ನೀವು ನಮ್ಮ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಅತಿಥಿಯಾಗಬೇಕು ಎಂದು ವಾಟ್ಸಪ್ ಮಾಡಿದರಂತೆ ಪವನ್ ಕುಮಾರ್. ಪದೇಪದೇ ರಿಮೈಂಡ್ ಮಾಡಿದರಂತೆ. ಯಾಕೆ ಪವನ್ ಇಷ್ಟೊಂದು ಕರೆಯುತ್ತಿದ್ದಾರೆ ಎಂದು ಇಂದ್ರಜಿತ್‌ಗೆ ಒಂದು ಕ್ಷಣ ಗೊತ್ತಾಗಲಿಲ್ಲವಂತೆ. ಹಾಗೇಕೆ ಎಂದು ಅರ್ಥವಾಗಿದ್ದು, ‘ಒಂದು ಮೊಟ್ಟೆಯ ಕಥೆ’ಯ ಆಡಿಯೋ ಬಿಡುಗಡೆಗೆ ಬಂದಾಗಲೇ. ‘ನನ್ನ ಯಾಕೆ ಕರೀತಿದ್ದಾರೆ ಎಂದು ಮೊದಲೇ ಅರ್ಥಮಾಡಿಕೊಳ್ಳಬೇಕಿತ್ತು. ಈಗ ಅರ್ಥವಾಯ್ತು. ಪವನ್ ಒಳ್ಳೆಯ ನಿರ್ದೇಶಕ ಅಂತ ಮಾತ್ರ ಗೊತ್ತಿತ್ತು. ಚಿತ್ರದ ಮಾರ್ಕೆಟಿಂಗ್ ಸಹ ಚೆನ್ನಾಗಿ ಮಾಡುತ್ತಾರೆ ಅಂತ ಇವತ್ತು ಗೊತ್ತಾಯ್ತು. ಅವರು ಹೊಸ ಮಾರ್ಕೆಟ್ ಸೃಷ್ಟಿಸಿದವರು. ಅವರ ಅಭಿಮಾನಿಯಾಗಿ ಬಂದೆ. ಚಿತ್ರದ ಹಾಡುಗಳು, ಟ್ರೇಲರ್ ನೋಡಿ ಖುಷಿಯಾಯಿತು. ಹೊಸಬರು ಮುಗಟಛಿತೆಯಿಂದ ಸಿನಿಮಾ ಮಾಡಿದ್ದಾರೆ. ಈಗ ‘ಒಂದು ಮೊಟ್ಟೆಯ ಕಥೆ’ ಮಾಡಿದ್ದೀರಾ. ‘ಎರಡನೆಯ ಮೊಟ್ಟೆಯ ಕಥೆ’ ಮಾಡುವುದಿದ್ದರೆ ನನಗೂ ಒಂದು ಅವಕಾಶವನ್ನು ಕೊಡಿ’ ಎಂದು ಇಂದ್ರಜಿತ್ ತಾವೂ ನಗುವುದರ ಜೊತೆಗೆ ಬೇರೆಯವರನ್ನೂ ನಗಿಸಿದರು. ‘ಒಂದು ಮೊಟ್ಟೆಯ ಕಥೆ’ ಎಂಬ ಟೈಟಲ್‌ಗೆ ಹೊಂದುವಂತೆ ಬೊಕ್ಕ ತಲೆಯವರನ್ನು ಕರೆಸಿ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿಸಬೇಕೆಂಬ ಯೋಚನೆ ಇತ್ತಂತೆ ಪವನ್ ಮತ್ತು ‘ಒಂದು ಮೊಟ್ಟೆಯ ಕಥೆ’ ತಂಡಕ್ಕೆ. ಬ್ಯಾಂಕ್ ಜನಾರ್ಧನ್, ಸಿಹಿಕಹಿ ಚಂದ್ರು, ಕಿಶೋರ್, ಇಂದ್ರಜಿತ್, ವಿ. ಮನೋಹರ್ … ಹೀಗೆ ಯಾರ್ಯಾರನ್ನು ಕರೀಬಹುದು ಎಂದು ಒಂದು ಪಟ್ಟಿ ಮಾಡಿಕೊಂಡು, ಅದರಲ್ಲಿ ಕೆಲವರನ್ನು ಕರೆಸಿ, ಅವರಿಂದಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿಸಲಾಗಿದೆ.
ಅಂದು ವೇದಿಕೆಯ ಮೇಲೆ ಕಾಣಿಸಿಕೊಂಡ ಮತ್ತೂಬ್ಬರೆಂದರೆ ಯೋಗಿ ದ್ವಾರಕೀಶ್. ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಪವನ್ ಕರೆಯುತ್ತಿದ್ದಂತೆಯೇ, ಯೋಗಿಗೆ ತನ್ನನ್ನೇಕೆ ಕರೆಯುತ್ತಿರುವುದು ಎಂದು ಸ್ಪಷ್ಟವಾಯಿತಂತೆ. ಆದರೆ, ಅವರು ಹಿಂದುಮುಂದು ನೋಡದೆ ಬಂದಿದ್ದಾರೆ. ‘ತಲೆ ಬೋಳಾಗುತ್ತಿರುವುದರಿಂದ ನನಗೆ ಯಾವತ್ತೂ ಕೊರತೆ ಅನಿಸಲಿಲ್ಲ. Bald is Beautiful and Sexy ಅದು ನಿಮ್ಮ ವ್ಯಕ್ತಿತ್ವದ ಒಂದು ಭಾಗ. ಅದಕ್ಕೆ ಹೆಮ್ಮೆ ಪಡಬೇಕು’ ಎಂದರು. ಇನ್ನು ಪವನ್ ಅವರನ್ನು ತಮ್ಮ ಸ್ಫೂರ್ತಿ ಎಂದ ಯೋಗಿ, ‘ನಾನು ‘ಲೂಸಿಯಾ’ ಮಾಡಬೇಕಿತ್ತು. ಕಾರಣಾಂತರಗಳಿಂದ ಆಗಿಲ್ಲ.
