Advertisement

ಸಾಕಾರದ ನಿರೀಕ್ಷೆಯಲ್ಲಿ ಮೇಲ್ದರ್ಜೆ ಬೇಡಿಕೆ

08:16 PM Apr 13, 2017 | Karthik A |

ಮಹಾನಗರ: ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲ ಸುಮಾರು 6 ಜಿಲ್ಲೆಗಳ ಬಡ ರೋಗಿಗಳ ಪಾಲಿಗೆ ಆಶಾಕಿರಣವಾದ ಲೇಡಿಗೋಶನ್‌ ಆಸ್ಪತ್ರೆಯನ್ನು 500 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆಗೆ ಪೂರಕವಾಗಿ ಇತರ ಸೌಲಭ್ಯಗಳು ನಿರ್ಮಾಣವಾಗುತ್ತಿದ್ದು, ಸರಕಾರ ಒಪ್ಪಿಗೆ ನೀಡಬೇಕಿದೆ. ಕಟ್ಟಡ ಸಾಮರ್ಥ್ಯ ಹೆಚ್ಚಳ ಸಹಿತ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರ 500 ಹಾಸಿಗೆ ಸಾಮರ್ಥ್ಯಕ್ಕೇರಿಸಿ ಒಪ್ಪಿಗೆ ನೀಡಿದರೆ ನೂರಾರು ಜನರಿಗೆ ಅನುಕೂಲವಾಗಲಿದೆ. ಆಸ್ಪತ್ರೆಯಲ್ಲಿ  ಪ್ರಸ್ತುತ 272 ಹಾಸಿಗೆಗಳಿವೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಂದ  ವಾರ್ಷಿಕ 50 ಸಾವಿರಕ್ಕಿಂತಲೂ ಅಧಿಕ ಹೊರ ರೋಗಿಗಳು,  ಸುಮಾರು 15 ಸಾವಿರ ಒಳರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. 

Advertisement

ಸರಕಾರಿ ಆಸ್ಪತ್ರೆಯಾದರೂ ತಜ್ಞ ವೈದ್ಯರು, ಉತ್ತಮ ಸೌಲಭ್ಯ ಇರುವುದರಿಂದ ಬಡವರ್ಗದ ಮಹಿಳೆಯರು ಇಲ್ಲಿಗೆ ಚಿಕಿತ್ಸೆಗೆಂದು ಬರುತ್ತಿದ್ದು, ವಾರ್ಷಿಕ 7 ಸಾವಿರದಷ್ಟು ಹೆರಿಗೆಗಳಾಗುತ್ತಿವೆ. ಆಸ್ಪತ್ರೆಯ ಆವರಣದಲ್ಲೇ ರೆಡ್‌ಕ್ರಾಸ್‌ ಸಂಸ್ಥೆಯ ಬ್ಲಿಡ್‌ ಬ್ಯಾಂಕ್‌ ಇದೆ. ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಹಾಸಿಗೆ ಸಾಮರ್ಥ್ಯವನ್ನು ಏರಿಸಬೇಕೆಂಬುದು ನಾಗರಿಕರ ಬೇಡಿಕೆ. ಈಗ ರೋಗಿಗಳ ಸಂಖ್ಯೆ ಜಾಸ್ತಿಯಾದಾಗ ಹಾಸಿಗೆಗಳನ್ನು ಹೊಂದಿಸುವುದೇ ದೊಡ್ಡ ಸಮಸ್ಯೆ. ಒಳರೋಗಿ ಸಾಮರ್ಥ್ಯವನ್ನು ಕನಿಷ್ಠ 500ಕ್ಕಾದರೂ ಏರಿಸಿದರೆ ಈ ಸಮಸ್ಯೆಗೆ ಕೊಂಚ ಪರಿಹಾರ ಸಿಗಲಿದೆ. ಜತೆಗೆ ಹಲವಾರು ಬಡ ಕುಟುಂಬಗಳಿಗೆ ಪ್ರಯೋಜನವಾಗಲಿದೆ.

