Advertisement

ಸುಚಿತ್ರದ ಚಿತ್ರ ನೋಟ ಇನ್ನು ಸಂಪೂರ್ಣ ಬದಲು!

08:25 AM Apr 26, 2018 | Karthik A |

ಮಹಾನಗರ: ನಗರದಲ್ಲಿ ಪ್ರತಿಷ್ಠಿತ ಮಾಲ್‌ಗ‌ಳು ಬಂದು ಅಲ್ಲಿ ಮಲ್ಟಿಪ್ಲೆಕ್ಸ್‌ ಥಿಯೇಟರ್‌ಗಳ ಜಮಾನ ಸೃಷ್ಟಿಯಾದ ಬಳಿಕ ಬಹುತೇಕ ಸಿಂಗಲ್‌ ಥಿಯೇಟರ್‌ಗಳು ಭವಿಷ್ಯ ಕಳೆದುಕೊಳ್ಳಲಿದೆ ಎಂಬ ಆತಂಕ ಸೃಷ್ಟಿಯಾಗಿತ್ತು. ಆದರೆ ಇದಕ್ಕೆ ಅಪವಾದವೆಂಬಂತೆ ಸುಚಿತ್ರ ಥಿಯೇಟರ್‌ ಮಲ್ಟಿಪ್ಲೆಕ್ಸ್‌ಗಳನ್ನೂ  ಮೀರಿಸುವ ರೀತಿಯಲ್ಲಿ ಸಜ್ಜುಗೊಳ್ಳುತ್ತಿದೆ.

Advertisement

ಜಿಲ್ಲೆಯ ಯಾವುದೇ ಸಿಂಗಲ್‌ ಥಿಯೇಟರ್‌ನಲ್ಲಿ ಇಲ್ಲದ ಹವಾನಿಯಂತ್ರಿತ ವ್ಯವಸ್ಥೆ, ಆಧುನಿಕ ಶೈಲಿಯ ಸೌಂಡ್‌ ಸಿಸ್ಟಂ, ಅತ್ಯಾಧುನಿಕ ತಂತ್ರಜ್ಞಾನದ ಪ್ರೊಜೆಕ್ಟರ್‌ ಸುಚಿತ್ರಾದಲ್ಲಿರಲಿದೆ. ಇದು ಕರಾವಳಿಯ ಸಿನೆಮಾ ಥಿಯೇಟರ್‌ಗಳ ಪಾಲಿಗೆ ಹೊಸ ಅನುಭವ. ಮೊದಲ ಬಾರಿಗೆ ಸುಚಿತ್ರದಲ್ಲಿ 4ಕೆ ಡಿಜಿಟಲ್‌ ಸಿನೆಮಾ ತಂತ್ರಜ್ಞಾನವನ್ನು ಬಳಸಲಾಗಿದೆ. 64 ಚಾನೆಲ್‌ ಡಾಲ್ಬಿ Atmos ಸಿಸ್ಟಂನಲ್ಲಿ ಇಲ್ಲಿ ಇರಲಿದೆ. ಇದರಿಂದಾಗಿ ತೆರೆಯ ಮೇಲೆ ಕಾಣುವ ಪ್ರತೀ ಸಿನೆಮಾದ ಸೌಂಡ್‌ ವೀಕ್ಷಕರಿಗೆ ರೋಚಕ ಅನುಭವ ನೀಡಲಿದೆ.

ಈ ಚಿತ್ರಮಂದಿರದ ನವೀಕರಣದ ಕೆಲಸವನ್ನು ಜೂನ್‌ನಿಂದ ಆರಂಭಿಸಲಾಗಿದ್ದು, ಕೊನೆಯ ಹಂತದ ಕಾಮಗಾರಿಗಳು ಚಾಲ್ತಿಯಲ್ಲಿವೆ. ದೇಶದಲ್ಲಿ ಮೊದಲ ಬಾರಿಗೆ 2012ರಲ್ಲಿ ಡಾಲ್ಬಿ Atmos ಸ್ಕ್ರೀನ್‌ ವ್ಯವಸ್ಥೆ ಜಾರಿಗೆ ಬಂದಿತ್ತು. ದೇಶದ ಸುಮಾರು 400 ಸ್ಕ್ರೀನ್‌ಗಳಲ್ಲಿ ಪ್ರಸ್ತುತ ಈ ವ್ಯವಸ್ಥೆ ಇದೆ. ಇದರಿಂದ ಥಿಯೇಟರ್‌ನ ನಾಲ್ಕೂ ಮೂಲೆಗಳಲ್ಲಿ ಪ್ರೇಕ್ಷಕನ ಕಿವಿಗೆ ಪ್ರಭಾವಶಾಲಿಯಾಗಿ ಸಿನೆಮಾದಲ್ಲಿನ ಧ್ವನಿ ಕೇಳುತ್ತದೆ. ವಿಶೇಷವೆಂದರೆ, ಸಿನೆಮಾದಲ್ಲಿನ ವ್ಯಕ್ತಿಯ ಉಸಿರಾಟವೂ ಪ್ರೇಕ್ಷಕನಿಗೆ ಸ್ಪಷ್ಟವಾಗಿ ಕೇಳಿಸಬಲ್ಲದು.

