ಎಚ್.ಡಿ.ಕೋಟೆ: ಕುಡಿದ ಅಮಲಿನಲ್ಲಿ ಮಗುವನ್ನು ಬೆಂಕಿಗೆ ಎಸೆದು ಗಾಯಗೊಳಿಸಿದ್ದ ಆದಿವಾಸಿ ಮಹಿಳೆ ಹಾಗೂ ಆಕೆಯ 2 ವರ್ಷದ ಮಗುವಿನ ರಕ್ಷಣೆಗೆ ಜಿಲ್ಲಾ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ಮುಂದಾಗಿದ್ದಾರೆ. ಆದಿವಾಸಿಗರ ಮನ ಪರಿವರ್ತಿಸಿ ಮಹಿಳೆ ಹಾಗೂ ಮಗುವನ್ನು ಹಾಡಿಯಲ್ಲಿಯೇ ಇರಿಸಲು ಅಂತಿಮವಾಗಿ ತೀರ್ಮಾನಿಸಲಾಗಿದೆ.
ಕಳೆದ ವಾರ ಎಚ್.ಡಿ.ಕೋಟೆ ತಾಲೂಕಿನ ಚಿಕ್ಕೆರೆ ಹಾಡಿಯ ಆದಿವಾಸಿ ಮಹಿಳೆ ಸುಧಾ ಮದ್ಯದ ಅಮಲಿನಲ್ಲಿ ತನ್ನ 2 ವರ್ಷದ ಮಗುವನ್ನು ಬೆಂಕಿಗೆ ತಳ್ಳಿ ತೀವ್ರ ಸ್ವರೂಪದಲ್ಲಿ ಗಾಯಗೊಳಿಸಿದ್ದಳು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ಒಪ್ಪಿರಲಿಲ್ಲ. ಬಳಿಕ ಮನವೊಲಿಸಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಮದ್ಯ ವ್ಯಸನಕ್ಕಾಗಿ ಸುಧಾ ಭಿಕ್ಷಾಟನೆಗೆ ಮಗು ಬಳಕೆ ಮಾಡಿಕೊಳ್ಳುತ್ತಿರುವುದು,
ಅಲ್ಲದೆ ಹಾಡಿಯಲ್ಲಿ ನಿವಾಸಿಗರ ಆಕ್ರೋಶಕ್ಕೂ ಕಾರಣವಾಗಿರುವ ನೈಜತೆಯನ್ನು ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ವರದಿಯನ್ನಾಧರಿಸಿ ಮಗುವನ್ನು ರಕ್ಷಣೆ ಮಾಡಿ ತಾಯಿಯ ವಿರುದ್ಧ ಪ್ರಕರಣ ದಾಖಲಿ ಸಲು ಸಿದ್ಧತೆ ನಡೆಸಲಾಗಿತ್ತು.
ಅದರಂತೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೈಸೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಸಲಹಾಗಾರ್ತಿ ಶಿಲ್ಪ ಹಾಗೂ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಜಗದೀಶ್, ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾಧಿಕಾರಿ ಶೇಷಾದ್ರಿ, ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಜಶೀಲ, ಅಶ್ವಿನಿ, ಸುಧಾ ಮಗುವಿನೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದ ಸರಗೂರಿನ ಸ್ವಾಮಿ ವಿವೇಕಾನಂದ ಆಸ್ಪತ್ರೆಗೆ ಭೇಟಿ ನೀಡಿ ತಾಯಿ ಮಗುವಿನ ಆರೋಗ್ಯ ವಿಚಾರಣೆ ಮಾಡಿದರು.
ಬಳಿಕ ಆಸ್ಪತ್ರೆಯ ವೈದ್ಯರು ಹಾಗೂ ವೆಂಕಟೇಶ್ ಮೊದಲಾದವರೊಡನೆ ಸಮಾಲೋಚನೆ ನಡೆಸಿದ ಬಳಿಕ ವೈದ್ಯರ ಸಲಹೆಯಂತೆ ಸುಧಾ ಹಾಗೂ ಆಕೆಯ ಮಗುವನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸದೇ ಹಾಡಿ ಮಂದಿಯೊಡನೆ ಚರ್ಚಿಸಿ ಅಲ್ಲಿಯೇ ಇರಿಸಬೇಕು, ಮತ್ತು ಸುಧಾಳನ್ನು ಸಮಾಜಕ ಮುಖ್ಯವಾಹಿನಿಗೆ ತರುವ ಯತ್ನ ನಡೆಸುವಂತೆ ಸಲಹೆ ನೀಡಿದರು.
ಬುಧವಾರ ಹಾಡಿಗೆ ಭೇಟಿ ನೀಡಿ ಹಾಡಿಯ ಮಂದಿಯೊಡನೆ ಸಮಾಲೋಚನೆ ನಡೆಸಿದ ಬಳಿಕ ಸುಧಾಳ ಜೀವನದ ಮುಂದಿನ ಭವಿಷ್ಯದ ಬಗ್ಗೆ ನಿರ್ಧರಿಸುವುದಾಗಿ ತೀರ್ಮಾನಿಸಲಾಗಿದೆ. ಸುಧಾ ಕೂಡ ತನ್ನ ಕುಡಿತದ ಚಾಳಿಯನ್ನು ಮುಂದೆಯೂ ಮುಂದುವರಿಸಿದರೆ ಮಗುವಿನೊಡನೆ ಆಕೆಯನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ಒಪ್ಪಲಾಗಿದೆ. ಸದ್ಯದ ಸ್ಥಿತಿಯಲ್ಲಿ ಸುಧಾ ಹಾಗೂ ಆಕೆಯ ಮಗು ಚೇತರಿಸಿಕೊಂಡಿದ್ದಾರೆ. ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಇವರನ್ನು ಬಿಡುಗಡೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ.