12 ವರ್ಷಕ್ಕಿಂತ ಕೆಳಗಿನ ಮಕ್ಕಳೇ ಹೆಚ್ಚಾಗಿ ಲೈಂಗಿಕ ಕಿರುಕುಳದ ಬಲಿಪಶು ಆಗುತ್ತಾರೆ ಎನ್ನುತ್ತದೆ ವರದಿ. ಈ ಪ್ರಾಯದ ಹೆಣ್ಣು ಮಕ್ಕಳಷ್ಟೆ ಅಪಾಯ ಗಂಡು ಮಕ್ಕಳಿಗೂ ಇದೆ.
ಹರ್ಯಾಣದ ಗುರುಗ್ರಾಮದಲ್ಲಿರುವ ರಾಯನ್ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ಎರಡನೇ ತರಗತಿಯ ಬಾಲಕನನ್ನು ಶಾಲೆಯ ಶೌಚಾಲಯದೊಳಗೆ ಕತ್ತು ಸೀಳಿ ಕೊಂದಿರುವ ಭೀಕರ ಕೃತ್ಯ ಶಾಲೆಯಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಕಳವಳವುಂಟು ಮಾಡಿದೆ. ತಂದೆ ಮಗುವನ್ನು ಶಾಲೆಗೆ ಬಿಟ್ಟು ಮನೆಗೆ ತಲುಪುವಷ್ಟರಲ್ಲಿ ಮಗನ ಸಾವಿನ ಸುದ್ದಿ ಬಂದಿದೆ. ಎಂದಿನಂತೆ ಶಾಲೆಗೆ ಬಂದ ಕೂಡಲೇ ಶೌಚಾಲಯಕ್ಕೆ ಹೋಗುವುದನ್ನು ಅಭ್ಯಾಸ ಮಾಡಿಕೊಂಡಿದ್ದ 7 ವರ್ಷದ ಮುಗ್ಧ ಮಗುವಿಗೆ ಅಲ್ಲಿ ಸಾವು ತನಗಾಗಿ ಕಾಯುತ್ತಿದೆ ಎಂದು ತಿಳಿದಿರಲಿಲ್ಲ. ಶೌಚಾಲಯದೊಳಗೆ ಮಗುವಿನ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ದುಷ್ಕರ್ಮಿ ಬಳಿಕ ಕತ್ತು ಸೀಳಿ ಹಾಕಿದ್ದಾನೆ. ಗೋಡೆ ಹಿಡಿದು ತೆವಳಿಕೊಂಡು ಹೊರಗೆ ಬರಲು ಪ್ರಯತ್ನಿಸಿ ವಿಫಲಗೊಂಡ ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಇನ್ನೋರ್ವ ವಿದ್ಯಾರ್ಥಿ ನೋಡಿದ್ದಾನೆ. ಈ ಘಟನೆ ಶಾಲೆಗಳು ಮಕ್ಕಳ ಪಾಲಿಗೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ದೇಶ ವಿದೇಶಗಳಲ್ಲಿ 300ಕ್ಕೂ ಹೆಚ್ಚು ಪ್ರತಿಷ್ಠಿತ ಶಾಲೆಗಳನ್ನು ಹೊಂದಿರುವ ದೊಡ್ಡ ಸಂಸ್ಥೆ ರಾಯನ್ ಗ್ರೂಪ್. ಕೆಲ ಸಮಯದ ಹಿಂದೆ ದಿಲ್ಲಿಯಲ್ಲಿರುವ ಇದೇ ಸಂಸ್ಥೆಯ ಶಾಲೆಯಲ್ಲಿ 6 ವರ್ಷ ಮಗು ನೀರಿನ ಟಾಂಕಿಗೆ ಬಿದ್ದು ಮೃತಪಟ್ಟಿತ್ತು. ಇದೊಂದೇ ಅಲ್ಲ, “ಪ್ರತಿಷ್ಠಿತ’ ಹಣೆಪಟ್ಟಿ ಹಚ್ಚಿಕೊಂಡು ಪೋಷಕರಿಂದ ದುಬಾರಿ ಶುಲ್ಕ ಕೀಳುವ ಶಾಲೆಗಳಲ್ಲಿ ಭದ್ರತಾ ವ್ಯವಸ್ಥೆ ನಿರೀಕ್ಷಿತ ಮಟ್ಟದಲಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿರುತ್ತದೆ.
