Advertisement

ವಾಟರ್‌ ಪ್ಯೂರಿಫೈಯರ್‌: ನೀರಿನ ಶುದ್ಧತೆಗೆ ಗ್ಯಾರಂಟಿ

12:27 AM Apr 13, 2017 | Karthik A |

ಕುಡಿಯುವ ನೀರು ಶುದ್ಧವಾಗಿರಬೇಕು. ಇಲ್ಲವಾದರೆ ಕಾಯಿಲೆ ಗ್ಯಾರಂಟಿ. ನೀರನ್ನು ಎಷ್ಟೇ ಬಾರಿ ಬಿಸಿ ಮಾಡಿದರೂ ನೀರು ಶುದ್ಧವಾಗಿದೆಯೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟವಾಗಿ ಹೇಳುವುದು ಅಸಾಧ್ಯ. ನೀರಿನ ಶುದ್ಧತೆಯನ್ನು ಪರಿಶೀಲಿಸಲು ಮತ್ತು ನಮಗೆ ಈ ಬಗ್ಗೆ ಗ್ಯಾರಂಟಿ ನೀಡುವ ಯಂತ್ರವೇ ವಾಟರ್‌ ಪ್ಯೂರಿಫೈಯರ್‌.

Advertisement

ನೀರು ಪ್ರತಿಯೊಬ್ಬರಿಗೂ ಅತಿ ಅಮೂಲ್ಯವಾದ ವಸ್ತುವಾಗಿದೆ. ಆದರೆ ಅದು ನಮ್ಮ ದೇಹಕ್ಕೆ ಹಿತವಾಗಿರುವ ಜತೆಗೆ ಕೆಲವೊಂದು ಕಾಯಿಲೆಗಳನ್ನು ತರುವ ಪ್ರಸಂಗವೂ ನಡೆಯುತ್ತಿದೆ. ಹೀಗಾಗಿ ನಾವು ನೀರು ಕುಡಿಯುವ ಸಂದರ್ಭದಲ್ಲಿ ಅದು ಶುದ್ಧವೋ, ಕಲುಷಿತವೋ ಎಂಬುದನ್ನು ಖಚಿತಪಡಿಸಿಕೊಂಡು ಬಳಿಕ ಸೇವನೆ ಮಾಡುವುದು ಸೂಕ್ತವೆನಿಸುತ್ತದೆ. ಈ ರೀತಿಯಲ್ಲಿ ನೀರನ್ನು ಶುದ್ಧಗೊಳಿಸಲು ವಾಟರ್‌ ಪ್ಯೂರಿಫೈಯರ್‌ (ಶುದ್ಧೀಕರಣ ಯಂತ್ರ)ಗಳು ನಮಗೆ ಸಹಾಯ ಮಾಡುತ್ತವೆೆ. ಹೀಗಾಗಿ ಇದರ ಬಳಕೆಯ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜತೆಗೆ ಬೇಡಿಕೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನೀರಿನಲ್ಲಿರುವ ಮಣ್ಣಿನ ಅಂಶ, ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಶುದ್ಧೀಕರಣ ಯಂತ್ರಗಳು ಸಹಾಯಕವಾಗಿವೆ. ವ್ಯಕ್ತಿಯ ದೇಹದಲ್ಲಿ ಶೇ. 72 ನೀರಿನ ಅಂಶ ಇರುವ ಕಾರಣ ಅದನ್ನು ಕಾಯ್ದುಕೊಳ್ಳಲು ನಾವು ಹೆಚ್ಚು ನೀರನ್ನು ಕುಡಿಯಬೇಕಾಗುತ್ತದೆ. ಅದರಲ್ಲೂ ಕುಡಿಯುವ ನೀರಿನ ಶುದ್ಧತೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕಾಗುತ್ತದೆ. ಒಂದು ಅಧ್ಯಯನದ ಪ್ರಕಾರ ವ್ಯಕ್ತಿಯ 10 ಕಾಯಿಲೆಗಳಲ್ಲಿ 8 ನೀರಿನ ಕಾರಣದಿಂದಲೇ ಬರುತ್ತವೆ ಎನ್ನಲಾಗುತ್ತದೆ. ಹೀಗಾಗಿ ನೀರು ಶುದ್ಧೀಕರಿಸಿ ಕುಡಿಯುವುದು ಅತಿ ಅಗತ್ಯವಾಗಿದೆ. 

