ಕಲಬುರಗಿ: ಗುಂಡಿನ ದಾಳಿಯಲ್ಲಿ ಹೊಟ್ಟೆಗೆ ಗುಂಡು ತಗುಲಿ ತೀವ್ರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ವ್ಯಕ್ತಿಗೆ ಇಲ್ಲಿನ ಯುನೈಟೆಡ್ ಆಸ್ಪತ್ರೆಯಲ್ಲಿ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಗುಂಡೇಟು ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ತುರ್ತು ವೈದ್ಯಕೀಯ ಸೇವೆಗೆ ಮತ್ತೂಂದು ಹೆಸರೇ ಹಾಗೂ ಚಿಕಿತ್ಸೆ ಮೊದಲು ವೈದ್ಯಕೀಯ ಸೇವಾ ಶುಲ್ಕ ನಂತರ ಎನ್ನುವ ನಿಯಮ ಪಾಲನೆ ಮಾಡುತ್ತಾ ಬಂದಿರುವ ಯುನೈಟೆಡ್ ಆಸ್ಪತ್ರೆಯಲ್ಲಿ ಹಲವು ಯಶಸ್ವಿ ಶಸ್ತ್ರಚಿಕಿತ್ಸೆಗಳಲ್ಲಿ ಇದೊಂದಾಗಿದೆ. ಕಳೆದ ಮೇ 9ರಂದು ಗುಂಡೇಟಿನಿಂದ ಗಾಯಗೊಂಡಿದ್ದ ಕಲಬುರಗಿ ತಾಲೂಕಿನ ಅಷ್ಟಗಾ ಗ್ರಾಮದ
ಶರಣಬಸಪ್ಪ ಎಂಬುವರಿಗೆ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯ ಇಂಟೆನ್ಸಿವಿಸ್ಟ್ ಮತ್ತು ಕ್ರಿಟಿಕಲ್ ಕೇರ್ ಸ್ಪೆಷಾಲಿಸ್ಟ್ ಡಾ| ಸುದರ್ಶನ ಲಾಖೆ, ಡಾ| ಗೌರಿಶಂಕರ ತಕ್ಷಣ ಆರಂಭಿಕ ಚಿಕಿತ್ಸೆ ನೀಡಿದರು ಎಂದು ಜನರನ್ ಸರ್ಜನ್ ಡಾ| ಮೊಹ್ಮದ್ ಅಬ್ದುಲ್ ಬಶೀರ್ ಹಾಗೂ ಯುನೈಟೆಡ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ| ವಿಕ್ರಂ ಸಿದ್ಧಾರೆಡ್ಡಿ ಸೋಮವಾರ ಆಸ್ಪತ್ರೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶರಣಬಸಪ್ಪ (28) ಎಂಬಾತನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಪರಿಣಾಮ ಶರಣಬಸಪ್ಪನ ಹೊಟ್ಟೆಯೊಳಗೆ ಗುಂಡು ಹೊಕ್ಕು, ದೊಡ್ಡ ಕರಳು, ಸಣ್ಣ ಕರಳು ಮತ್ತು ಪಿತ್ತಕೋಶವನ್ನು ಘಾಸಿಗೊಳಿಸಿ, ಬೆನ್ನು ಹಿಂದುಗಡೆ ಗುಂಡು ಬಂದ ಪರಿಣಾಮ ಆತ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ. ಆತನಿಗೆ ಆಸ್ಪತ್ರೆಗೆ ರಾತ್ರಿ 10ಗಂಟೆಗೆ ದಾಖಲಿಸಿದರು. ತದನಂತರ ವೈದ್ಯರಾದ ಡಾ| ಸುದರ್ಶನ್ ಲಾಖೆ, ಡಾ| ಗೌರಿಶಂಕರ್, ಡಾ| ಮಂಜುನಾಥರೆಡ್ಡಿ, ಡಾ| ಲಿಯಾಖತ್ ಅಲಿ ಅವರು ಗಾಯಾಳು ಯುವಕನಿಗೆ ನಿರಂತರ ಮೂರು ತಾಸು ಯಶಸ್ವಿ ಚಿಕಿತ್ಸೆ ಮಾಡಿದರು. ಈಗ ಆತ ಜೀವದ ಅಪಾಯದಿಂದ ಪಾರಾಗಿದ್ದು, ಸಂಪೂರ್ಣ ಗುಣಮುಖನಾಗಿದ್ದಾನೆ ಎಂದು ವಿವರಣೆ ನೀಡಿದರು.
