Advertisement
ಗಜಗಣತಿಯ ಮೂರನೇ ದಿನದಂದು ನೀರಿನ ಬಳಿ ಕುಳಿತು ನಡೆಸುವ ಗಣತಿಯಲ್ಲಿ ಬರೀ ಆನೆಗಳಲ್ಲದೆ, ನವಿಲು, ಸರ್ಪಂಟೆನಾ ಹದ್ದು, ಹುಲಿ, ಕಾಡುನಾಯಿ, ಜಿಂಕೆ-ಸಾರಂಗ ಸೇರಿದಂತೆ ವಿವಿಧ ಪ್ರಾಣಿಗಳು ನೀರು ಕುಡಿಯಲು ಬಂದ ವೇಳೆ ದರ್ಶನ ನೀಡಿವೆ.
Related Articles
Advertisement
ಹುಣಸೂರು ವಲಯದ ಮುತ್ತುಗದ ಕಟ್ಟೆ ಬಳಿ ಕಳೆದ ಮೂರು ದಿನಗಳಿಂದಲೂ ಹುಲಿ ಕಂಡಿದ್ದರೆ, ವೀರನಹೊಸಹಳ್ಳಿ, ಕಲ್ಲಹಳ್ಳ, ನಾಗರಹೊಳೆ, ಡಿ.ಬಿ.ಕುಪ್ಪೆ, ಅಂತರಸಂತೆ, ಮೇಟಿಕುಪ್ಪೆ ವಲಯಗಳ ಕೆರೆಗಳ ಬಳಿ ಹುಲಿಗಳು ನೀರು ಕುಡಿಯಲು ಆಗಮಿಸಿದ್ದ ವೇಳೆ ಕಾಣಿಸಿಕೊಂಡಿದ್ದು, ಆನೆಗಣತಿಯಲ್ಲಿದ್ದ ಸ್ವಯಂಸೇವಕರಿಗೆ ಹುಲಿಗಳ ದರ್ಶನ ಆಯಾಸ ದೂರಮಾಡಿವೆ. ಆನೆಚೌಕೂರು ವಲಯದ ಮರಳು ಕಂಡಿಕೆರೆ ಬಳಿ ಹುಲಿಯ ಘರ್ಜನೆ ಕೇಳಿ ಸ್ವಯಂಸೇವಕರು ಹುಲಿಕಾಣಿಸದಿದ್ದರೂ ಘರ್ಜನೆ ಕೇಳಿಸಿಕೊಂಡು ಅಲ್ಲದೆ ಕೆನ್ನಾಯಿಯ ಹಿಂಡು ಕಂಡು ಪುಳಕಿತರಾಗಿದ್ದರು.
ಆನೆಚೌಕೂರು ವಲಯದ ಎಲ್ಲೆಡೆ ಎಸಿಎಫ್ ಪ್ರಸನ್ನಕುಮಾರ್ ಅಡ್ಡಾಡಿ ಸ್ವಯಂಸೇವಕರೊಂದಿಗೆ ವನ್ಯಜೀವಿ ಹಾಗೂ ಅರಣ್ಯ ಪರಿಸರ, ಗಣತಿ ಬಗ್ಗೆ ಚರ್ಚಿಸಿ ಮಾಹಿತಿ ನೀಡಿದರು. ಆನೆಚೌಕೂರು ವಲಯದ ಆರ್‌ಎಫ್ಒ ಕಿರಣ್‌ಕುಮಾರ್, ಹುಣಸೂರು ವಲಯದ ಸುಬ್ರಮಣ್ಯ ಎಲ್ಲಕೆರೆ-ಕಟ್ಟೆಗಳಿಗೆ ಭೇಟಿ ಇತ್ತು ಪರಿಶೀಲಿಸಿದರು.
