Advertisement

ಸುಧಾಕರ್‌ ರಾಜೀನಾಮೆ ತಂದ ಸಂಚಲನ

07:17 AM Jul 11, 2019 | Team Udayavani |

ಶಾಸಕರ ರಾಜೀನಾಮೆ ಪರ್ವದಿಂದ ಪತನದ ಹಾದಿಯಲ್ಲಿರುವ ರಾಜ್ಯ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌, ರಾಜೀನಾಮೆ ಸಲ್ಲಿಸುವ ಮೂಲಕ ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ 11 ಶಾಸಕರ ಪೈಕಿ ಮೊದಲ ವಿಕೆಟ್‌ ಪತನಗೊಂಡಂತಾಗಿದ್ದು, ಶಾಸಕ ಸುಧಾಕರ್‌ ರಾಜೀನಾಮೆ ಸಹಜವಾಗಿಯೆ ಜಿಲ್ಲೆಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ತಂದಿದ್ದು ರಾಜೀನಾಮೆ ಪರ್ವ ಮುಂದುವರಿದಂತೆ ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಉಳಿಯುತ್ತಾ ಉರುಳುತ್ತಾ ಎಂಬದರ ಬಗ್ಗೆ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Advertisement

ಚಿಕ್ಕಬಳ್ಳಾಪುರ: ರಾಜ್ಯ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಎದ್ದು ರಾಜೀನಾಮೆ ಸಲ್ಲಿಸುವ ಶಾಸಕರ ಪರ್ವ ಇದೀಗ ಜಿಲ್ಲೆಗೂ ಕಾಲಿಟ್ಟಿದ್ದು, ಬುಧವಾರ ದಿಢೀರ್‌ ರಾಜಕೀಯ ಬೆಳವಣಿಗೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್‌, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಕಾಂಗ್ರೆಸ್‌ಗೆ ಬಿಗ್‌ ಶಾಕ್‌ ಕೊಟ್ಟಿದ್ದಾರೆ.

ಈಗಾಗಲೇ 13ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್‌, ಜೆಡಿಎಸ್‌ನ ಘಟಾನುಘಟಿ ಶಾಸಕರು ರಾಜೀನಾಮೆ ನೀಡಿರುವುದರಿಂದ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿರುವಾಗಲೇ ಶಾಸಕ ಡಾ.ಕೆ.ಸುಧಾಕರ್‌, ಹೋಸಕೋಟೆ ಶಾಸಕರಾದ ವಸತಿ ಸಚಿವ ಎಂ.ಟಿ.ಬಿ.ನಾಗರಾಜ್‌ ಜೊತೆಗೂಡಿ ವಿಧಾನಸೌಧಕ್ಕೆ ತೆರಳಿ ಸ್ಪೀಕರ್‌ ರಮೇಶ್‌ ಕುಮಾರ್‌ಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ರಾಜೀನಾಮೆ ಸಾಕಷ್ಟು ಸಂಚಲನ ಮೂಡಿಸಿದೆ.

