Advertisement
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿ ಜನಿಸಿದ್ದ ಶಿಶು ಗಂಭೀರ ಸ್ಥಿತಿಯಲ್ಲಿತ್ತು. ಮಗುವಿನ ದೇಹದಲ್ಲಿ ಎಡಭಾಗದಲ್ಲಿರಬೇಕಾದ ಎಲ್ಲ ಅಂಗಾಂಗಗಳು ಬಲಭಾಗದಲ್ಲಿದ್ದವು. ಇದರಿಂದ ಮಗು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿತ್ತು. ಉಸಿರಾಟದ ತೊಂದರೆ ತೀವ್ರವಾಗಿತ್ತು. ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ್ದ ಮಗುವನ್ನು ಕೃತಕ ಉಸಿರಾಟದ ಸಹಾಯದಿಂದ ಡಾ| ಪ್ರಭಾಕರ ಕೋರೆ ಆಸ್ಪತ್ರೆಗೆ ತರಲಾಯಿತು.
Related Articles
20 ದಿನ ಹಾಗೂ ಕೇವಲ 2.5 ಕೆ.ಜಿ. ತೂಕದ ಮಗುವಿನ ಹೃದಯ ಶಸ್ತ್ರಚಿಕಿತ್ಸೆಯನ್ನು ಪರಿಣಿತ ವೈದ್ಯ ಡಾ| ಪ್ರವೀಣ ತಂಬ್ರಳ್ಳಿಮಠ ಅವರ ನೇತೃತ್ವದಲ್ಲಿ ಡಾ| ನಿಕುಂಜ ವ್ಯಾಸ ಹಾಗೂ ತಂಡ, ಸುಮಾರು 9 ಗಂಟೆಗಳ ಕಾಲ ನಡೆಸಿತು. ಇದರಿಂದ ಉಸಿರಾಟದ ಪ್ರಕ್ರಿಯೆ ಸರಾಗವಾಗಿ, ಉಳಿದ ಅಂಗಾಂಗಗಳ ಕಾರ್ಯ ನಿರ್ವಹಣೆ ಸಹ ಸಮರ್ಪಕವಾಗಿ ನಡೆಯುವಂತಾಯಿತು. ಶಸ್ತ್ರಚಿಕಿತ್ಸೆ ನಂತರ ತುರ್ತು ನಿಗಾ ಘಟಕದಲ್ಲಿ ಚಿಕ್ಕಮಕ್ಕಳ ತಜ್ಞೆ ಡಾ| ನಿಧಿ ಗೋಯಲ್ ಮಾನ್ವಿ ನಿರಂತರ 15 ದಿನ ಮಗುವಿನ ಆರೈಕೆ ನಡೆಸಿದ್ದಾರೆ. ಪ್ರಪಂಚದಲ್ಲಿ ಇಂತಹ ಕೇವಲ ಐದು ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಕೆಎಲ್‌ಇ ಆಸ್ಪತ್ರೆಯಲ್ಲಿ ಈ 6ನೇ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ ಎಂದು ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ| ಎಂ.ವಿ. ಜಾಲಿ ತಿಳಿಸಿದ್ದಾರೆ. ಮಗು ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದೆ.
Advertisement