Advertisement

ಕಿಟ್ಟಪ್ಪನ ಸಿಟಿ ಟೂರ್‌

07:35 PM Apr 13, 2020 | |

ಶ್ರೀನಗರ ಕಿಟ್ಟಿ ಮತ್ತು ಪ್ರದೀಪ್‌ ಇಬ್ಬರೂ ಒಂದು ದೊಡ್ಡ ಬ್ರೇಕ್‌ಗಾಗಿ ಕಾದಿದ್ದಾರೆ ಎಂದರೆ ತಪ್ಪಿಲ್ಲ. ಇಬ್ಬರೂ ಹಲವು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದವರು. ಸೋಲು-ಗೆಲುವು ಎಲ್ಲವನ್ನೂ ಕಂಡವರು. ಕಳೆದ ಎರಡೂವರೆ, ಮೂರು
ವರ್ಷಗಳಿಂದ ಒಂದರ್ಥದಲ್ಲಿ ಅಜ್ಞಾತವಾಸದಲ್ಲಿದ್ದವರು. ಈಗ ಇಬ್ಬರ ಚಿತ್ರವೂ ಇವತ್ತು ಬಿಡುಗಡೆಯಾಗುತ್ತಿದೆ. “ಸಿಲಿಕಾನ್‌ ಸಿಟಿ’ ಎಂಬ ಚಿತ್ರದ ಮೂಲಕ ಕಿಟ್ಟಿ ಬರುತ್ತಿದ್ದರೆ, “ಟೈಗರ್‌’ ಆಗಿ ಪ್ರದೀಪ್‌ ಎಂಟ್ರಿ ಕೊಡುತ್ತಿದ್ದಾರೆ. ಈ ಎರಡು ಚಿತ್ರಗಳಿಗೆ ಕಂಬ್ಯಾಕ್‌ ಸಿನಿಮಾ ಎಂದು ಕರೆಯಬಹುದಾ? ಈ ಗ್ಯಾಪ್‌ನಲ್ಲಿ ಇಬ್ಬರೂ ಏನು ಮಾಡುತ್ತಿದ್ದರು? ಸಕ್ಸಸ್‌ ಇಲ್ಲದೆ ಮನಸ್ಥಿತಿ ಹೇಗಿತ್ತು? ಈ ಚಿತ್ರಗಳು ಇಮೇಜ್‌ ಬದಲಿಸುತ್ತವೆ ಎಂಬ ನಂಬಿಕೆ ಇದೆಯಾ? ಈ ಚಿತ್ರಗಳಿಂದ ಚಿತ್ರರಂಗದಲ್ಲಿ ಗಟ್ಟಿ ನೆಲೆ ಸಿಗಬಹುದೆಂಬ ಖಾತ್ರಿ ಇದೆಯಾ? ಮುಂದಿನ ಜರ್ನಿ ಯಾವ ತರಹದಿರುತ್ತದೆ? ಎಂಬಂತಹ ಹಲವಾರು ಪ್ರಶ್ನೆಗಳು ಅವರಿಬ್ಬರ ಬಗ್ಗೆ ಕಾಡುವುದು ಉಂಟು. ಈ ಪ್ರಶ್ನೆಗಳನ್ನು ಅವರೆದುರು ಇಟ್ಟಾಗ, ಅವರಿಂದ ಬಂದ ಉತ್ತರಗಳು ಹೀಗಿವೆ.