ಸಿಎಲ್‌ಪಿಗೆ ಗೈರಾಗಿದ್ದ ಶಾಸಕ: ಮೈತ್ರಿ ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕರೇ ರಾಜೀನಾಮೆಗೆ ಮುಂದಾಗಿದ್ದರಿಂದ ಮಂಗಳವಾರ ಮಾಜಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಶಾಸಕಾಂಗ ಸಭೆಯಿಂದಲೂ ದೂರ ಉಳಿದಿದ್ದ ಶಾಸಕ ಡಾ.ಕೆ.ಸುಧಾಕರ್‌, ದಿನವೀಡಿ ಕ್ಷೇತ್ರದ ಪ್ರಮುಖ ಮುಖಂಡರ ಹಾಗೂ ಕಾರ್ಯಕರ್ತರೊಂದಿಗೆ ರಾಜೀನಾಮೆ ವಿಚಾರ ಚರ್ಚೆ ನಡೆಸಿ ಅಭಿಪ್ರಾಯ ಪಡೆದಿದ್ದ ಶಾಸಕ ಸುಧಾಕರ್‌, ವಿಧಾನಸೌಧಕ್ಕೆ ತೆರಳಿ ಸ್ಪೀಕರ್‌ಗೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್‌ ನಾಯಕರಿಗೆ ಅಘಾತ ಉಂಟು ಮಾಡಿದ್ದಾರೆ. ಹೀಗಾಗಿ ರಾಜೀನಾಮೆ ಸಲ್ಲಿಸಿರುವ ಶಾಸಕ ಡಾ.ಕೆ.ಸುಧಾಕರ್‌ ಮುಂದಿನ ನಡೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಸಚಿವ ಸ್ಥಾನದ ಆಕಾಂಕ್ಷಿ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ವಿತ್ವಕ್ಕೆ ಬಂದಾಗನಿಂದಲೂ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸಿಕೊಂಡು ಬರುತ್ತಿದ್ದ ಶಾಸಕ ಡಾ.ಕೆ.ಸುಧಾಕರ್‌, ಪ್ರತಿ ಹಂತದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದರು. ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ಗಾಂಧಿ ಜೊತೆ ಲಂಡನ್‌ ಪ್ರವಾಸ ನಡೆಸಿ ಸುಧಾಕರ್‌ ಗಮನ ಸೆಳೆದಿದ್ದರು. ಆದರೆ ಶಾಸಕ ಸುಧಾಕರ್‌ಗೆ ಮಂತ್ರಿಯಾಗುವ ಭಾಗ್ಯ ಕೊನೆಗೂ ದೊರೆಯಲೇ ಇಲ್ಲ. ಹೀಗಾಗಿ ಪ್ರತಿ ಸಭೆ, ಸಮಾರಂಭದಲ್ಲಿ ಸಿಎಂ ಕುಮಾರಸ್ವಾಮಿ ವಿರುದ್ಧ ಮೈತ್ರಿ ಸರ್ಕಾರದ ಕಾರ್ಯವೈಖರಿ ವಿರುದ್ಧ ಸುಧಾಕರ್‌ ಬಹಿರಂಗವಾಗಿ ಟೀಕೆ ಮಾಡಿ ಸಿಎಂಗೆ ಮುಜುಗರ ಉಂಟು ಮಾಡಿದ್ದರು.

Advertisement

ಆದರೆ ನಿಗಮ, ಮಂಡಳಿ ನೇಮಕ ವಿಚಾರದಲ್ಲಿ ಸುಧಾಕರ್‌ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವಂತೆ ರಾಹುಲ್‌ಗಾಂಧಿ ಸೂಚಿಸಿದರೂ ಕುಮಾರಸ್ವಾಮಿ ಒಪ್ಪಿರಲಿಲ್ಲ. ಆದರೆ ಹಲವು ದಿನಗಳ ಹಿಂದೆಯಷ್ಟೇ ಸಿಎಂ ಕುಮಾರಸ್ವಾಮಿ ಪರಿಸರ ಮಾಲಿನ್ಯ ಮಂಡಳಿಗೆ ನೇಮಕ ಮಾಡಿದ್ದ ತಮ್ಮ ಅಪ್ತ ನಿವೃತ್ತ ಐಎಎಸ್‌ ಅಧಿಕಾರಿ ಜಯರಾಮ್‌ರಿಂದ ರಾಜೀನಾಮೆ ಪಡೆದಿದ್ದರು. ಆದರೆ ಇದೀಗ ಸುಧಾಕರ್‌ ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರಕ್ಕೆ ಪೆಟ್ಟು ಕೊಟ್ಟಿದ್ದಾರೆ.