ವೈವಿಧ್ಯಗಳು
ಇಂತಹ ಯಂತ್ರಗಳಲ್ಲಿ ಬೇರೆ ಬೇರೆ ವೈವಿಧ್ಯಗಳನ್ನು ಕಾಣಬಹುದಾಗಿದೆ. ಯೂವಿ, ಆರ್‌ಒ, ಆಲ್ಕಾಲೈನ್‌ ಹೀಗೆ ಮೂರು ಪ್ರಮುಖ ವೈವಿಧ್ಯಗಳನ್ನು ಕಾಣಬಹುದಾಗಿದೆ. ಆಲ್ಟ್ರಾವೈಲೆಟ್‌(ಯುವಿ)ಗಳು ಕಡಿಮೆ ಬೆಲೆಯ ಯಂತ್ರಗಳಾಗಿದ್ದು, ಕೇವಲ ಬ್ಯಾಕ್ಟೀರಿಯಾಗಳನ್ನು ಮಾತ್ರ ಕೊಲ್ಲುತ್ತವೆ. 

ರಿವರ್ಸ್‌ ಆಸ್ಮಾಸೀಸ್‌(ಆರ್‌ಒ) ಇವುಗಳು ನೀರಿನ ಕಲರ್‌ ಬ್ಯಾಲೆನ್ಸಿಂಗ್‌ ಮಾಡುತ್ತವೆ. ಜತೆಗೆ ಟಿಡಿಎಸ್‌ ಕಂಟ್ರೊಲರ್‌ ಆಗಿಯೂ ಕೆಲಸ ನಿರ್ವಹಿಸುತ್ತವೆ. ಆದರೆ ಇವುಗಳಿಗಿಂತಲೂ ಮುಖ್ಯವಾಗಿ ಆಲ್ಕಾಲೈನ್‌ಗಳು ನೀರನ್ನು ಪೂರ್ತಿ ಶುದ್ಧ ಮಾಡುವ ಕೆಲಸ ಮಾಡುತ್ತವೆ. ನೀರಿನ ಟೇಸ್ಟ್‌ ಬ್ಯಾಲೆನ್ಸಿಂಗ್‌ ಮಾಡುವ ಜತೆಗೆ ಬಣ್ಣವನ್ನೂ ಶುದ್ಧಗೊಳಿಸುತ್ತದೆ. ಒಟ್ಟಿನಲ್ಲಿ ನೀರಿಗೆ ನ್ಯಾಚುರಲ್‌ ಟೇಸ್ಟ್‌ ನೀಡುತ್ತವೆ ಎನ್ನಬಧಿಹುಧಿದು. ಆಲ್ಕಾಲೈನ್‌ ಯಂತ್ರಗಳು ಹೆಚ್ಚಿನ ಬೇಡಿಕೆಯನ್ನು ಹೊಂದಿದ್ದು, ಶೇ. 90 ಜನ ಇದನ್ನೇ ಉಪಯೋಗಿಸುತ್ತಿದ್ದಾರೆ. 