Advertisement

ನಾನು ಚಿತ್ರರಂಗ ಬಿಟ್ಟು ಹೋಗಿದ್ದರೆ ಕಂಬ್ಯಾಕ್‌ ಅನ್ನಬಹುದಿತ್ತು. ಆದರೆ, ನಾನು ಚಿತ್ರರಂಗದಲ್ಲೇ ಇದ್ದೆ. ಬೇರೆ ಬೇರೆ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದೆ. ಈಗ “ಸಿಲಿಕಾನ್‌ ಸಿಟಿ’ ಬಿಡುಗಡೆಗೆ ಸಿದ್ಧವಾಗಿದೆ. ತುಂಬಾ ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾವಿದು. ನಾನು ತುಂಬಾ ಇಷ್ಟಪಟ್ಟು ಒಪ್ಪಿಕೊಂಡ ಸಿನಿಮಾ. ಅದರಂತೆ ಚಿತ್ರೀಕರಣ ಕೂಡಾ ಸಾಂಗವಾಗಿ ಮುಗಿದು ಈಗ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ ಇದಾಗಿರುವುದರಿಂದ ಮನೆಮಂದಿಯೆಲ್ಲಾ ನೋಡುತ್ತಾರೆಂಬ ವಿಶ್ವಾಸವಿದೆ. ಇತ್ತೀಚೆಗೆ ಸಿನಿಮಾ ನೋಡಿದೆ. ಸಿಕ್ಕಾಪಟ್ಟೆ ಇಷ್ಟ ಆಯಿತು. ನನ್ನ ಸಿನಿಮಾ ಎಂದಾಕ್ಷಣ ಕೆಟ್ಟ ಸಿನಿಮಾವನ್ನು ಚೆನ್ನಾಗಿದೆ ಎಂದು ಹೇಳುವುದಿಲ್ಲ.

ನಾವು ಎಷ್ಟೇ ಚೆನ್ನಾಗಿ ಸಿನಿಮಾ ಮಾಡಿದರೂ ಅದನ್ನು ಜನರಿಗೆ ತಲುಪಿಸಬೇಕಾದರೆ ಸಿನಿಮಾದ ಪ್ರಮೋಶನ್‌ ಚೆನ್ನಾಗಿ ಮಾಡಲೇಬೇಕು. ಆ ವಿಚಾರದಲ್ಲಿ ನಮ್ಮ “ಸಿಲಿಕಾನ್‌ ಸಿಟಿ’ ಸಿನಿಮಾದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ಎಲ್ಲಾ ಕಡೆಗಳಿಂದಲೂ ಪಾಸಿಟಿವ್‌ ರೆಸ್ಪಾನ್ಸ್‌ ಸಿಗುತ್ತಿದೆ. ಇತ್ತೀಚೆಗೆ  ಬೇರೆ ಬೇರೆ ಊರುಗಳಿಗೆ ಹೋಗಿದ್ದೆವು. ಅಲ್ಲೆಲ್ಲರಿಗೂ ನಮ್ಮ ಸಿನಿಮಾದ ಬಗ್ಗೆ ಗೊತ್ತಿದೆ. ಅಲ್ಲಿಗೆ ನಮ್ಮ ಸಿನಿಮಾ ಅವರಿಗೆ ತಲುಪಿದೆ ಎಂದಾಯಿತು. ಇದು ಇಂದಿನ ಟ್ರೆಂಡ್‌ಗೆ ಹೇಳಿಮಾಡಿಸಿದ ಸಿನಿಮಾ. ಇಲ್ಲಿ ಎಲ್ಲಾ ಪಾತ್ರಗಳನ್ನು ತುಂಬಾ ಚೆನ್ನಾಗಿ ಬ್ಯಾಲೆನ್ಸ್‌ ಮಾಡಿದ್ದಾರೆ ನಿರ್ದೇಶಕರು.  2 ಗಂಟೆ 7 ನಿಮಿಷ ಈ ಸಿನಿಮಾ ಪ್ರೇಕ್ಷಕರಿಗೆ ಮಜಾ ಕೊಡುತ್ತದೆ ಎಂಬ ವಿಶ್ವಾಸ ಇದೆ. ಒಂದು ಅದ್ಭುತವಾದ ಕಥೆಯನ್ನು ಅಷ್ಟೇ ಅದ್ಭುತವಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಇಲ್ಲಿ ನಾನು ಜವಾಬ್ದಾರಿಯುತ ಅಣ್ಣನಾಗಿ ಕಾಣಿಸಿಕೊಂಡಿದ್ದೇನೆ.