ರಾಜೀನಾಮೆ ಆಂಗೀಕಾರವಾದರೆ ಬೈ ಎಲೆಕ್ಷನ್‌: ಒಂದು ವೇಳೆ ಶಾಸಕ ಡಾ.ಕೆ.ಸುಧಾಕರ್‌ ಸಲ್ಲಿಸಿರುವ ರಾಜೀನಾಮೆ ಆಂಗೀಕಾರವಾಗಿ ಮೈತ್ರಿ ಸರ್ಕಾರದ ಸಂಖ್ಯಾ ಬಲ ಬಹುಮತ ಕಳೆದುಕೊಂಡು ಬಿಜೆಪಿ ಸರ್ಕಾರ ರಚನೆಯಾದರೆ ಮತ್ತೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವುದು ಖಚಿತವಾಗಲಿದೆ. ಆದರೆ ಶಾಸಕರ ರಾಜೀನಾಮೆ ಪ್ರಹಸನ ವಿಚಾರದಲ್ಲಿ ಬಹುಮುಖ್ಯ ಪಾತ್ರ ವಹಿಸಲಿರುವ ಸ್ಪೀಕರ್‌ ರಮೇಶ್‌ಕುಮಾರ್‌, ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಥವಾ ಶಾಸಕರ ಮನವೊಲಿಕೆಯಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿ ಸರ್ಕಾರ ಉಳಿಸಿಕೊಳ್ಳುತ್ತಾ ನೋಡಬೇಕಿದೆ. ಆದರೆ, ಬಲ್ಲ ಮೂಲಗಳ ಪ್ರಕಾರ ಶಾಸಕ ಡಾ.ಕೆ.ಸುಧಾಕರ್‌, ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದರು.

ಹಾಗಾಗಿಯೇ ಅವರ ಹೆಸರು ಪದೇ ಪದೆ ಬಿಜೆಪಿ ಆಪರೇಷನ್‌ ಕಮಲದ ಪಟ್ಟಿಯಲ್ಲಿ ಮೊದಲು ಕೇಳಿ ಬಂದಿತ್ತು. ಅದರಲ್ಲೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಶಾಸಕ ಡಾ.ಕೆ.ಸುಧಾಕರ್‌, ಬಿಜೆಪಿ ಪರ ಬ್ಯಾಟಿಂಗ್‌ ನಡೆಸಿದ್ದಾರೆಂಬ ಆರೋಪ ಅವರ ವಿರುದ್ಧ ಪ್ರಬಲವಾಗಿ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಮಾಜಿ ಸಂಸದ ಎಂ.ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಮತ ಬಂದಿರುವ ಬಗ್ಗೆ ಪರೋಕ್ಷವಾಗಿ ಶಾಸಕ ಸುಧಾಕರ್‌ ವಿರುದ್ಧ ಗರಂ ಆಗಿದ್ದರು.

ಎರಡನೇ ಬಾರಿ ಗೆದ್ದು ಬೀಗಿದ್ದ ಸುಧಾಕರ್‌: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಟ್ಟಿಗೆ ಸತತ ಎರಡನೇ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಶಾಸಕ ಡಾ. ಕೆ.ಸುಧಾಕರ್‌, ಕ್ಷೇತ್ರದಲ್ಲಿ ಹೊಸ ರಾಜಕೀಯ ಇತಿಹಾಸ ಸೃಷ್ಟಿ ಮಾಡಿದ್ದರು. ಮೊದಲ ಬಾರಿಗೆ 2013 ರಲ್ಲಿ ಚುನಾವಣೆಗೆ ನಿಂತಾಗ 15 ಸಾವಿರ ಮತಗಳ ಅಂತರದಿಂದ ಜೆಡಿಎಸ್‌ನೆ ಕೆ.ಪಿ.ಬಚ್ಚೇಗೌಡ ವಿರುದ್ಧ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದ ಶಾಸಕ ಸುಧಾಕರ್‌,

2018ರ ವಿಧಾನಸಭಾ ಚುನಾವಣೆಯಲ್ಲಿ ಬರೋಬ್ಬರಿ 32 ಸಾವಿರ ಮತಗಳ ಅಂತದಿಂದ ಗೆಲುವು ಸಾಧಿಸಿ ಎರಡನೇ ಬಾರಿಗೆ ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡಿದ್ದರು. ಇದೇ ಕಾರಣಕ್ಕಾಗಿ ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಮತ್ತೆ ಗೆಲುವು ಸಾಧಿಸಬಹುದೆಂಬ ಆಕಾಂಕ್ಷೆಯನ್ನು ಹೊತ್ತು ಶಾಸಕ ಸುಧಾಕರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಂದಿನ ಬೆಳವಣಿಗೆ ಕಾದು ನೋಡಬೇಕಿದೆ.