ಎಲೆಕ್ಟ್ರಿಕ್‌/ನಾನ್‌ಎಲೆಕ್ಟ್ರಿಕ್‌
ವಾಟರ್‌ ಪ್ಯೂರಿಫೈಯರ್‌ನಲ್ಲಿ ಮುಖ್ಯವಾಗಿ ನಾವು ಎಲೆಕ್ಟ್ರಿಕ್‌ ಮತ್ತು ನಾನ್‌ಎಲೆಕ್ಟ್ರಿಕ್‌ ವಿಭಾಗಗಳನ್ನು ಕಾಣಬಹುದು. ನಾನ್‌ಎಲೆಕ್ಟ್ರಿಕ್‌ ಉತ್ಪನ್ನಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿವೆ. ಎಲೆಕ್ಟ್ರಿಕ್‌ ಉತ್ಪನ್ನಗಳಲ್ಲಿಯೂ ಹಲವು ವಿಧಗಳನ್ನು ಕಾಣಬಹುದಾಗಿದೆ. ಯಾವುದೇ ಸ್ಟೋರೇಜ್‌ ವ್ಯವಸ್ಥೆ ಇಲ್ಲದೆ ಟ್ಯಾಪ್‌ನಿಂದ ನೇರವಾಗಿ ನೀರು ಪಡೆಯಬಹುದಾದ ವ್ಯವಸ್ಥೆ ಇದೆ. ಇನ್ನು ಕೆಲವು ಉತ್ಪನ್ನಗಳು ಸ್ಟೋರೇಜ್‌ ವ್ಯವಸ್ಥೆಯನ್ನು ಒಳಗೊಂಡಿರುತ್ತವೆ. ಮುಖ್ಯವಾಗಿ ಎಲೆಕ್ಟ್ರಿಕ್‌ ಉತ್ಪನ್ನಗಳಲ್ಲಿ ಸ್ಟೋರೇಜ್‌ ವ್ಯವಸ್ಥೆ ಇಲ್ಲದೇ ಇದ್ದರೆ ಶುದ್ಧೀಕರಿಸಿದ ನೀರು ಪಡೆಯುವುದು ಅಸಾಧ್ಯ. ಆದರೆ ಸ್ಟೋರೇಜ್‌ ವ್ಯವಸ್ಥೆ ಇದ್ದರೆ ವಿದ್ಯುತ್‌ ಇಲ್ಲದಿದ್ದಾಗಲೂ ನಾವು ಶುದ್ಧ ನೀರನ್ನು ಪಡೆಯಬಹುದಾಗಿದೆ. 

Advertisement

ನಿರ್ವಹಣೆ ಹೇಗೆ?
ವಾಟರ್‌ ಪ್ಯೂರಿಫೈಯರ್‌ನ ನಿರ್ವಹಣೆ ಅತೀ ಅಗತ್ಯವಾಗುತ್ತದೆ. ಅದರ ಫಿಲ್ಟರ್‌ಗಳಲ್ಲಿ ನೀರಿನ ಕಲುಷಿತ ಅಂಶ ಸ್ಟಾಕ್‌ ಆಗಿ ಪ್ಯೂರಿಫೈಯರ್‌ ಕೂಡ ಕೈಕೊಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಕನಿಷ್ಠ 3 ತಿಂಗಳಿಗೆ ಒಮ್ಮೆಯಾದರೂ ಅದರ ಫಿಲ್ಟರ್‌ಗಳನ್ನು ಬದಲಾಯಿಸುವ ಕಾರ್ಯ ಮಾಡಬೇಕು. ಜತೆಗೆ ವರ್ಷಕ್ಕೊಮ್ಮೆ ಯಂತ್ರದ ಎಲ್ಲ ಫಿಲ್ಟರ್‌ಗಳನ್ನು ಬದಲಾಯಿಸಬೇಕಾಗುತ್ತದೆ. ಆದ್ದರಿಂದ ಹೆಚ್ಚು ನೀರು ಪಡೆಯುತ್ತಿದ್ದರೆ ಕನಿಷ್ಠ ವಾರಕ್ಕೊಮ್ಮೆಯಾದರೂ ಶುದ್ಧ ಮಾಡುವ ಕಾರ್ಯ ಮಾಡಬೇಕಾಗುತ್ತದೆ. ಆದರೆ ಇದರ ಶುದ್ಧೀಕರಣ ಕಾರ್ಯವನ್ನು ಟೆಕ್ನೀಶಿಯನ್‌ಗಳೇ ಮಾಡಬೇಕಾಗುತ್ತದೆ. 

