ದೇವನಹಳ್ಳಿ: ದೇವನಹಳ್ಳಿ ಬಯಲುಸೀಮೆ ಪ್ರದೇಶಆಗಿರುವುದರಿಂದ ನೀರಿನ ಅಭಾವದ ನಡುವೆಯೂ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆ ಬೆಳೆಯುವುದರ ಮೂಲಕ ತಮ್ಮ ಜೀವನ ಕಟ್ಟಿಕೊಂಡಿರುವ ರೈತರಿಗೆ ಬರೀ 1600 ರೂ.ಗೆ ಮಾರಾಟ ಆಗುತ್ತಿದ್ದ ಬಿತ್ತನೆ ಆಲೂಗಡ್ಡೆ ಮೂಟೆ 3,200ರಿಂದ 4,300 ರೂ.ಗೆ ದಿಢೀರ್ ಬೆಲೆ ಏರಿಕೆ ಆಗುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಲೂಗಡ್ಡೆ ಬೆಳೆಗಾರರನ್ನು ಬೆಲೆ ಏರಿಕೆ ಬಿಸಿ ದಂಗಾಗಿಸಿದೆ.
ತಿಂಗಳ ಹಿಂದೆ ತೀವ್ರ ಮಳೆಯಿಂದ ಬಿತ್ತನೆ ಆಲೂಗಡ್ಡೆ ಯಾರೂ ಖರೀದಿ ಮಾಡಿರಲಿಲ್ಲ. ಆದರೆ, ಇದೀಗ ಮಳೆ ಪ್ರಮಾಣ ಕಡಿಮೆ ಆಗಿರುವುದರಿಂದ ರೈತರು ಬಿತ್ತನೆಗೆ ಮುಂದಾಗಿರುವ ಕಾರಣಕ್ಕೆ ವಿವಿಧ ಕಡೆಗಳಿಂದ ಬಿತ್ತನೆ ಆಲೂಗಡ್ಡೆ ತರಿಸಿ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ. ಬಿತ್ತನೆ ಆಲೂಗಡ್ಡೆ ಬೆಲೆ ಹೆಚ್ಚಿಸಿರುವುದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ.
ರೈತರಿಗೆ ಸಂಕಷ್ಟ: ಮಳೆಯಿಂದ ಆದ ಬೆಳೆನಷ್ಟದಿಂದ ಈಗಷ್ಟೇ ರೈತರು ಚೇತರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಬೆಳೆ ನಷ್ಟ ಪರಿಹಾರವು ಬಹಳಷ್ಟು ರೈತರ ಕೈ ಸೇರಿಲ್ಲ. ಹೂವು, ಹಣ್ಣು, ತರಕಾರಿ ಮಳೆಗೆ ಕೊಚ್ಚಿಹೋಗಿ ರೈತರು ಇನ್ನಿಲ್ಲದ ಪರಿಪಾಟು ಅನುಭವಿಸುತ್ತಿದ್ದಾರೆ. ಪ್ರಸ್ತುತ ಬಿತ್ತನೆ ಆಲೂಗಡ್ಡೆ 50 ಕೆ.ಜಿ. ಮೂಟೆ ದರ 3000 ರೂಪಾಯಿಗಳಿಂದ 4300 ರೂಪಾಯಿಗಳಿಗೆ ಏರಿಕೆ ಕಂಡಿದೆ. ದೇವನಹಳ್ಳಿ ತಾಲೂಕಿನ ಬಹುತೇಕ ರೈತರು, ಬಿತ್ತನೆ ಆಲೂಗಡ್ಡೆ ತರಲಿಕ್ಕಾಗಿ ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಗೆ ಹೋಗುತ್ತಿದ್ದು, ಅಲ್ಲಿನ ಬೆಲೆ ಕೇಳಿ ಸುಸ್ತಾಗುತ್ತಿದ್ದಾರೆ.
