ರಂಗಭೂಮಿಯಿಂದ ಸಿನಿಮಾಕ್ಕೆ ಸಾಕಷ್ಟು ಮಂದಿ ಬರುತ್ತಲೇ ಇದ್ದಾರೆ. ದಿನದಿಂದ ದಿನಕ್ಕೆ ಆ ಸಂಖ್ಯೆ ಹೆಚ್ಚುತ್ತಲೇ ಇದೆ. ರಂಗಭೂಮಿಯಿಂದ ಬರುವ ಬಹುತೇಕರು ನಟ -ನಟಿಯಾಗಿರುತ್ತಾರೆ. ಆದರೆ, ಅರ್ಜುನ್ ರಾಮ್ ನಟನೆಗೆ ಬಂದಿಲ್ಲ, ಬದಲಾಗಿ ಸಂಗೀತ ಕ್ಷೇತ್ರಕ್ಕೆ ಬಂದಿದ್ದಾರೆ. ಅರ್ಜುನ್ ರಾಮ್ ಕೂಡಾ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಸಾಕಷ್ಟು ನಾಟಕಗಳಿಗೆ ಕೆಲಸ ಮಾಡಿದ ಅವರು ಈಗ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಯಾರು ಈ ಅರ್ಜುನ್ ರಾಮ್ ಎಂದರೆ, ಸದ್ಯ ‘ಹುಲಿರಾಯ’ ಸಿನಿಮಾದ ಬಗ್ಗೆ ಹೇಳಬೇಕು. ಅರವಿಂದ್ ಕೌಶಿಕ್ ನಿರ್ದೇಶನದ ‘ಹುಲಿರಾಯ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರೋದು ಇದೇ ಅರ್ಜುನ್. ಅಂದಹಾಗೆ, ಅರ್ಜುನ್‌ಗೆ ಇದು ಮೂರನೇ ಸಿನಿಮಾ. ಈ ಹಿಂದೆ ‘ಮಂಗಾಟ’ ಹಾಗೂ ‘ಸೆಲ್ಫಿ’ ಎಂಬ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಚಿತ್ರದ ನಾಯಕ ಬಾಲು ನಾಗೇಂದ್ರ ರಂಗಭೂಮಿಯಿಂದಲೇ ಅರ್ಜುನ್‌ಗೆ ಸ್ನೇಹಿತರಂತೆ. ಅರ್ಜುನ್ ಕೆಲಸ ನೋಡಿದ್ದ ಬಾಲು ‘ಹುಲಿರಾಯ’ನ ಅವಕಾಶಕ್ಕೆ ಕಾರಣರಾಗಿದ್ದಾರೆ.
‘ಚಿತ್ರದ ಪ್ರತಿಯೊಂದು ಹಾಡುಗಳು ಹೊಸತನದಿಂದ ಕೂಡಿವೆ. ನಿರ್ದೇಶಕ ಅರವಿಂದ್ ಕೌಶಿಕ್ ಅವರು ಸನ್ನಿವೇಶಕ್ಕೆ ತಕ್ಕಂತೆ ಹಾಡುಗಳನ್ನು ನೀಡಿದ್ದಾರೆ. ಅಷ್ಟೇ ಸೊಗಸಾಗಿ ಚಿತ್ರೀಕರಿಸಿದ್ದಾರೆ’ ಎನ್ನುವುದು ಅರ್ಜುನ್ ರಾಮ್ ಮಾತು. ಅಂದಹಾಗೆ, ಅರ್ಜುನ್ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಅಂತೆ. ಆದರೆ, ಸಂಗೀತದ ಆಸಕ್ತಿಯಿಂದ ರಂಗಭೂಮಿ, ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ‘ಹುಲಿರಾಯ’ನ ಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಅರ್ಜುನ್‌ಗೂ ಒಂದಷ್ಟು ಅವಕಾಶಗಳು ಬರುತ್ತಿವೆ.