80 ಸ್ಪೀಕರ್‌!
ಮಂಗಳೂರು ವ್ಯಾಪ್ತಿಯ ಪ್ರಸಿದ್ಧ ಸಿನೆಮಾ ವಿತರಕ ಸಮೂಹವಾದ ಎಸ್‌.ಪಿ. ಸಿನೆಮಾಸ್‌ನಡಿ ಸುಚಿತ್ರ ಥಿಯೇಟರ್‌ ಪೂರ್ಣವಾಗಿ ಬದಲಾಗಿದೆ. ಥಿಯೇಟರ್‌ನಲ್ಲಿ ಒಟ್ಟು 80 ಸ್ಪೀಕರ್‌ಗಳನ್ನು ಸುತ್ತಲೂ ಅಳವಡಿಸಲಾಗಿದೆ. ಮಳೆಯ ದೃಶ್ಯ ಅತ್ಯಂತ ಸ್ಪಷ್ಟವಾಗಿ ಪ್ರೇಕ್ಷಕನಿಗೆ ಕೇಳಬೇಕು ಎಂಬ ಹಿನ್ನೆಲೆಯಲ್ಲಿ ಥಿಯೇಟರ್‌ನ ಮೇಲ್ಭಾಗದಲ್ಲೂ ಸ್ಪೀಕರ್‌ ಅಳವಡಿಸಲಾಗಿದೆ. ಥಿಯೇಟರ್‌ನ ಬಾಲ್ಕನಿಯಲ್ಲಿ 272 ಹಾಗೂ ಕೆಳಗಡೆ 534 ಸೀಟ್‌ ವ್ಯವಸ್ಥೆ ಇದ್ದು, ಆನ್‌ಲೈನ್‌ ಬುಕ್ಕಿಂಗ್‌ ಅವಕಾಶವೂ ಇರಲಿದೆ. ಥಿಯೇಟರ್‌ನ ಕ್ಯಾಂಟೀನ್‌ ವ್ಯವಸ್ಥೆಯೂ ಸುಧಾರಣೆಯಾಗಲಿದೆ.

1976ರಿಂದ ಚಿತ್ರ ಪ್ರದರ್ಶನ ಆರಂಭ
ಕೆ.ಎಸ್‌. ರಾವ್‌ ರಸ್ತೆಯ ಪ್ರಭಾತ್‌ ಚಿತ್ರ ಮಂದಿರದ ಬಳಿಯ ಆವರಣವನ್ನು 1970ರಲ್ಲಿ ಸ್ವಾಧೀನಪಡಿಸಿಕೊಂಡ ಬೆಂಗಳೂರಿನ  ಡಿ.ಎನ್‌. ಗೋಪಾಲಕೃಷ್ಣರು, ಲಕ್ಷ್ಮೀನಾರಾಯಣ ಎಂಟರ್‌ಪ್ರೈಸಸ್‌ನ ಸಂಸ್ಥೆಯ ಹೆಸರಿನಲ್ಲಿ ‘ಸುಚಿತ್ರ’ ಎಂಬ ಹೆಸರಿನ ಇನ್ನೊಂದು ಚಿತ್ರಮಂದಿರವನ್ನು  ಸ್ಥಾಪಿಸಿದರು. 1976ನೇ ಮೇ ತಿಂಗಳಿನಲ್ಲಿ ಡಾ| ರಾಜ್‌ಕುಮಾರ್‌ ರ ‘ಬಹದ್ದೂರ್‌ ಗಂಡು’ ಚಿತ್ರದ ಮೂಲಕ ಪ್ರದರ್ಶನ ಆರಂಭಿಸಲಾಗಿತ್ತು.

Advertisement

ಪ್ರಭಾತ್‌ ಇನ್ನು 3 ಡಿ ಥಿಯೇಟರ್‌
ಸುಚಿತ್ರಾ ಥಿಯೇಟರ್‌ ಆಧುನಿಕ ಶೈಲಿಗೆ ಬದಲಾವಣೆಗೊಂಡಂತೆ, ಪಕ್ಕದ ಪ್ರಭಾತ್‌ ಥಿಯೇಟರ್‌ ಸಹ ಆಧುನಿಕ ಸ್ಪರ್ಶ ಪಡೆದುಕೊಳ್ಳುತ್ತಿದೆ. ಮೂರು ವಾರದೊಳಗೆ ಈ ಚಿತ್ರಮಂದಿರವೂ ಎಲ್ಲ ಅತ್ಯಾಧುನಿಕ ವ್ಯವಸ್ಥೆ ಹೊಂದಲಿದೆ. ಜತೆಗೆ ಇಲ್ಲಿ 3ಡಿ ಸೌಕರ್ಯವನ್ನೂ ಪರಿಚಯಿಸಲಾಗುತ್ತಿದೆ. 

ಎ.27ರಿಂದ ಹಾಲಿವುಡ್‌ಸಿನೆಮಾ
ಜಿಲ್ಲೆಯ ಥಿಯೇಟರ್‌ಗಳ ಪೈಕಿ ಯಾವ ಎಲ್ಲೂ ಇಲ್ಲದ ಆಧುನಿಕ ಸೌಕರ್ಯ ಸುಚಿತ್ರಾ ಹೊಂದಲಿದೆ. ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಎ.27ರಿಂದ ಹಾಲಿವುಡ್‌ನ‌ ‘ಅವೇಂಜರ್ಸ್‌; ಇನ್ಫಿನಿಟಿ ವಾರ್‌’ ಎಂಬ ಸಿನಿಮಾದ ಮೂಲಕ ಪ್ರದರ್ಶನ ಆರಂಭಿಸಲಿದೆ.
– ವೆಂಕಟ್‌, ಡಾಲ್ಬಿ Atmos ತಂತ್ರಜ್ಞ

– ಅತ್ಯಾಧುನಿಕ ಥಿಯೇಟರ್‌ 
– 4ಕೆ  ತಂತ್ರಜ್ಞಾನ ಅಳವಡಿಕೆ
– 80 ಸ್ಪೀಕರ್‌ ಅಳವಡಿಕೆ

— ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next