ಜನರಿಗೆ ಈಗ ಕಮರ್ಷಿಯಲ್, ಕಲಾತ್ಮಕ ಸಿನಿಮಾ ಎಂಬುದರ ಬಗ್ಗೆ ಆಸಕ್ತಿ ಇಲ್ಲ. ಸೆನ್ಸಿಬಲ್ ಆಗಿರುವ ಒಂದು ಎಂಟರ್‌ಟೈನ್‌ಮೆಂಟ್ ಸಿನಿಮಾ ಬೇಕಷ್ಟೇ. ಅಂತಹ ಸಿನಿಮಾ ಕೊಟ್ಟಿದ್ದು ಪವನ್. ನಾನು ಸಹ ಕಮರ್ಷಿಯಲ್ ಚಿತ್ರ ಬಿಟ್ಟು ‘ಆಟಗಾರ’ ಎಲ್ಲಾ ಮಾಡಿದ್ದು ಅವರ ಸ್ಫೂರ್ತಿಯಿಂದಲೇ’ ಎಂದರು. ಅಷ್ಟೇನೂ ಬೊಕ್ಕವಾಗದ ನಾಗತಿಹಳ್ಳಿ ಚಂದ್ರಶೇಖರ್ ಸಹ ಅಂದು ಬಂದಿದ್ದರು. ‘ಇಲ್ಲಿ ರಾಜ್ ಶೆಟ್ಟಿ ತಮ್ಮನ್ನು ತಾವೇ ವಿಮರ್ಶೆ ಮಾಡಿಕೊಂಡಿದ್ದಾರೆ. ನನಗೆ ಇಷ್ಟವಾಗಿದ್ದು ಇಲ್ಲಿನ ಸರಳತೆ ಮತ್ತು ಟೈಮಿಂಗ್. ಈ ತರಹದ ಇನ್ನಷ್ಟು ಮೊಟ್ಟೆಯ ಕಥೆಗಳು ಬರಲಿ’ ಎಂದು ಹಾರೈಸಿದರೆ, ವಿ. ಮನೋಹರ್ ಮೊಟ್ಟೆಯನ್ನು ಕಥೆಗೆ, ಸಿನಿಮಾಗೆ ಹೋಲಿಸಿದರು. ‘ಇದು ರೆಗ್ಯುಲರ್ ಸಿನಿಮಾ ಅಲ್ಲ. ಅಂತಹ ಸಿನಿಮಾಗಳು ಜನರಿಗೆ ಸಾಕಾಗಿದೆ. ಎರಡು ವರ್ಷಗಳಿಂದ ಆ ತರಹದ ಸಿನಿಮಾಗಳು ಕಡಿಮೆಯಾಗಿವೆ. ಕಥೆ ಏನು ಮಾಡಿದ್ದೀಯ ಎಂದು ಪ್ರೇಕ್ಷಕ ಕೇಳುತ್ತಿದ್ದಾನೆ.
ಇದು ಅಂತಹ ವಿಭಿನ್ನ ಕಥೆಯಿರುವ ಚಿತ್ರ ಎನ್ನುವುದರ ಜೊತೆಗೆ, ‘ಮಧ್ಯಮವರ್ಗದವರೇ ಕನ್ನಡ ಚಿತ್ರರಂಗದ ಅನ್ನದಾತರು. ಅವರಿಗೆ ಮಾಲ್‌ನಲ್ಲಿ ಸಿನಿಮಾ ನೋಡುವುದು ಕಷ್ಟ. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಚಿತ್ರಮಂದಿರದ ದರ ನಿಗದಿಯಾಗಬೇಕು. ಆ ತರಹ ಆದಾಗ, ಈ ತರಹದ ಸಿನಿಮಾಗಳು ಉಳಿಯುತ್ತವೆ’ ಎಂದರು. ‘ಒಂದು ಮೊಟ್ಟೆಯ ಕಥೆ’ ಚಿತ್ರವನ್ನು ರಾಜ್ ಬಿ ಶೆಟ್ಟಿ ನಿರ್ದೇಶಿಸಿದ್ದು, ಅವರೇ ನಾಯಕನಾಗಿ ಅಭಿನಯಿಸಿದ್ದಾರೆ. ರಾಜ್ ಜೊತೆಗೆ ಶೈಲಶ್ರೀ, ಅಮೃತಾ ನಾಯಕ್, ಶ್ರೇಯಾ ಆಂಚನ್, ಉಷಾ ಭಂಡಾರಿ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಮಿಥುನ್ ಮುಕುಂದನ್ ಅವರು ಸಂಗೀತ ಸಂಯೋಜಿಸಿದ್ದು, ‘ಲೂಸಿಯಾ’ ಪವನ್ ಮತ್ತು ಸುಹಾನ್ ಪ್ರಸಾದ್ ಚಿತ್ರವನ್ನು ನಿರ್ಮಿಸಿದ್ದಾರೆ.