ರೈತರ ಅಸಮಾಧಾನ: ವ್ಯಾಪಾರಸ್ಥರು, ಪಂಜಾಬ್‌ನ ಜಲಂಧರ್‌ನಿಂದ ಚಿಪ್ರೋನಾ, ಚೆಂಬಲ್, ಪೆಪ್ಸಿ, ಜ್ಯೋತಿ ಸೇರಿದಂತೆ ಬಗೆ ಬಗೆಯ ಬಿತ್ತನೆ ಆಲೂಗಡ್ಡೆ ಯನ್ನು ಮಾರುಕಟ್ಟೆಗೆ ತರಿಸುತ್ತಾರೆ. ಬಿತ್ತನೆಗೆ ಅಕ್ಟೋ ಬರ್ ಬಳಿಕ ಸೂಕ್ತ ಸಮಯವಾಗಿರುವ ಕಾರಣ ಕೃತಕ ಅಭಾವ ಸೃಷ್ಟಿ ಮಾಡಲಾಗುತ್ತಿದೆ. ಆದರೆ, ಇತ್ತಿಚೆಗೆ ಸುರಿದ ಧಾರಾಕಾರ ಮಳೆಗೆ ಬಿತ್ತನೆಯ ಆಲೂಗಡ್ಡೆ ತೋಟದಲ್ಲಿ ಕೊಳೆತು ಹಾಳಾಗಿದ್ದು, ಹೊಸದಾಗಿ ಬಿತ್ತನೆ ಕೈಗೊಳ್ಳಲು ಬಯಸಿರುವ ರೈತರಿಗೆ ದರದ ಏರಿಕೆಯ ಬಿಸಿ ತಟ್ಟಿದೆ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೃತಕ ಅಭಾವ ಸೃಷ್ಟಿ : ಕೆಲ ರೈತರು ಹೇಳುವ ಪ್ರಕಾರ, ಅಗತ್ಯ ದಾಸ್ತಾನಿ ದ್ದರೂ ಮಧ್ಯವರ್ತಿಗಳು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಬೆಲೆ ಇಳಿಕೆ, ರೈತರಿಗೆ ಅನುಕೂಲವಾಗುವ ವಿಚಾರವಾಗಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿರು ವುದು ಬೆಳೆಗಾರರ ಅಸಮಾಧಾನಕ್ಕೆ ಕಾರಣವಾಗಿದೆ.
ದೇವನಹಳ್ಳಿ ಭಾಗದಲ್ಲಿ 80ರಿಂದ 120 ಹೆಕ್ಟೇರ್ ಪ್ರದೇಶದಲ್ಲಿ ಆಲೂ ಗಡ್ಡೆ ಬಿತ್ತನೆ ಮಾಡ್ತಾರೆ. ಇವರೆಲ್ಲರೂ ಚಿಕ್ಕಬಳ್ಳಾಪುರದ ಎಪಿಎಂಸಿ.ಮಾರುಕಟ್ಟೆಗೆ ಹೋಗಿ ಬಿತ್ತನೆಗಡ್ಡೆ ತರುತ್ತಾರೆ. ಚಿಕ್ಕಬಳ್ಳಾ ಪುರ ಜಿಲ್ಲೆಯ ಉಪನಿರ್ದೇಶಕರನ್ನು ಸಂಪರ್ಕ ಮಾಡಿದ್ದೇವೆ. ಅವರು ಜಿಲ್ಲಾಧಿ ಕಾರಿ ಸಂಪರ್ಕ ಮಾಡುತ್ತಿದ್ದಾರೆ. ನಾವು ಕೂಡಾ ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ನಡೆಸುತ್ತೇವೆ.
– ಗುಣವಂತ, ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ
ಬೆಲೆಯು ದಿಢೀರನೇ ಏರಿಕೆ ಆಗಿರುವುದರಿಂದ ರೈತರು ತೊಂದರೆ ಅನುಭವಿಸು ವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಅನಿವಾರ್ಯವಾಗಲಿದೆ. ಕಳೆದ ಹತ್ತು ವರ್ಷಗಳಿಂದ ಆಲೂಗೆಡ್ಡೆ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದೇವೆ. 4,300 ರೂ. ಕೊಟ್ಟು ಆಲೂಗಡ್ಡೆ ಬಿತ್ತನೆ ಬೀಜ ತರುತ್ತಿದ್ದೇವೆ. ಸರಿಯಾದ ರೀತಿ ಬಿತ್ತನೆ ಬೀಜ ಸಿಗುತ್ತಿಲ್ಲ.
– ಪುರುಷೋತ್ತಮ್‌ಕುಮಾರ್, ಆಲೂಗಡ್ಡೆ ರೈತ ಬೈಚಾಪುರ
– ಎಸ್. ಮಹೇಶ್