ನನ್ನ ಸಿನಿಮಾ ಬಂದು ಎರಡು ವರ್ಷ ಆಗಿರಬಹುದು. ಹಾಗಂತ ಈ ಗ್ಯಾಪ್‌ನಲ್ಲಿ ನಾನು ಸುಮ್ಮನೆ ಕುಳಿತಿಲ್ಲ. ನನ್ನ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದೆ. “ಪಾಪು’ ಸಿನಿಮಾದ ಕೆಲಸ ಮುಗಿಸಿಕೊಟ್ಟಿದ್ದೇನೆ. ಅದು ಬಿಟ್ಟರೆ ಕೆಲವು ಸಿನಿಮಾಗಳ ಚಿತ್ರೀಕರಣ ಬಾಕಿ ಇತ್ತು. ಅದನ್ನು ಕೂಡಾ ಮುಗಿಸಿದ್ದೇನೆ. ಅದು ಬಿಟ್ಟರೆ
ಒಂದಷ್ಟು ಕಥೆ ಕೇಳಿದ್ದೇನೆ. ಒಟ್ಟಾರೆಯಾಗಿ ಹೇಳುವುದಾದರೆ ನಾನು ಸಿನಿಮಾ ಕೆಲಸದಲ್ಲೇ ಬಿಝಿಯಾಗಿದ್ದೆ.

ತಯಾರಿ ಬಗ್ಗೆ ಹೇಳುವುದಾದರೆ “ಸಿಲಿಕಾನ್‌ ಸಿಟಿ’ಗೆ ಹೇಳಿಕೊಳ್ಳುವಂತಹ ತಯಾರಿಯೇನು ಮಾಡಿಕೊಂಡಿಲ್ಲ. ಅದು ನಾವು-ನೀವು ದಿನನಿತ್ಯ ನೋಡುವಂತಹ, ನಮ್ಮ ಸುತ್ತವೇ ಇರುವಂತಹ ಒಂದು ಪಾತ್ರ. ಹಾಗಾಗಿ, ಈ ಸಿನಿಮಾಕ್ಕೆ ಹೆಚ್ಚಿನ ತಯಾರಿಯೇನೂ ಮಾಡಿಕೊಂಡಿಲ್ಲ. ಕಥೆ ವಿಷಯದಲ್ಲಿ ಹೊಸ ಬಗೆಯ ಕಥೆಗಳನ್ನು ನಿರೀಕ್ಷೆ ಮಾಡುತ್ತಿದ್ದೇನೆ.

Advertisement

ಸಕ್ಸಸ್‌ ಸಿಗೋದು, ಬಿಡೋದು ನಮ್ಮ ಕೈಯಲ್ಲಿ ಇಲ್ಲ. ಒಬ್ಬ ಕಲಾವಿದನಾಗಿ ನನಗೆ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ ಖುಷಿ ಇದೆ. ಒಂದಂತೂ ಖುಷಿ ಇದೆ, ಯಾವುದೇ ಕೆಟ್ಟ ಸಿನಿಮಾಗಳನ್ನು, ಪಾತ್ರಗಳನ್ನೂ ಮಾಡಿಲ್ಲ. ಸಿನಿಮಾ ಗೆಲ್ಲೋದು, ಬಿಡೋದು ಆ ಮೇಲಿನ ಮಾತು. ಒಬ್ಬ ಕಲಾವಿದನಾಗಿ ನಾನು ಮಾಡಿದ ಪಾತ್ರಗಳ ಬಗ್ಗೆ ನನಗೆ ಖುಷಿ ಇದೆ. ಈಗ ಸಿನಿಮಾ ನೋಡುಗರ ಮನಸ್ಥಿತಿ ಬದಲಾಗಿದೆ. ಒಳ್ಳೆಯ ಸಿನಿಮಾಗಳನ್ನು ಸ್ವೀಕರಿಸುತ್ತಿದ್ದಾರೆ. ಪ್ರೇಕ್ಷಕನಿಗೆ ಒಮ್ಮೆ ಸಿನಿಮಾ ಇಷ್ಟವಾದರೆ ಆ ಸಿನಿಮಾವನ್ನು ಆತನೇ ದೊಡ್ಡ ಯಶಸ್ಸಿನತ್ತ ಕೊಂಡೊಯ್ಯುತ್ತಾನೆ. ಆ ದೃಷ್ಟಿಯಲ್ಲಿ ಮತ್ತಷ್ಟು ವಿಭಿನ್ನ ಪಾತ್ರಗಳನ್ನು ಮಾಡುವತ್ತ ಗಮನಹರಿಸುತ್ತಿದ್ದೇನೆ. ನೋಡುಗರ ಮನಸ್ಥಿತಿಗೆ ತಕ್ಕಂತೆ ಸಿನಿಮಾ ಮಾಡಬೇಕು, ಯಶಸ್ವಿ ಸಿನಿಮಾಗಳನ್ನು ಕೊಡಬೇಕೆಂಬ ಆಸೆ ಇದೆ. ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ. “ಸಿಲಿಕಾನ್‌ ಸಿಟಿ’ ಆ ತರಹದ ಪ್ರಯತ್ನಗಳಲ್ಲಿ ಒಂದು.