ಸುಧಾಕರ್‌ ರಾಜೀನಾಮೆ ಹೈಡ್ರಾಮಾ!: ಮೈತ್ರಿ ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕರ ರಾಜೀನಾಮೆ ಪರ್ವ ಮುಂದುವರೆದಿದ್ದು, ಬುಧವಾರ ವಿಧಾನಸೌಧದ ಸ್ಪೀಕರ್‌ ಕಚೇರಿ ಎದುರು ಚಿಕ್ಕಬಳ್ಳಾಪುರ ಶಾಸಕ ಸುಧಾಕರ್‌ ರಾಜೀನಾಮೆ ನೀಡುವ ವೇಳೆ ದೊಡ್ಡ ಹೈಡ್ರಾಮಾ ನಡೆದು ಹೋಯಿತು. ಮಂಗಳವಾರ ನಡೆದ ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಸಭೆಯಿಂದಲೂ ದೂರ ಉಳಿದಿದ್ದ ಶಾಸಕ ಡಾ.ಕೆ.ಸುಧಾಕರ್‌, ವಸತಿ ಸಚಿವ ಎಂ.ಟಿ.ಬಿ.ನಾಗರಾಜ್‌ ಜೊತೆ ಆಗಮಿಸಿ ಸ್ಪೀಕರ್‌ ರಮೇಶ್‌ ಕುಮಾರ್‌ಗೆ ರಾಜೀನಾಮೆ ಸಲ್ಲಿಸಲು ತೆರಳುವ ವೇಳೆ ಅಲ್ಲಿಯೇ ಇದ್ದ ಸಚಿವ ಪ್ರಿಯಾಂಕ ಖರ್ಗೆ, ವಿಧಾನ ಪರಿಷತ್ತು ಸದಸ್ಯ ನಸೀರ್‌ ಅಹಮ್ಮದ್‌ ಮತ್ತತರರು ಶಾಸಕ ಸುಧಾಕರ್‌ರನ್ನು ತಡೆದರು.

ಇದೇ ವೇಳೆ ಸ್ಥಳಕ್ಕೆ ಆಗಮಿಸಿ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸಹ ಸುಧಾಕರ್‌ರನ್ನು ತರಾಟೆಗೆ ತೆಗೆದುಕೊಂಡರು. ಸುಧಾಕರರನ್ನು ಎಷ್ಟೇ ಮನವೊಲಿಸಿದರೂ ಫ‌ಲ ಕಾಣದೇ ಸುಧಾಕರ್‌ ಸ್ಪೀಕರ್‌ ರಮೇಶ್‌ ಕುಮಾರ್‌ಗೆ ಕೈಯಲ್ಲಿ ಬರೆದ ರಾಜೀನಾಮೆ ಪತ್ರ ನೀಡಿದ್ದಾರೆ.

ಜಿಲ್ಲೆಯ ರಾಜಕೀಯದಲ್ಲಿ ಇದೇ ಮೊದಲು: ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿಯೆ ಇದೇ ಮೊದಲ ಬಾರಿಗೆ ಶಾಸಕರೊಬ್ಬರು ಗೆದ್ದ 13 ತಿಂಗಳಿಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಖ್ಯಾತಿಗೆ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಪಾತ್ರರಾಗಿದ್ದಾರೆ. ಅವಿಭಜಿತ ಕೋಲಾರ ಜಿಲ್ಲೆಯಿಂದಾಗಲೂ ಸಹ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿರುವ ಯಾವ ಶಾಸಕರ ಕೂಡ ಈ ರೀತಿ ರಾಜೀನಾಮೆ ಸಲ್ಲಿಸಿರಲಿಲ್ಲ. ಆದರೆ ಶಾಸಕ ಡಾ.ಕೆ.ಸುಧಾಕರ್‌ ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದಾರೆ.

