ಚಿಕ್ಕಬಳ್ಳಾಪುರ: ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ತಮ್ಮನ್ನು ನೇಮಿಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭಾನುವಾರ ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿದ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಹೂಗುಚ್ಛ ನೀಡಿ ಕೃತಜ್ಞತೆ ಸಲ್ಲಿಸಿದರು.
ನೇಮಕಕ್ಕೆ ತಡೆ ನೀಡಿದ್ದ ಸಿಎಂ: ರಾಜ್ಯದ ಮೈತ್ರಿ ಸರ್ಕಾರದಲ್ಲಿ ಸಚಿವರಾಗಬೇಕೆಂದು ಸಾಕಷ್ಟು ಪ್ರಯತ್ನ ಪಟ್ಟ ಡಾ.ಕೆ.ಸುಧಾಕರ್‌ರನ್ನು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ರಾಜ್ಯದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ನೇಮಿಸುವಂತೆ ಹಲವು ತಿಂಗಳ ಹಿಂದೆಯೇ ಸಿಎಂ. ಕುಮಾರಸ್ವಾಮಿಗೆ ಶಿಫಾರಸು ಮಾಡಿದ್ದರು.
ಆದರೆ ಕುಮಾರಸ್ವಾಮಿ, ಸುಧಾಕರ್‌ರ ನೇಮಕ ತಡೆದು ತಮ್ಮ ಆಪ್ತರಾಗಿದ್ದ ಐಎಎಸ್ ನಿವೃತ್ತ ಅಧಿಕಾರಿ ಜಯರಾಮ್ ಹೆಗಲಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದರು. ಇದರಿಂದ ಸುಧಾಕರ್ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಕಳೆದ 20 ರಂದು ಗುರುವಾರ ಕುಮಾರಸ್ವಾಮಿ ಅವರು ಮಂಡಳಿ ಅಧ್ಯಕ್ಷರಾಗಿದ್ದ ಜಯರಾಮ್‌ರಿಂದ ರಾಜೀನಾಮೆ ಪಡೆದು ಶಾಸಕ ಸುಧಾಕರ್‌ರನ್ನು ನೇಮಿಸಿದ್ದರು. ಈ ಹಿನ್ನಲೆಯಲ್ಲಿ ಶಾಸಕರು, ಯಾದಗಿರಿ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಮುಗಿಸಿ ಬೆಂಗಳೂರಿಗೆ ಆಗಮಿಸಿದ ಸಿಎಂ ಕುಮಾರಸ್ವಾಮಿ ರನ್ನು ಭೇಟಿ ಮಾಡಿ ತಮ್ಮ ಆಯ್ಕೆಗೆ ಸಹಕರಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖೀಲ್ ಕುಮಾರಸ್ವಾಮಿ ಉಪಸ್ಥಿತರಿದ್ದರು.
ನೇಮಕ ವಿರುದ್ಧ ಕಾನೂನು ಸಂಕಷ್ಟ: ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಶಾಸಕ ಡಾ.ಕೆ.ಸುಧಾಕರ್‌ರನ್ನು ನೇಮಿಸಿರುವ ಕುರಿತು ಬೆಂಗ ಳೂರಿನ ವಕೀಲ ಉಮಾಪತಿ ಎಂಬುವರು ಸರ್ಕಾ ರಕ್ಕೆ ದೂರು ನೀಡಿ ಸ್ಪಷ್ಟನೆ ಕೇಳಿದ್ದು, ಕುತೂಹಲ ಕೆರಳಿಸಿದೆ. ಸುಧಾಕರ್ ನೇಮಕ ಕಾನೂನು ಬಾಹಿರ, ಪರಿಸರ ಅಧ್ಯಯನ ನಡೆಸದ ವ್ಯಕ್ತಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಬಾರದೆಂಬ ನಿಯಮ ಉಲ್ಲಂಘಸಿ ಸರ್ಕಾರ ಸುಧಾಕರ್‌ರನ್ನು ನೇಮಿಸಿರುವ ಬಗ್ಗೆ ವಕೀಲರು ತಕಾರರು ಎತ್ತಿದ್ದು, ಸರ್ಕಾರಕ್ಕೆ ನೀಡಿರುವ ದೂರು ಚರ್ಚೆಗೆ ಗ್ರಾಸವಾಗಿದೆ.