ಕಷ್ಟಕರವಾಗಿರುವ ಶಸ್ತ್ರಚಿಕಿತ್ಸೆಯನ್ನು ವೈದ್ಯರು ಕೈಗೊಂಡಿದ್ದಾರೆ. 45 ದಿನಗಳಿಂದ ಚಿಕಿತ್ಸೆ ನಡೆಸಲಾಗಿದ್ದು, ಆತ ಈಗ ಹಗುರವಾದ ಆಹಾರ ಸೇವಿಸುತ್ತಿದ್ದಾನೆ. ಕೆಲ ದಿನಗಳಲ್ಲಿಯೇ ಆತನಿಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ಸ್ಪಷ್ಠಪಡಿಸಿದರಲ್ಲದೇ ಒಟ್ಟಾರೆ ಈ ಪ್ರಕರಣದಲ್ಲಿ ಭಾರಿ ಕ್ರಿಟಿಕಲ್ ಕೇಸ್ ಆದರೂ ದಾಖಲಿಸಿಕೊಂಡು ನಿರಂತರ ಮೂರು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ ಆಸ್ಪತ್ರೆಯ ವೈದ್ಯರ ತಂಡ ಯಶಸ್ಸು ಕಂಡಿದೆ ಎಂದರು.
ಡಾ| ಮೊಹ್ಮದ್ ಅಬ್ದುಲ್ ಬಶೀರ್ ಅಹ್ಮದ್ ನೇತೃತ್ವದ ತಂಡದಲ್ಲಿ ಡಾ| ಸುದರ್ಶನ ಲಾಖೆ, ಡಾ| ಗೌರಿಶಂಕರ, ಡಾ| ಮಂಜುನಾಥ, ಡಾ| ಲಿಯಾಕತ್ ಅಲಿ, ಡಾ| ಮಲ್ಲಿಕಾರ್ಜುನ, ಡಾ| ಮಂಜುಳಾ, ಡಾ| ಇರ್ಪಾನ್, ಡಾ| ರಾಜು ಕುಲಕರ್ಣಿ, ಡಾ| ವೀಣಾ ವಿಕ್ರಮ ಸುದ್ದಿಗೋಷ್ಠಿಯಲ್ಲಿದ್ದರು.
ಯುನೈಟೆಡ್ ಆಸ್ಪತ್ರೆ ಆರಂಭದಿಂದಲೂ ಅತ್ಯಂತ ಕ್ಲಿಷ್ಟಕರ ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸುತ್ತಾ ಬರಲಾಗಿದೆ. ಗುಂಡು ತಗುಲಿದ್ದ ಈ ಚಿಕಿತ್ಸೆ ಒಂದು ಸವಾಲು ಎನ್ನುವಂತೆ ನೆರವೇರಿಸಲಾಗಿದೆ. ಇದೆಲ್ಲ ಆಸ್ಪತ್ರೆ ವೈದ್ಯರ ತಂಡಕ್ಕೆ ಶ್ರೇಯಸ್ಸು ಸಲ್ಲಬೇಕು. ತುರ್ತು ಸೇವೆಗೆ ಯುನೈಟೆಡ್ ಆಸ್ಪತ್ರೆ ಎಂಬ ವಿಶ್ವಾಸವನ್ನು ಮುನ್ನೆಡೆಸಿಕೊಂಡು ಹೋಗಲಾಗುವುದು.
ಡಾ| ವಿಕ್ರಂ ಸಿದ್ದಾರೆಡ್ಡಿ, ಅಧ್ಯಕ್ಷರು, ಯುನೈಟೆಡ್ ಆಸ್ಪತ್ರೆ, ಕಲಬುರಗಿ.