Advertisement

ಬೆಲೆ ಏರಿಕೆ ವಿರೋಧಿಸಿ ಎಸ್‌ಯುಸಿಐ ಪ್ರತಿಭಟನೆ

05:24 PM Jun 21, 2022 | Shwetha M |

ವಿಜಯಪುರ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ಎಸ್‌ ಯುಸಿಐ ಕಮ್ಯೂನಿಷ್ಟ್ ಪಕ್ಷದ ಕಾರ್ಯಕರ್ತರು ನಗರದ ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

Advertisement

ಈ ವೇಳೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ಭಗವಾನರೆಡ್ಡಿ ಮಾತನಾಡಿ, ಬೆಲೆ ಏರಿಕೆಯಿಂದ ಬಡವರ ಬದುಕು ಬೀದಿಗೆ ಬಿದ್ದಿದೆ. ಸಾಮಾನ್ಯ ಜನರು ಕೆಲಸವಿಲ್ಲದೇ ಜೀವನ ನಿರ್ವಹಣೆ ಮಾಡಲು ಪರದಾಡುವಂತಾಗಿದೆ. ನಿತ್ಯ ಬದುಕಿಗೆ ಬೇಕಾದ ಊಟ, ಬಟ್ಟೆಗೆ ಎಲ್ಲಿಂದ ತರುವುದು ಎಂಬ ಪ್ರಶ್ನೆ ಜನ ಸಾಮಾನ್ಯರನ್ನು ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕನಿಷ್ಟ ಆಹಾರ ದಿನಿಸುಗಳೂ ಸಹಿತ ಕಡಿಮೆ ಬೆಲೆಗೆ ಸಿಗುತ್ತಿಲ್ಲ. ಅಕ್ಕಿ, ಬೇಳೆ, ಅಡುಗೆ ಎಣ್ಣೆಗಳ ಬೆಲೆ ಗಗನ ಮುಟ್ಟಿವೆ. ಸೊಪ್ಪು, ತರಕಾರಿಗಳೂ ಕೂಡಾ ಶ್ರೀಮಂತರ ಅಡುಗೆ ದಿನಿಸಾಗಿವೆ. ಇದಕ್ಕೆಲ್ಲ ಕೇಂದ್ರ ಬಿಜೆಪಿ ಸರ್ಕಾರದ ಕೆಟ್ಟ ಆಡಳಿತವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯ ಎಚ್‌ .ಟಿ.ಮಲ್ಲಿಕಾರ್ಜುನ ಮಾತನಾಡಿ, ದೇಶ ಒಂದೆಡೆ ನಿರುದ್ಯೋಗದಿಂದ ಬಳಲುತ್ತಿದೆ. ಆದರೆ ಸರ್ಕಾರ ಮಾತ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರುತ್ತಿದೆ. ಈ ಕೆಟ್ಟ ನೀತಿಯಿಂದ ಸರ್ಕಾರ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಇದ್ದ ಉದ್ಯೋಗಗಳನ್ನು ಕಳೆದುಕೊಂಡು ಕೋಟ್ಯಂತರ ಕಾರ್ಮಿಕರು, ಜನ ಬೀದಿ ಪಾಲಾಗುತ್ತಿದ್ದಾರೆ. ಸ್ವಾತಂತ್ರ್ಯಾ ನಂತರದ ಈ 75 ವರ್ಷಗಳಲ್ಲಿ ಇಂದು ನಾವು ಅತ್ಯಂತ ಗಂಭೀರ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದೇವೆ. ಸರ್ಕಾರ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಪ್ರತಿ ವರ್ಷ ಹೊಸ ಉದ್ಯೋಗ ಸೃಷ್ಟಿಸಲು ಉತ್ತಮ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದರು.

Advertisement

ನಿವೃತ್ತ ಪ್ರಾಚಾರ್ಯ ಪ್ರೊ| ವಿ.ಎ.ಪಾಟೀಲ ಮಾತನಾಡಿ, ಸರ್ಕಾರ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ನಿಯಂತ್ರಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಬದಲಿಗೆ ಜನತೆಯ ಸಿಟ್ಟು, ಆಕ್ರೋಶದ ದಿಕ್ಕು ತಪ್ಪಿಸಲು ಹುನ್ನಾರ ನಡೆಸುತ್ತಿದೆ. ಜನರಲ್ಲಿ ಕೋಮು ಭಾವನೆ ಪ್ರಚೋದಿಸುವವರ ವಿರುದ್ಧ ಕ್ರಮ ಕೈಗೊಳ್ಳದೇ ಪ್ರೋತ್ಸಾಹಿಸಿ ಪೋಷಿಸುತ್ತಿದೆ ಎಂದು ದೂರಿದರು.

ಹಿಜಾಬ್‌, ಹಲಾಲ್‌ ಮುಂತಾದ ಅಪ್ರಸ್ತುತ ವಿಷಯವನ್ನು ಚರ್ಚೆಗೆ ತರಲಾಗುತ್ತಿದೆ. ಇದರಿಂದ ಜನರ ಜೀವನ ಮಟ್ಟ ಸುಧಾರಿಸಲು ಸಾಧ್ಯವಾಗುವುದಿಲ್ಲ. ಸಮಾಜ ಘಾತುಕ ಶಕ್ತಿಗಳನ್ನು ಮಟ್ಟಹಾಕಲು ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಎಚ್‌.ಟಿ.ಭರತಕುಮಾರ, ಮಹಾದೇವಿ ಧರ್ಮಶೆಟ್ಟಿ, ಶಿವರಂಜಿನಿ, ಶಿವಾನಂದ, ಅನುರಾಗ, ಫಾತಿಮಾ, ದ್ಯಾಮಣ್ಣ, ಕೇದಾರ ಬಳಗಾನೂರ, ಪ್ರದೀಪ ಖಾನಾಪುರ, ಸಣ್ಣಪ್ಪ ವಾಲೀಕಾರ, ಪದ್ಮಣ್ಣ ಪೂಜಾರಿ, ಪ್ರಸನ್ನ, ಇಸಾಕ್‌, ಅಜೀತ್‌ ಮನಗೂಳಿ, ದೀಪಾ ವಡ್ಡರ, ಕಾವೇರಿ ರಜಪೂತ, ಸುರೇಖಾ ಕಡಪಟ್ಟಿ, ಅರ್ಪಿತಾ ಸೋಲಂಕಿ, ಸಮೀನಾ ಸೈಯದ್‌, ಯಲ್ಲುಬಾಯಿ ಬೋರಮ್ಮ, ಜ್ಯೋತಿ ಕೊಕಟನೂರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next