Advertisement

ಪರೀಕ್ಷೆ: ಕೊನೆ ಕ್ಷಣದ ತಯಾರಿಗೆ ಇರಲಿ ಸಿದ್ಧತೆ

03:02 PM Mar 13, 2017 | Team Udayavani |

ಪರೀಕ್ಷೆ ಬರೆಯಲು ದಿನಗಣನೆ ಆರಂಭವಾಗಿದೆ. ಕೊನೆ ಕ್ಷಣದಲ್ಲಿ ಎಲ್ಲವನ್ನೂ ಓದಿ ಮುಗಿಸುವ ತವಕ ಒಂದೆಡೆಯಾದರೆ, ಓದಿದ್ದೆಲ್ಲ ಪರೀಕ್ಷೆ ವೇಳೆ ನೆನಪಿನಲ್ಲಿ ಉಳಿಯುತ್ತದೋ ಇಲ್ಲವೋ ಎಂಬ ಆತಂಕ ಇನ್ನೊಂದೆಡೆ. ಅದಕ್ಕಾಗಿ ಪರೀಕ್ಷೆಯ ಕೊನೆ ಕ್ಷಣದ ತಯಾರಿಗೂ ಸಿದ್ಧತೆ ಮಾಡಿಟ್ಟುಕೊಂಡರೆ ಪರೀಕ್ಷೆ ಬರೆಯುವುದು ಸುಲಭ.

Advertisement

ಸ್ಕೂಲ್‌ ಡೇ, ಕಾಲೇಜ್‌ ಡೇ, ಬೀಳ್ಕೊಡುಗೆ ಸಮಾರಂಭಗಳ ಗುಂಗಿನಲ್ಲಿ ಮುಳುಗಿರುವ ನಡುವೆಯೇ ಸದ್ದಿಲ್ಲದೆ ಪರೀಕ್ಷೆಗೆ ತಯಾರಿ ನಡೆಸುವ ಕಾಲ ಹತ್ತಿರಬಂದಾಗಿದೆ. ಅಲ್ಪಾವಧಿಯಲ್ಲಿ  ಹೆಚ್ಚು ಓದಬೇಕು ಎಂಬ ಚಿಂತೆ ಒಂದು ಕಡೆಯಾದರೆ, ಯಾವ ರೀತಿ ಓದಬೇಕು, ಯಾವ ವಿಷಯಕ್ಕೆ ಹೆಚ್ಚು ಆದ್ಯತೆ ಕೊಡಬೇಕು, ಯಾವ ಟೈಮ್‌ನಲ್ಲಿ ಓದಬೇಕು ಇತ್ಯಾದಿ ಗೊಂದಲಗಳು ಏಳ್ಳೋದು ಸಹಜ. ಹೀಗಾಗಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಕೆಲವೊಂದು ಮಾಹಿತಿ ಇಲ್ಲಿವೆ.

ಓದುವ ರೀತಿ ನೀತಿಗಳು ಒಬ್ಬೊಬ್ಬರದ್ದು ಒಂದೊಂದು ತೆರನಾಗಿರುತ್ತದೆ. ಪರೀಕ್ಷೆ  ಹತ್ತಿರದಲ್ಲಿದೆ ಎಂಬ ಭಯ, ಗೊಂದಲದಲ್ಲಿ ಓದುವ ರೀತಿನೀತಿಗಳನ್ನು ಬದಲಾಯಿಸಿ, ಕೊನೆಗೆ ಯಾವುದನ್ನೂ ಸರಿಯಾಗಿ ಓದಲಾಗದೆ ನಿರಾಶರಾಗಬೇಕಾಗುತ್ತದೆ ಮಾತ್ರವಲ್ಲ ಪರೀಕ್ಷೆಯ ಫ‌ಲಿತಾಂಶದ ಮೇಲೂ ಗಂಭೀರ ಪರಿಣಾಮಗಳಾಗಬಹುದು. ಮೊತ್ತ ಮೊದಲನೆಯದಾಗಿ ಪರೀಕ್ಷೆಗೆ ಇನ್ನೆಷ್ಟು ದಿನವಿದೆ. ಪರೀಕ್ಷೆ ವೇಳೆಯಲ್ಲಿ ಪ್ರತಿ ವಿಷಯದ ನಡುವೆ ಎಷ್ಟು ರಜೆ ಸಿಗುತ್ತೆ ಎಂಬುದನ್ನು ಲೆಕ್ಕ ಹಾಕಿ. 