“ಸಿಲಿಕಾನ್‌ ಸಿಟಿ’ ಇಮೇಜ್‌ ಬದಲಿಸುತ್ತದೆ ಎನ್ನಲ್ಲ. ಮೊದಲೇ ಹೇಳಿದಂತೆ ಇದೊಂದು ನಮ್ಮ-ನಿಮ್ಮೊಳಗಿರುವ ಪಾತ್ರ. ಇಲ್ಲಿ ಹೀರೋ ಎಂಟು ಜನರಿಗೆ ಹೊಡೆಯೋದಿಲ್ಲ. ನನಗೆ ಆ ತರಹ ಮಾಡೋದು ಕೂಡಾ ಇಷ್ಟವಿಲ್ಲ. ಜನ ನೈಜತೆಯನ್ನು ಇಷ್ಟಪಡುತ್ತಾರೆ. ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವ ಮಗ, ತಮ್ಮನ ಪ್ರೀತಿಯ ಅಣ್ಣನ ಪಾತ್ರ ಮಾಡಿದ್ದೇನೆ. ಹಾಗಾಗಿ, ಇಲ್ಲಿ ಇಮೇಜ್‌ ಪ್ರಶ್ನೆ ಬರೋದಿಲ್ಲ. ಅದಕ್ಕಿಂತ ಹೆಚ್ಚಾಗಿ ನಾನು ಯಾವುದೇ ಒಂದು ಇಮೇಜ್‌ಗೆ ಅಂಟಿಕೊಂಡಿಲ್ಲ. ನನಗೆ ಇಷ್ಟವಾದ ಪಾತ್ರಗಳನ್ನು ಮಾಡುತ್ತಾ ಬಂದಿದ್ದೇನೆ.

ಸಿನಿಮಾದಲ್ಲೇ ಹೊಸ ಬಗೆಯ ಪಾತ್ರ ಮಾಡಬೇಕು. ಈಗಾಗಲೇ “ಮೋಡ ಕವಿದ ವಾತಾವರಣ’ ಎಂಬ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದೇನೆ. ಫ‌ಸ್ಟ್‌ಹಾಫ್ ಸ್ಕ್ರಿಪ್ಟ್ ರೆಡಿಯಾಗಿದೆ. ತುಂಬಾ ಚೆನ್ನಾಗಿ ಬಂದಿದೆ. ನಾನು ಗಡ್ಡಬಿಟ್ಟಿದ್ದು ಕೂಡಾ ಅದೇ ಸಿನಿಮಾಕ್ಕಾಗಿ. ನಾಯಕಿಯ ಆಯ್ಕೆಯಾದ ಕೂಡಲೇ ಫೋಟೋಶೂಟ್‌ ಮಾಡುವ ಉದ್ದೇಶವಿದೆ.

ನನಗೂ ರೆಗ್ಯುಲರ್‌ ಸಿನಿಮಾಗಳ ಹೊರತಾಗಿ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಬೇಕೆಂಬ ಆಸೆ ಇದೆ. ಅದು ಪ್ರತಿ ಕಲಾವಿದನ ಆಸೆ ಕೂಡಾ. ಆ ತರಹದ ಸ್ಕ್ರಿಪ್ಟ್ ಬಂದರೆ ಮಾಡುತ್ತೇನೆ. ಅದಕ್ಕಿಂತ ಮುಂಚೆ ನಾಟಕವೊಂದನ್ನು ಮಾಡಬೇಕೆಂಬ ಆಸೆಯಾಗಿದೆ. ಈಗಿನ ನನ್ನ ವಯಸ್ಸಿಗೆ ತಕ್ಕಂತಹ ಪಾತ್ರ ಬೇಕು. ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಹೊಸ ಸಿನಿಮಾ ಆರಂಭವಾಗುವ ಮುನ್ನ ನಾಟಕ ಮಾಡಬೇಕು.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next