ಮಹಾನಗರ : ಕುಂಟಿಕಾನ ಫ್ಲೈ ಓವರ್ ನಿಂದ ಲೋಹಿತ್ ನಗರಕ್ಕೆ ಸಂಪರ್ಕ ಕಲ್ಪಿಸುವ ಕಾರು ಶೋರೂಂ ಎದುರಿದ ಸರ್ವಿಸ್ ರಸ್ತೆ ಮಧ್ಯೆ ಮ್ಯಾನ್ ಹೋಲ್ ಸುತ್ತ ದೊಡ್ಡ ಗುಂಡಿಯಾಗಿ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿತ್ತು. ಈ ಬಗ್ಗೆ ‘ಹೆದ್ದಾರಿ ಬದಿ ಅಪಾಯ ಆಹ್ವಾನಿಸುವ ಮರಣ ಬಾವಿ’ ಎಂಬ ಶೀರ್ಷಿಕೆಯಲ್ಲಿ ‘ಸುದಿನ’ ಜೂ. 27ರಂದು ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಪಾಲಿಕೆ ಸದ್ಯ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದೆ. ಕಳೆದ ತಿಂಗಳು ನಗರದಲ್ಲಿ ಬಂದಂತಹಾ ಜೋರಾದ ಮಳೆಗೆ ರಸ್ತೆ ಮಧ್ಯೆ ಮ್ಯಾನ್ ಹೋಲ್ ಸುತ್ತ ದೊಡ್ಡದಾದ ಗುಂಡಿ ಬಿದ್ದಿತ್ತು. ಈ ಬಗ್ಗೆ ಸಾರ್ವಜನಿಕರು ಸ್ಥಳೀಯ ಕಾರ್ಪೊರೇಟರ್ ಮತ್ತು ಪಾಲಿಕೆಗೆ ಮನವಿ ಸಲ್ಲಿಸಿದರೂ ಗುಂಡಿ ಮುಚ್ಚುವ ಕಾರ್ಯ ನಡೆಸಲಿಲ್ಲ. ಅಲ್ಲದೆ, ಗುಂಡಿಯ ಸುತ್ತ ಮುನ್ನೆಚ್ಚರಿಕೆ ದೃಷ್ಟಿಯಿಂದ ನಾಲ್ಕು ಬದಿಗಳಲ್ಲಿ ಬ್ಯಾರಿಕೇಡ್ ಕೂಡ ಅಳವಡಿಸಲಿಲ್ಲ.
ವರದಿಗೆ ಸ್ಪಂದನೆ
ಇದೀಗ ಪಾಲಿಕೆ ಎಚ್ಚೆತ್ತುಕೊಂಡಿದ್ದು, ಬುಧವಾರ ಬೆಳಗ್ಗೆ ಕಾಮಗಾರಿ ಆರಂಭಿಸಿದೆ. ಈ ಗುಂಡಿಯೊಳಗೆ ಜಲ್ಲಿ ಮತ್ತು ಸಿಮೆಂಟ್ ಹಾಕಿ ಗುಂಡಿ ಮುಚ್ಚುವ ಕಾಮಗಾರಿ ನಡೆಸಿದೆ. ಮುಂಜಾಗೃತಾ ದೃಷ್ಟಿಯಿಂದ ಗುಂಡಿ ಸುತ್ತಲೂ ಬ್ಯಾರಿಕೇಡ್ ಅಳವಡಿಸಿದೆ. ಜತೆಗೆ ಟೇಪ್‌ನಿಂದ ಸುತ್ತುವರಿದಿದೆ. ಈ ಬಗ್ಗೆ ಪಾಲಿಕೆ ಎಂಜಿನಿಯರ್ ಗುಣಪಾಲ್ ಅವರು ‘ಸುದಿನ’ಕ್ಕೆ ಪ್ರತಿಕ್ರಿಯಿಸಿ, ಗುಂಡಿ ಬಿದ್ದಂತಹಾ ಜಾಗದಲ್ಲಿ ಕಾಮಗಾರಿ ಪ್ರಾರಂಭಿಸಿದ್ದೇವೆ. ಮಳೆ ಇದ್ದ ಕಾರಣ ಕಾಮಗಾರಿ ತಡವಾಗಿ ಪ್ರಾರಂಭವಾಯಿತು. ಗುಂಡಿ ಬಿದ್ದ ಜಾಗಕ್ಕೆ ಸಿಮೆಂಟ್ ಮತ್ತು ಜಲ್ಲಿ ಹಾಕಲಾಗಿದೆ ಎಂದಿದ್ದಾರೆ.