ಅನಂತರ ಯಾವ ಸಬ್ಜೆಕ್ಟ್ ಗೆ ರಜೆ ಸಿಗುತ್ತೋ ಆ ಸಬ್ಜೆಕ್ಟ್ 1- 2 ಬಾರಿ ಈಗಲೇ ರಿವಿಶನ್‌ ಮಾಡಿಕೊಳ್ಳಿ. ಉಳಿದಂತೆ ಪ್ರತಿ ಸಬ್ಜೆಕ್ಟ್ ಗೆ 1- 2 ದಿನದಂತೆ ಡಿವೈಡ್‌ ಮಾಡಿ ಓದಲು ಪ್ರಾರಂಭಿಸಿ. ಒಂದು ದಿನದಲ್ಲಿ ಒಂದು ಸಬ್ಜೆಕ್ಟ್ ಗೆ ಮಾತ್ರ ಪ್ರಾಶಸ್ತ್ಯ ಕೊಡಿ. ಇಲ್ಲವಾದರೆ ಗೊಂದಲಗಳಾಗಿ ಪರೀಕ್ಷೆ ವೇಳೆಯಲ್ಲಿ ಉತ್ತರಗಳು ಮರೆತು ಹೋಗಬಹುದು ಅಥವಾ ಯಾವುದೋ ಪಠ್ಯದ ಉತ್ತರವನ್ನು ಇನ್ನಾವುದೋ ಪ್ರಶ್ನೆಗೆ ಬರೆಯುವ ಸಾಧ್ಯತೆಗಳಿರುತ್ತವೆ. ಒಂದು ಬಾರಿ ಎಲ್ಲ ಸಬ್ಜೆಕ್ಟ್ ಓದಿ ಮುಗಿಸಿದ ಮೇಲೆ ಮತ್ತೆಮತ್ತೆ ರಿವಿಶನ್‌ಗೆ ಆದ್ಯತೆ ನೀಡಿ. ಪ್ರತಿ ವಿಷಯವನ್ನು ಓದುವಾಗ ಪೆನ್ನು, ಪೇಪರ್‌, ಪೆನ್ಸಿಲ್‌ ಹತ್ತಿರದಲ್ಲಿರಲಿ. ಓದುತ್ತಿರುವಾಗ ಮುಖ್ಯವಾದ ವಿಚಾರಗಳನ್ನು ಪಾಯಿಂಟ್‌ ಮಾದರಿಯಲ್ಲಿ ನೋಟ್‌ ಮಾಡಿಕೊಳ್ಳಿ. ಪೆನ್ಸಿಲ್‌ನಿಂದ ನೋಟ್ಸ್‌/ ಪಠ್ಯಪುಸ್ತಕದಲ್ಲಿ ಮಾರ್ಕ್‌ ಮಾಡಿಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ಪಾಯಿಂಟ್‌ ಮಾದರಿಯಲ್ಲಿ ನೋಟ್‌ ಮಾಡಿಕೊಂಡರೆ ಓದಿದ ವಿಷಯ ಹೆಚ್ಚು ಸಮಯ ನೆನಪಿನಲ್ಲಿರಲು ಸಾಧ್ಯ.

