ಹುಣಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತ ಲಕ್ಷಾಂತರ ಮಂದಿ ಗಮನ ಸೆಳೆದಿದ್ದ ದ್ರೋಣ(39) ಶುಕ್ರವಾರ ದಿಢೀರ್ ತೀವ್ರ ಅಸ್ವಸ್ಥಗೊಂಡು ಮೃತಪ್ಪಟ್ಟಿದೆ. ನಾಗರಹೊಳೆ ಉದ್ಯಾನದ ಮತ್ತಿಗೋಡು ವಲಯದ ಕಂಠಾಪುರ ಆನೆ ಶಿಬಿರದಲ್ಲಿ ಆಶ್ರಯ ಕಲ್ಪಿಸಿದ್ದ ದ್ರೋಣ ಮೂರು ಬಾರಿ ದಸರಾದಲ್ಲಿ ಭಾಗವಹಿಸಿದ್ದ.
ಎಲ್ಲರ ಪ್ರೀತಿಯ ಆನೆ: ಈ ಆನೆಯು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದನಲ್ಲದೇ ಮಾವುತ-ಕವಾಡಿಗಳ ಆಜ್ಞೆಯನ್ನು ಶಿರಸಾ ಪಾಲಿಸುತ್ತಿತ್ತು. ಶಿಬಿರದ ಮಕ್ಕಳ ಪ್ರೀತಿಗೂ ಪಾತ್ರನಾಗಿದ್ದ. ಶುಕ್ರವಾರ ಶಿಬಿರದಲ್ಲಿದ್ದ ದ್ರೋಣನನ್ನು ನೀರು ಕುಡಿಸಲು ಕಂಠಾಪುರ ಕೆರೆಗೆ ಕರೆದೊಯ್ಯುವ ವೇಳೆ ಮಂಕಾದಂತೆ ಕಂಡುಬಂತು. ಕೆರೆಗೆ ಕರೆದೊಯ್ಯುತ್ತಿರುವಾಗಲೇ ಕ್ಯಾಂಪ್ ಬಳಿಯೇ ಕುಸಿದು ಸಾವನ್ನಪ್ಪಿದ್ದು, ಬಿರುಬೇಸಿಗೆಯ ಪ್ರಕರತೆ ತಾಳಲಾಗದೆ, ಆಹಾರದ ಕೊರತೆಯೋ, ಕಲುಷಿತ ಆಹಾರ ಸೇವನೆಯಿಂದಲೋ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಇಂದು ಶವ ಪರೀಕ್ಷೆ: ಮೃತ ದ್ರೋಣನ ಶವ ಪರೀಕ್ಷೆ ಶನಿವಾರ ಬೆಳಗ್ಗೆ ನಡೆಯಲಿದ್ದು, ಆರೋಗ್ಯದಿಂದಿದ್ದ ದ್ರೋಣ ಹೃದಯಾಘಾತದಿಂದ ಅಥವಾ ಬೇರೆ ಕಾರಣಕ್ಕೆ ಸಾವನ್ನಪ್ಪಿರಬಹುದೇ ಎಂಬುದು ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ನಾಗರಹೊಳೆ ಅರಣ್ಯ ಸಂರಕ್ಷಣಾಧಿಕಾರಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಸೌಮ್ಯ ಸ್ವಭಾವದ ದ್ರೋಣ: 2016ರಲ್ಲಿ ಹಾಸನದ ಎಸಳೂರಿನಲ್ಲಿ ದ್ರೋಣನನ್ನು ಸೆರೆ ಹಿಡಿದು, ಆನೆಚೌಕೂರು ಶಿಬಿರದ ಕ್ರಾಲ್‌ನಲ್ಲಿ ಕೂಡಿಹಾಕಿ ಪಳಗಿಸಲಾಗಿತ್ತು. ಸೌಮ್ಯ ಸ್ವಭಾವ ಹೊಂದಿದ್ದ ದ್ರೋಣ 2017 ಮತ್ತು 2018 ರಲ್ಲಿ ದಸರಾದಲ್ಲಿ ಸಂಭ್ರದಿಂದ ಪಾಲ್ಗೊಂಡಿದ್ದ.
ಕಣ್ಣಿರು ಹಾಕಿದರು: ಶಿಬಿರದಲ್ಲಿ ಎಲ್ಲಾ ಆನೆಗಳೊಂದಿಗೆ ಬೆರೆಯುತ್ತಿದ್ದ ದ್ರೋಣ ಎಂದಿಗೂ ಯಾರಿಗೂ ತೊಂದರೆ ಕೊಟ್ಟವನಲ್ಲ. ಇದುವರೆಗೆ ಕಾಯಿಲಿ ಬಿದ್ದಿರಲಿಲ್ಲ. ಶಿಬಿರಕ್ಕೆ ಬಂದ ನಂತರ ಇದುವರೆಗೂ ಯಾವುದೇ ಚಿಕಿತ್ಸೆ ಪಡೆಯದ ದ್ರೋಣನ ಸಾವು ನೋವು ತಂದಿದೆ ಎನ್ನುತ್ತಲೇ ಮಾವುತ ಗುಂಡ, ಕವಾಡಿ ರವಿ ಮಾತ್ರವಲ್ಲದೆ ಸಾಕಾನೆ ಶಿಬಿರದ ಕಾಡಕುಡಿಗಳು ಸಹ ಕಣ್ಣೀರು ಹಾಕಿದರು.