60 ಹಾಸಿಗೆಗಳ ಎಂಸಿಎಚ್‌ ಬ್ಲಾಕ್‌
ಪ್ರಸ್ತುತ ಆಸ್ಪತ್ರೆಯ ಆವರಣದಲ್ಲಿ ಕೇಂದ್ರ ಸರಕಾರದ ಎನ್‌ಆರ್‌ಎಚ್‌ಎಂ ಯೋಜನೆಯಡಿ ನಿರ್ಮಾಣವಾಗುತ್ತಿರುವ 10.46 ಕೋ.ರೂ. ವೆಚ್ಚದ‌ ಎಂಸಿಎಚ್‌ ( ತಾಯಿ ಮತ್ತು ಮಗು ಆರೋಗ್ಯ ) ವಿಭಾಗ 60 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. ಸೆಲ್ಲರ್‌, ನೆಲಮಹಡಿ ಹಾಗೂ 1ನೇ ಮಹಡಿಯನ್ನು ಒಳಗೊಂಡಿದ್ದು ಒಟ್ಟು 3,989 ಚ.ಮಿ. ವಿಸ್ತೀರ್ಣ ಹೊಂದಿದೆ. ಸೆಲ್ಲರ್‌ನಲ್ಲಿ ಆಡುಗೆ ಕೋಣೆ, ಔಷಧ ಮಳಿಗೆ ಇರಲಿದ್ದು, 756 ಚದರ ಮೀ. ವಿಸ್ತೀರ್ಣವಿದೆ. ನೆಲಮಹಡಿ ಹಾಗೂ ಮೊದಲ ಮಹಡಿಯಲ್ಲಿ ವಾರ್ಡ್‌, ಒಪಿಡಿ, ಶಸ್ತ್ರಚಿಕಿತ್ಸಾ ಕೊಠಡಿ, ಕನ್ಸಲ್ಟೆನ್ಸಿ ವಿಭಾಗಗಳಿರುತ್ತವೆ. ಮುಂದಿನ ವರ್ಷ ಸಾರ್ವಜನಿಕರಿಗೆ ಈ ವಿಭಾಗ ಲಭ್ಯವಾಗುವ ಸಾಧ್ಯತೆಯಿದೆ. ಇದು ಬಳಕೆಗೆ ನಿಲುಕಿದರೆ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳಿಗೆ ಲೇಡಿಗೋಷನ್‌ ಅನ್ನು ಅಶ್ರಯಿಸುವವರು ಕಡಿಮೆಯಾಗಬಹುದು. 

ಹೊಸ ಕಟ್ಟಡ 3 ತಿಂಗಳಲ್ಲಿ ಕಾರ್ಯಾರಂಭ ನಿರೀಕ್ಷೆ
ಒಎನ್‌ಜಿಸಿ- ಎಂಆರ್‌ಪಿಎಲ್‌ ನೆರವಿ ನೊಂದಿಗೆ 21.70 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ  ಹೊಸ ಕಟ್ಟಡ 3 ತಿಂಗಳೊಳಗೆ ಕಾರ್ಯಾರಂಭ ಮಾಡುವ ನಿರೀಕ್ಷೆ  ಇದೆ. 1.30 ಲಕ್ಷ ಚದರ ಅಡಿ ವಿಸ್ತೀರ್ಣದ 5 ಮಹಡಿಗಳ ಈ ಕಟ್ಟಡದಲ್ಲಿ 226 ಹಾಸಿಗೆಗಳು, ಅತ್ಯಾಧುನಿಕ ಸೌಲಭ್ಯಗಳನ್ನು   ಒಳಗೊಂಡಿದೆ. ಸೌಲಭ್ಯ ಹಾಗೂ ಸಲಕರಣೆಗಳ ಅಳವಡಿಕೆಗೆ ರಾಜ್ಯ ಸರಕಾರದಿಂದ ಈಗಾಗಲೇ 10 ಕೋ.ರೂ. ಬಿಡುಗಡೆಯಾಗಿದೆ. ಇದು ಉದ್ಘಾಟನೆಯಾದ ಬಳಿಕ  ಈಗ ಇರುವ ಹಳೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಬಹುತೇಕ ವಿಭಾಗಗಳು ಇಲ್ಲಿಗೆ ವರ್ಗಾವಣೆಯಾಗಲಿವೆ.

500 ಬೆಡ್‌ಗೆ ಸ್ಥಳಾವಕಾಶ ಸಾಧ್ಯ
ಈಗ ಇರುವ  ಹಳೆ ಕಟ್ಟಡದಲ್ಲಿ ಮತ್ತು  ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿ 500 ಹಾಸಿಗೆಗಳನ್ನು ಅಳವಡಿಸಲು ಸಾಧ್ಯವಿದೆ. ಹೊಸ ಕಟ್ಟಡದಲ್ಲಿ ಅತ್ಯಾಧುನಿಕ ಸೌಲಭ್ಯಗಳೂ ಲಭ್ಯವಾಗಲಿವೆ. ಅದುದರಿಂದ 500 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸರಕಾರಕ್ಕೆ ಹೆಚ್ಚಿನ ಹೊರೆಯಾಗದು. ಈ ನಿಟ್ಟಿನಲ್ಲಿ ಸರಕಾರದಿಂದ ಮಂಜೂರಾತಿ ಪಡೆಯುವ ನಿಟ್ಟಿನಲ್ಲಿ ಪೂರಕ ಕ್ರಮಗಳು ಅವಶ್ಯವಿದೆ.

Advertisement

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next