ಪರೀಕ್ಷೆಗೆ  1- 2 ದಿನವಿದ್ದರೆ ಬೇರೆ ಸಬ್ಜೆಕ್ಟ್ ಓದಲು ಹೋಗಬೇಡಿ. ಮೊದಲಿಗೆ ಯಾವ ಪರೀಕ್ಷೆ ಇದೆ. ಅದಕ್ಕೆ ಚೆನ್ನಾಗಿ ಸಿದ್ಧಪಡಿಸಿಕೊಳ್ಳಿ. ನೀವು ಮಾಡಿಕೊಂಡಿರುವ ಪಾಯಿಂಟರ್‌ಗಳನ್ನೇ ಹಿಡಿದು ನೆನಪು ಮಾಡಿಕೊಂಡು ಓದಲು ಪ್ರಯತ್ನಿಸಿ. ಕೆಲವರಿಗೆ ಬೆಳಗ್ಗೆ ಬೇಗ ಎದ್ದು ಓದುವ ಹವ್ಯಾಸವಿದ್ದರೆ, ಇನ್ನು ಕೆಲವರಿಗೆ ರಾತ್ರಿ ತಡರಾತ್ರಿವರೆಗೂ ಕುಳಿತು ಓದುವ ಅಭ್ಯಾಸವಿರುತ್ತದೆ. ಪರೀಕ್ಷೆ ಹತ್ತಿರವಿದೆ ಎಂದಾಗ ನಿಮ್ಮ ಅಭ್ಯಾಸ ಕ್ರಮವನ್ನು ಬದಲಿಸಲು ಹೋಗಬೇಡಿ. ಇದರಿಂದ ಆರೋಗ್ಯದ ಮೇಲೂ ಪರಿಣಾಮವಾಗುವ ಸಾಧ್ಯತೆಗಳಿರುತ್ತವೆ. ಆಹಾರ ಕ್ರಮವನ್ನು ಸರಿಯಾಗಿ ಪಾಲಿಸಿ. ನಿದ್ದೆಗೆಟ್ಟು, ಊಟ ಬಿಟ್ಟು ಓದುವ ಗೋಚಿಗೆ ಹೋಗಬೇಡಿ. ಸಾಧ್ಯವಾದಷ್ಟು ಮನೆಯ ಆಹಾರಕ್ಕೆ ಪ್ರಾಶಸ್ತ್ಯ ಕೊಡಿ. ಹೊರಗಿನ ಆಹಾರವನ್ನು ಆದಷ್ಟು ಕಡಿಮೆ ಮಾಡಿ. ಕೆಲವರಿಗೆ ಓದುತ್ತಾ ಜಂಕ್‌ ಫ‌ುಡ್‌ಗಳನ್ನು ತಿನ್ನುವ ಅಭ್ಯಾಸವಿರುತ್ತದೆ. ಇದನ್ನು ಕಡಿಮೆ ಮಾಡಿ. 

Advertisement

ನಿರಂತರ ಓದುವುದರಿಂದಲೂ ಮನಸ್ಸಿನ ಮೇಲೆ ಒತ್ತಡ ಬೀಳುತ್ತದೆ. ಹೀಗಾಗಿ ಅರ್ಧ ಗಂಟೆ, ಒಂದು ಗಂಟೆಗೊಮ್ಮೆ ಬ್ರೇಕ್‌ ತೆಗೆದುಕೊಂಡು 5- 10 ನಿಮಿಷ ವಾಕಿಂಗ್‌ ಹೋಗಿ ಬನ್ನಿ. ಇದರಿಂದ ಮನಸ್ಸು ರಿಲ್ಯಾಕ್ಸ್‌ ಆಗುತ್ತೆ. ಕೆಲವರಿಗೆ ಓಡಾಡಿಕೊಂಡು ಓದುವವರಿದ್ದಾರೆ. ಅವರಿಗೆ ಇದು ಅನ್ವಯವಾಗುವುದಿಲ್ಲ. ಅಂತವರು ಸ್ವಲ್ಪ ಹೊತ್ತು ಧ್ಯಾನ ಮಾಡಿಕೊಂಡು ಕುಳಿತುಕೊಳ್ಳಬಹುದು. ಇದರಿಂದ ದೇಹದ, ಮನಸ್ಸಿನ ಬಳಲಿಕೆ ಕಡಿಮೆಯಾಗುವುದು. ಒಟ್ಟಿನಲ್ಲಿ  ಪರೀಕ್ಷೆ ಸಮಯವೆಂದರೆ ಟೆನ್ಶನ್‌ ಮಾಡಿಕೊಳ್ಳುವ ಅವಧಿಯಲ್ಲ. ಸಿದ್ಧಪಡಿಸಿದ ವೇಳಾಪಟ್ಟಿಯಂತೆ ಓದಿ; ರಿಲಾಕ್ಸ್‌ ಆಗಿ ಬರೆಯಿರಿ.

– ವಿಕೆ

Advertisement

Udayavani is now on Telegram. Click here to join our channel and stay updated with the latest news.

Next