ಗುರುಗ್ರಾಮ ಎಂದಲ್ಲ ಶಾಲಾ ಮಕ್ಕಳು ಲೈಂಗಿಕ, ದೈಹಿಕ ಕಿರುಕುಳಕ್ಕೆ ತುತ್ತಾಗುತ್ತಿರುವ ವರದಿಗಳು ನಿತ್ಯ ಎಂಬಂತೆ ಬರುತ್ತಿರುತ್ತದೆ. ಅಪರಿಚಿತರು ಮಾತ್ರವಲ್ಲದೆ ಪರಿಚಿತರು ಕೂಡ ಮಕ್ಕಳ ಪಾಲಿಗೆ ಶತ್ರುಗಳಾಗಿ ಪರಿಣಮಿಸುತ್ತಾರೆ. ವರ್ಲ್ಡ್ ವಿಶನ್ ಇಂಡಿಯಾ ಎಂಬ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಪ್ರತಿ ಮೂವರಲ್ಲಿ ಒಂದು ಮಗು ಲೈಂಗಿಕ ಕಿರುಕುಳಕ್ಕೆ ಗುರಿಯಾಗುತ್ತಿದೆ. 12 ವರ್ಷಕ್ಕಿಂತ ಕೆಳಗಿನ ಮಕ್ಕಳೇ ಹೆಚ್ಚಾಗಿ ಲೈಂಗಿಕ ಕಿರುಕುಳದ ಬಲಿಪಶುಗಳಾಗುತ್ತಾರೆ. ಈ ಪ್ರಾಯದ ಹೆಣ್ಣು ಮಕ್ಕಳಷ್ಟೆ ಅಪಾಯ ಗಂಡು ಮಕ್ಕಳಿಗೂ ಇದೆ. ಶಿಸ್ತು ಕಲಿಸಲು ಮತ್ತು ಹದ್ದುಬಸ್ತಿನಲ್ಲಿಡಲು ಮಕ್ಕಳನ್ನು ಹೊಡೆದು, ಬಡಿದು ಬೆದರಿಸುವುದು ಇಲ್ಲವೇ ಆಮಿಷಗಳನ್ನು ಒಡ್ಡುವುದು ಮಕ್ಕಳು ಸುಲಭವಾಗಿ ಕಾಮುಕರ ತುತ್ತಾಗಲು ಕಾರಣ ಎನ್ನುವುದು ಮನಶಾÏಸ್ತ್ರಜ್ಞರ ಅಭಿಪ್ರಾಯ. ಬಹುತೇಕ ಪ್ರಕರಣಗಳಲ್ಲಿ ಮಕ್ಕಳನ್ನು ಹೆದರಿಸಿ ಇಲ್ಲವೇ ಆಮಿಷಗಳನ್ನೊಡಿ ಬುಟ್ಟಿಗೆ ಹಾಕಿಕೊಳ್ಳಲಾಗುತ್ತದೆ. ಮಕ್ಕಳ ಸ್ವಭಾವದಲ್ಲಾಗುತ್ತಿರುವ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸುವುದರಿಂದ ಮತ್ತು ಎಲ್ಲವನ್ನು ಮುಕ್ತವಾಗಿ ಹೇಳಿಕೊಳ್ಳುವ ವಾತಾವರಣವನ್ನು ರೂಪಿಸುವುದರಿಂದ ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ಪಾರು ಮಾಡಬಹುದು. ರಾಂಚಿಯಲ್ಲಿ ಎಲ್ಲ ಖಾಸಗಿ ಶಾಲೆಗಳು ಮಕ್ಕಳನ್ನು ಶೋಷಣೆಯಿಂದ ಪಾರು ಮಾಡುವ ಸಲುವಾಗಿ ವಿಶೇಷ ಕೌನ್ಸೆಲಿಂಗ್ ತಂಡಗಳನ್ನು ರಚಿಸಲಾಗಿದೆ. ಮಕ್ಕಳಿಗೆ ಉತ್ತಮ ಸ್ಪರ್ಷ ಯಾವುದು ಕೆಟ್ಟ ಸ್ಪರ್ಷ ಯಾವುದು ಎನ್ನುವುದನ್ನು ಕಲಿಸಿಕೊಡುತ್ತಾರೆ. ಕರ್ನಾಟಕ ಸರಕಾರ ಖಾಸಗಿ ಶಾಲೆಗಳು ಎಲ್ಲ ಸಿಬ್ಬಂದಿ ಹೆಸರು ಹಾಗೂ ವಿವರಗಳನ್ನು ಸಮೀಪದ ಪೊಲೀಸ್ ಠಾಣೆಗೆ ನೀಡುವುದನ್ನು ಕಡ್ಡಾಯಗೊಳಿಸಿದೆ. 1974ಲ್ಲಿ ಘೋಷಿಸಲಾದ ರಾಷ್ಟ್ರೀಯ ಶಿಶು ನೀತಿಯಲ್ಲಿ ಮಕ್ಕಳನ್ನು ದೇಶದ ಅತಿ ಅಮೂಲ್ಯ ಸೊತ್ತು ಎಂದು ಬಣ್ಣಿಸಲಾಗಿದೆ. ಆದರೆ ಈ ಸೊತ್ತನ್ನು ಸಂರಕ್ಷಿಸಲು ನಾವು ವಹಿಸುವ ಕಾಳಜಿ ಮಾತ್ರ ಅತ್ಯಲ್ಪ. 2007ರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಕ್ಕಳ ಶೋಷಣೆ ಕುರಿತು ಅಧ್ಯಯನವೊಂದನ್ನು ನಡೆಸಿ ಶಾಲೆಯಲ್ಲಿ, ಮನೆಯಲ್ಲಿ ಮತ್ತು ಸಮಾಜದಲ್ಲಿ ಮಕ್ಕಳಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸಲು ಹಲವಾರು ಶಿಫಾರಸುಗಳನ್ನು ಮಾಡಿದೆ. ಈ ಶಿಫಾರಸುಗಳು ಕಡತದಲ್ಲೇ ಉಳಿದಿದ್ದು, 10 ವರ್ಷಗಳಲ್ಲಿ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎನ್ನುವುದು ರಾಯನ್ ಶಾಲೆಯ ಪ್ರಕರಣದಿಂದ ಮತ್ತೂಮ್ಮೆ ಸಾಬೀತಾಗಿದೆ. ಇಷ್ಟೆಲ್ಲ ಆದರೂ ಶಾಲೆಗಳಲ್ಲಿ ಮಕ್ಕಳ ಸುರಕ್ಷೆಗಾಗಿ ಪ್ರತ್ಯೇಕ ಕಾನೂನು ರಚಿಸಬೇಕೆಂಬ ಅರಿವು ಮೂಡಿಲ್ಲ ಎನ್ನುವುದು ದುರಂತ.