ಪ್ರಿಫಿಲ್ಟರ್‌ ಬಳಸಿ
ನೀರು ಶುದ್ಧೀಕರಣ ಯಂತ್ರಗಳನ್ನು ಬಳಸುವವರು ಪ್ರಿಫಿಲ್ಟರ್‌ಗಳನ್ನು ಬಳಸಿದರೆ ಪ್ಯೂರಿಫೈಯರ್‌ಗಳ ನಿರ್ವಹಣೆ ಸುಲಭವಾಗುವ ಜತೆಗೆ ಯಂತ್ರಗಳಿಗೆ ರಕ್ಷಣೆ ನೀಡುವ ಕಾರ್ಯವನ್ನು ಅವುಗಳು ಮಾಡುತ್ತವೆ. ಅಂದರೆ ನಳ್ಳಿಯಿಂದ ಬಂದ ನೀರು ಪ್ರಿಫಿಲ್ಟರ್‌ಗೆ ಬಂದು ಬಳಿಕ ಶುದ್ಧೀಕರಣ ಯಂತ್ರವನ್ನು ಸೇರುತ್ತದೆ. ನೀರು ಮೊದಲು ಪ್ರಿಫಿಲ್ಟರ್‌ಗೆ ಬಂದಾಗ ನೀರಿನಲ್ಲಿರುವ ಮಣ್ಣಿನ ಅಂಶ ಪ್ರಿಫಿಲ್ಟರ್‌ನ ಕ್ಯಾಂಡಲ್‌ನಲ್ಲೇ ಉಳಿಯುತ್ತದೆ. ಇದರಿಂದ ಯಂತ್ರದ ಫಿಲ್ಟರ್‌ಗಳಿಗೆ ನೀರಿನ ಶುದ್ಧೀಕರಣ ಕಾರ್ಯ ಸುಲಭವಾಗುತ್ತದೆ. ಜತೆಗೆ ಪ್ರಿಫಿಲ್ಟರ್‌ನ ಕ್ಯಾಂಡಲನ್ನು ನಾವೇ ಶುಭ್ರಗೊಳಿಸಬಹುದಾದ ಕಾರಣ ಯಂತ್ರಗಳು ಹೆಚ್ಚು ಬಾಳಿಕೆ ಬರುತ್ತವೆ. 

ನಿರ್ವಹಣೆ ಅತಿ ಅಗತ್ಯ
ಪ್ರಸ್ತುತ ನಗರ ಪ್ರದೇಶಗಳಲ್ಲಿ ನೀರಿನ ಶುದ್ಧತೆಯ ಕುರಿತು ಹಲವು ಸಂಶಯಗಳಿವೆ. ಹೀಗಾಗಿ ಜನ ಹೆಚ್ಚಾಗಿ ವಾಟರ್‌ ಪ್ಯೂರಿಫೈಯರ್‌ ಮೂಲಕ ನೀರನ್ನು ಶುದ್ಧೀಕರಿಸಿ ಕುಡಿಯುತ್ತಾರೆ. ಈ ಕಾರಣದಿಂದ ಶುದ್ಧೀಕರಣ ಯಂತ್ರಗಳಿಗೆ ಉತ್ತಮ ಬೇಡಿಕೆ ಇದೆ. ಯಂತ್ರಗಳ ನಿರ್ವಹಣೆಯೂ ಅತಿ ಮುಖ್ಯವಾಗಿದೆ. ಇಲ್ಲದೇ ಇದ್ದಲ್ಲಿ ಯಂತ್ರಗಳು ಕೆಟ್ಟುಹೋಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಬಂಟ್ಸ್‌ ಹಾಸ್ಟೆಲ್‌ನ ಆಶೀರ್ವಾದ್‌ ಎಂಟರ್‌ಪ್ರೈಸಸ್‌ನ ಸೇಲ್ಸ್‌ ಮ್ಯಾನೇಜರ್‌ ಮೊವಿನ್‌.

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next