ನಾಗರಹೊಳೆ, ಕಲ್ಲಹಳ್ಳ, ವೀರನಹೊಸಹಳ್ಳಿ ವಲಯ ಸೇರಿದಂತೆ ಹಲವೆಡೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಸೂಗಾರ, ಅನೂರ್‌ರೆಡ್ಡಿ, ರಂಗರಾವ್ ಹಾಗೂ ಹುಲಿಯೋಜನೆ ಕ್ಷೇತ್ರ ನಿರ್ದೇಶಕ ಮಣಿಕಂಠನ್, ಗಣತಿಯ ಉಸ್ತುವಾರಿಯಾದ ಎಸಿಎಫ್ ಸತ್ಯನಾರಾಯಣ್ ಭೇಟಿ ನೀಡಿ ಗಣತಿ ಕಾರ್ಯ ಪರಾಮರ್ಶಿಸಿ, ಸ್ವಯಂಸೇವಕರ ಅನಿಸಿಕೆ ಪಡೆದು ಕೊಂಡರು.
ಬೆಂಗಳೂರಿನಿಂದ ಬಂದಿದ್ದ ಸ್ವಯಂ ಸೇವಕರಾದ ಸುರೇಖಾ ಶಿವಶಿಂಪಿ, ರಶ್ಮಿರಾವ್ ಉದಯವಾಣಿಯೊಂದಿಗೆ ಮಾತನಾಡಿ ಮೂರು ದಿನಗಳ ಆನೆಗಣತಿ ಕಾರ್ಯದಿಂದಾಗಿ ನನ್ನಲ್ಲಿ ಅರಣ್ಯ ಪ್ರೀತಿ ಹೆಚ್ಚಿದೆ, ಪ್ರಥಮ ದಿನ ಆನೆ ದರ್ಶನವಾಗಿತ್ತು, ಕೆನ್ನಾಯಿ(ಕಾಡುನಾಯಿ), ಜಿಂಕೆ, ಸಾರಂಗ ಹಾಗೂ ಕಾಡಿನ ಪರಿಸರ ಕಂಡು ಖುಷಿಯಾಗಿದೆ.
ಆದರೆ ಅರಣ್ಯ ಇಲಾಖೆಯ ಕೆಳ ಹಂತದ ಸಿಬ್ಬಂದಿ ಜೀವನ ಕಷ್ಟಕರವಾಗಿದೆ. ಕುಟುಂಬದ ಸಂಪರ್ಕದಿಂದ ದೂರವಿರುವ ಇವರಿಗೆ ಹೆಚ್ಚಿನ ಸೌಲಭ್ಯಗಳು ಅತ್ಯವಶ್ಯಕ. ಅರಣ್ಯದ ಪರಿಸರ ಹಾಗೂ ವನ್ಯಜೀವಿಗಳ ದರ್ಶನದಿಂದ ನನ್ನಲ್ಲಿದ್ದ ಭಯ ದೂರವಾಗಿದೆ. ಇಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಿದ್ದರು. ಮತ್ತೂಮ್ಮೆ ಇಲ್ಲಿಗೆ ಬಂದು ಸಿಬ್ಬಂದಿಗೆ ಕೈಲಾದ ಮಟ್ಟಿಗೆ ಸೇವೆ ಗೈಯುವೆ ಎಂದರು.
ಮಹತ್ವಾಕಾಂಕ್ಷೆಯ ಮೂರು ದಿನಗಳ ಕಾಲ ನಡೆದ ವಿವಿಧ ಮಾದರಿಯ ಗಜಗಣತಿ ಯಶಸ್ವಿಯಾಗಿ ನಡೆದಿದೆ. ಎಲ್ಲ ವಲಯಗಳಿಂದ ಮಾಹಿತಿಯನ್ನು ಅಂತಿಮ ಗೊಳಿಸಿ, ಅಂತಿಮವಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೆನ್ಸ್‌ಗೆ ಕಳುಹಿಸಿ ಕೊಡಲಾಗುವುದು. ಅವರು ಪರಾಮರ್ಶಿಸಿ 2-3 ತಿಂಗಳ ನಂತರ ಅಂತಿಮವಾಗಿ ಆನೆಗಣತಿಯ ವರದಿ ನೀಡುವರು. ಮಣಿಕಂಠನ್, ಮುಖ್ಯಸ್ಥರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ.
* ಸಂಪತ್ ಕುಮಾರ್