ಸಿದ್ದರಾಮಯ್ಯಗೆ ಕೈ ಕೊಟ್ಟ ಅಪ್ತ ಶಾಸಕ: ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ರಾಜೀನಾಮೆ ಸಾಕಷ್ಟು ಕುತೂಹಲ ಕೆರಳಿಸಿದೆ. ವಿಶೇಷವಾಗಿ ಶಾಸಕ ಸುಧಾಕರ್‌, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಅಪ್ತರಲ್ಲಿ ಗುರುತಿಸಿಕೊಂಡಿದ್ದರು. ಸಿದ್ದರಾಮಯ್ಯ ಒತ್ತಡದಿಂದಲೇ ಇತ್ತೀಚೆಗೆ ಶಾಸಕ ಡಾ.ಕೆ.ಸುಧಾಕರ್‌ಗೆ ಸಿಎಂ ಕುಮಾರಸ್ವಾಮಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದರು.

ಆದರೆ ಇದೀಗ ಸಿದ್ದರಾಮಯ್ಯಗೆ ಕೈ ಕೊಟ್ಟ ಶಾಸಕ ಸುಧಾಕರ್‌ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮುಂಬೈನಲ್ಲಿರುವ ಅತೃಪ್ತ ಶಾಸಕರ ಬಣ ಸೇರಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಶಾಸಕ ಸುಧಾಕರ್‌ ರಾಜೀನಾಮೆ ನೀಡುತ್ತಿದ್ದಾರೆಂಬ ಮಾಹಿತಿ ತಿಳಿದ ಕೂಡಲೇ ಸಿದ್ದರಾಮಯ್ಯ ವಿಧಾನಸೌಧಕ್ಕೆ ದೌಡಾಯಿಸಿ ಮನವೊಲಿಸುವ ಕಾರ್ಯ ಕೂಡ ನಡೆಸಿದರು. ಆದರೂ ಯಾವುದಕ್ಕೂ ಜಗ್ಗದ ಶಾಸಕ ಸುಧಾಕರ್‌, ತಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತೆರಳಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಸಿದ್ದು ಸಿಎಂ ಆದರೆ ರಾಜೀನಾಮೆ ವಾಪಸ್‌: ಒಂದು ವೇಳೆ ಮೈತ್ರಿ ಸರ್ಕಾರದ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿದ್ದರಾಮಯ್ಯ ಜೆಡಿಎಸ್‌ ಬೆಂಬಲದೊಂದಿಗೆ ಮುಖ್ಯಮಂತ್ರಿ ಆಗುವುದಾದರೆ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ತಮ್ಮ ರಾಜೀನಾಮೆ ಪತ್ರವನ್ನು ವಾಪಸ್‌ ಪಡೆಯುವ ಸಾಧ್ಯತೆ ಇದೆ. ಈಗಾಗಲೇ ರಾಜೀನಾಮೆ ಸಲ್ಲಿಸಿರುವ ಶಾಸಕರ ಬಹುಪಾಲು ಸಿದ್ದರಾಮಯ್ಯ ಅಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕರು ಆಗಿರುವುದರಿಂದ ಈ ರೀತಿಯ ಬೆಳವಣಿಗೆ ರಾಜ್ಯದಲ್ಲಿ ಉಂಟಾಗಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಸಂದರ್ಭ ಬಂದರೆ ಸುಧಾಕರ್‌ ರಾಜೀನಾಮೆ ಹಿಂಪಡೆದರೂ ಯಾವ ಆಶ್ಚರ್ಯವಿಲ್ಲ.

* ವಿಶೇಷ ವರದಿ: ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next