ಡಾ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಅಂಗವಾಗಿ ಡಾ. ವಿಷ್ಣು ಸೇನಾ ಸಮಿತಿಯು ಸೆಪ್ಟೆಂಬರ್ 16, 17 ಹಾಗೂ 18ರಂದು ಒಟ್ಟು ಮೂರು ದಿನಗಳ ಕಾಲ ರಾಷ್ಟ್ರೀಯ ಉತ್ಸವವನ್ನು ಆಯೋಜಿಸುತ್ತಿರುವುದು ಗೊತ್ತೇ ಇದೆ. ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಸುದೀಪ್, ಇದೇ 16ರಂದು ಚಾಲನೆ ನೀಡಲಿದ್ದಾರೆ. ಅಷ್ಟೇ ಅಲ್ಲ, ಉತ್ಸವ ಗೀತೆಗೂ ಸುದೀಪ್ ಧ್ವನಿಯಾಗುತ್ತಿದ್ದಾರೆ.
ಹೌದು, ಡಾ. ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವಕ್ಕೆ ಈಗಾಗಲೇ ಕೆಲಸಗಳು ಆರಂಭವಾಗಿದ್ದು, ಮೂರು ದಿನಗಳ ಕಾಲ ಕಿರುಚಿತ್ರೋತ್ಸವ, ಸಂಗೀತ ಸಂಜೆ, ಚಿತ್ರರಚನಾ ಕಾರ್ಯಾಗಾರ, ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಉತ್ಸವಕ್ಕಾಗಿಯೇ ವಿಶೇಷವಾದ ಗೀತೆಯೊಂದನ್ನು ರಚಿಸಲಾಗಿದ್ದು, ಆ ಗೀತೆಗೆ ಕೆ. ಕಲ್ಯಾಣ್ ಅವರು ಸಾಹಿತ್ಯ ರಚಿಸುವುದರ ಜೊತೆಗೆ ಸಂಗೀತ ಸಂಯೋಜಿಸಿದ್ದಾರೆ.
ಇನ್ನು ಈ ಗೀತೆಗೆ ಸುದೀಪ್ ಅವರು ಧ್ವನಿಯಾಗುತ್ತಿದ್ದು, ಸದ್ಯದಲ್ಲೇ ಹೈದರಾಬಾದ್‌ನಲ್ಲಿ ರೆಕಾರ್ಡಿಂಗ್ ನಡೆಯಲಿದೆ. ವಿಶೇಷವೆಂದರೆ, ಈ ಬಾರಿಯ ಡಾ. ವಿಷ್ಣುವರ್ಧನ ರಾಷ್ಟ್ರೀಯ ಪ್ರಶಸ್ತಿಯನ್ನು, ವಿಷ್ಣು ಅವರ ಜೊತೆಗೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ವಿನಯಾ ಪ್ರಕಾಶ್ ಅವರಿಗೆ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಈ ವರ್ಷದಿಂದ ಡಾ. ವಿಷ್ಣು ಜಯಂತಿಯನ್ನು “ರಾಷ್ಟ್ರೀಯ ಆದರ್ಶ ದಿನ’ವಾಗಿ ಆಚರಿಸಲಾಗುತ್ತಿದೆ. ಥಿಂಕ್ ಗುಡ್ ಡೂ ಗುಡ್ ಎಂಬ ಉದ್ದೇಶದ ಅಡಿಯಲ್ಲಿ ಈ ಆದರ್ಶ ದಿನವನ್ನು ಆಚರಿಸಲಾಗುವುದು.
ವಿಷ್ಣು ಅವರ ಬದುಕು ಮತ್ತು ಸಾಧನೆಗಳನ್ನು ಕಲಾವಿದರ ಕುಂಚದಲ್ಲಿ ಅರಳಿಸಿದರೆ ಹೇಗಿರಬಹುದು ಎಂದು ವಿನೂತನವಾದ ಚಿತ್ರಕಲಾ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಇದಲ್ಲದೆ ವಿಷ್ಣು ಅವರ ಛಾಯಾಚಿತ್ರ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಇದೇ ಸಮಾರಂಭದಲ್ಲಿ ವಿಷ್ಣು ಅವರ ಕುರಿತಾದ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತದೆ.
* ಸೆ 16, 17, 18ಕ್ಕೆ ಡಾ. ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ
* ಸುದೀಪ್‌ರಿಂದ ಉದ್ಘಾಟನೆ, ದಿನೇಶ್ ಗುಂಡುರಾವ್ ಅಧ್ಯಕ್ಷತೆ
* ವಿನಯಾ ಪ್ರಸಾದ್ ಅವರಿಗೆ ಡಾ. ವಿಷ್ಣುವರ್ಧನ್ ರಾಷ್ಟ್ರೀಯ ಪ್ರಶಸ್ತಿ
* ಡಾ. ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ಗೀತೆಗೆ ಸುದೀಪ್ ಗಾಯನ
* ಡಾ. ವಿಷ್ಣು ಜಯಂತಿಯನ್ನು “ರಾಷ್ಟ್ರೀಯ ಆದರ್ಶ ದಿನ’ವಾಗಿ ಆಚರಣೆ
* ಡಾ. ವಿಷ್ಣು ಕುರಿತ ಮೂರು ಪುಸ್ತಕಗಳ ಬಿಡುಗಡೆ