್ಯೇಕಿಸುವ ಗೆರೆ. ಪರರ ಹಿತದ ಬಗ್ಗೆ ಮೊದಲು ಯೋಚಿಸುವವನು ಆದರ್ಶ ವ್ಯಕ್ತಿ. ನಿಜವಾದ ಆದರ್ಶ ವ್ಯಕ್ತಿಯೆಂದರೆ ತನ್ನ ಬದುಕಿಗೆ ಸಣ್ಣದೊಂದು ವ್ಯತ್ಯಯ ಉಂಟುಮಾಡಿದರೂ ಪರವಾಗಿಲ್ಲ; ಉಳಿದವರ ಬದುಕಿಗೆ ಯಾವ ಧಕ್ಕೆಯೂ ಆಗಬಾರದೆಂದು ಯೋಚಿಸಿ ಕ್ರಿಯಾಶೀಲವಾಗುವವ. ಅದೇ ಗುಣ ಸಾರ್ವಕಾಲಿಕವಾಗಿ ಪರಿಗಣನೆಗೆ ಬರುವಂಥದ್ದು. ಸ್ವಾಮಿ ವಿವೇಕಾನಂದರು ಆ ನೆಲೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವವರು. ತಮ್ಮ ಬದುಕನ್ನು ಭಾರತೀಯ ಸಂಸ್ಕೃತಿಯ ಪ್ರಚಾರಕ್ಕೆ ಮುಡಿಪಾಗಿಟ್ಟವರು. ವ್ಯಕ್ತಿಗೆ ವ್ಯಕ್ತಿತ್ವ ಮುಖ್ಯವೆಂಬುದು ಇಂದಿಗೂ ಪ್ರಸ್ತುತವಾದ ಪ್ರತಿಪಾದನೆ. ವ್ಯಕ್ತಿಯ ಭೌತಿಕ ಪ್ರದರ್ಶನಕ್ಕಿಂತಲೂ ಅಂತರಂಗದ ನಡವಳಿಕೆ ಎಲ್ಲರನ್ನೂ ಸಮ್ಮೋಹಗೊಳಿಸಬಲ್ಲದು. ಅಂತರಂಗದ ಪರಿಮಳ ಎಲ್ಲೆಲ್ಲೂ ಪಸರಿಸಬೇಕು. ವ್ಯಕ್ತಿಗೆ ಸಾವಿದೆ; ವ್ಯಕ್ತಿತ್ವ ಅಮರ. ಅದಕ್ಕೇ ಇಂದಿಗೂ ನಾವು ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವನ್ನು ಸ್ಮರಿಸುತ್ತಿದ್ದೇವೆ; ವ್ಯಕ್ತಿಯನ್ನಲ್ಲ.
ಒಮ್ಮೆ ಬ್ರಿಟನ್ ಪ್ರವಾಸದಲ್ಲಿದ್ದಾಗ ಒಬ್ಬ ಇಂಗ್ಲಿಷಿನವನು ಸ್ವಾಮಿ ವಿವೇಕಾನಂದರನ್ನು ಕುರಿತು, ‘ನೀನು ಯಾಕೆ ದೊಡ್ಡ ಮನುಷ್ಯನ ಹಾಗೆ ಒಳ್ಳೆ ಉಡುಪನ್ನು ಧರಿಸುವುದಿಲ್ಲ?’ ಎಂದು ಕೇಳಿದನಂತೆ. ಅದಕ್ಕೆ ವಿವೇಕಾನಂದರು, ‘ನಿಮ್ಮ ದೇಶದಲ್ಲಿ ಒಬ್ಬ ಟೈಲರ್ ದೊಡ್ಡ ಮನುಷ್ಯನನ್ನು ನಿರ್ಮಾಣ ಮಾಡುತ್ತಾನೆ. ನಮ್ಮ ಸಂಸ್ಕೃತಿಯಲ್ಲಿ ವ್ಯಕ್ತಿತ್ವ ದೊಡ್ಡ ಮನುಷ್ಯರನ್ನು ನಿರ್ಮಿಸುತ್ತದೆ’ ಎಂದರಂತೆ. ಅಲ್ಲಿಗೆ ಪ್ರತಿ ವ್ಯಕ್ತಿಗೂ ವ್ಯಕ್ತಿತ್ವವೇ ಮುಕುಟಪ್ರಾಯ. ನಾವೀಗ ಎಂದಿಗೂ ಬತ್ತದ ಸ್ವಾಮಿವಿವೇಕಾನಂದರೆಂಬ ಅಮೃತ ವಾಹಿನಿಯಿಂದ ಬೊಗಸೆ ತುಂಬಾ ತುಂಬಿಕೊಳ್ಳುವ ಕಾಲವಿದು.
”ನೀವು ಪರಿಶುದ್ಧರಾಗಿ, ಸಹಾಯವನ್ನು ಕೋರಿ ನಿಮ್ಮ ಬಳಿಗೆ ಬಂದವರಿಗೆ ಸಾಧ್ಯವಾದ ಸಹಾಯ ಮಾಡಿ. ಇದು ಪುಣ್ಯ, ಕರ್ಮ. ಇದರಿಂದ ಚಿತ್ತ ಶುದ್ಧಿಯಾಗುವುದು, ಸರ್ವರಲ್ಲಿ ನೆಲೆಸಿರುವ ಭಗವಂತ ವ್ಯಕ್ತನಾಗುವನು.”
– ಸ್ವಾಮಿ ವಿವೇಕಾನಂದ