Advertisement

ಎರಡು ಕ್ಷೇತ್ರಗಳಲ್ಲಿ ಬಂಡಾಯ ಶಮನ ಯಶಸ್ವಿ

12:39 AM Nov 17, 2019 | Lakshmi GovindaRaju |

ಬೆಂಗಳೂರು: ಯಶವಂತಪುರ ಹಾಗೂ ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಅನರ್ಹ ಶಾಸಕರಿಗೆ ಟಿಕೆಟ್‌ ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದವರನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶನಿವಾರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಅಸಮಾಧಾನಗೊಂಡಿದ್ದವರು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ.

Advertisement

ಅನರ್ಹ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಬಿಜೆಪಿಯಿಂದ ಸ್ಪರ್ಧಿಸುವುದಕ್ಕೆ ಮುನಿಸಿಕೊಂಡಿದ್ದ ನಟ ಜಗ್ಗೇಶ್‌ ಅವರನ್ನು ಯಡಿಯೂರಪ್ಪ ಮನವೊಲಿಸಿದರು. ಕ್ಷೇತ್ರದ ಉಸ್ತುವಾರಿಯಾದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಬಿಎಸ್‌ವೈ ಅವರ ನಿವಾಸಕ್ಕೆ ಶನಿವಾರ ಬೆಳಗ್ಗೆ ತೆರಳಿ ಮಾತುಕತೆ ನಡೆಸಿದರು. ಸಂಸದೆ ಶೋಭಾ ಕರಂದ್ಲಾಜೆ, ಎಸ್‌.ಟಿ.ಸೊಮಶೇಖರ್‌ ಇತರರು ಪಾಲ್ಗೊಂಡಿದ್ದ ಸಭೆಗೆ ಪರಾಜಿತ ಅಭ್ಯರ್ಥಿ ಜಗ್ಗೇಶ್‌ ಗೈರಾಗಿದ್ದರು.

ಭೇಟಿ ಬಳಿಕ ಪ್ರತಿಕ್ರಿಯಿಸಿದ ಸದಾನಂದಗೌಡ, ಜಗ್ಗೇಶ್‌ ಅವರಿಗೆ ಯಾವುದೇ ಅಸಮಾಧಾನವಿಲ್ಲ. ಅವರು ಪ್ರಚಾರಕ್ಕೆ ಬರುವುದಾಗಿ ಹೇಳಿದ್ದಾರೆ. ಈಗಾಗಲೇ ನಾನು ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಕ್ಷೇತ್ರದಲ್ಲೂ ಪಕ್ಷದ ಪರ ಕೆಲಸ ಮಾಡುವುದಾಗಿ ಹೇಳಿದ್ದಾರೆ. ನನಗೆ ಉಸ್ತುವಾರಿ ನೀಡಿರುವ ಯಶವಂತಪುರ, ಕೆ.ಆರ್‌.ಪುರಂ ಹಾಗೂ ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರಗಳಲ್ಲಿ ಯಾವುದೇ ಬಂಡಾಯ ಇಲ್ಲ. ಈಗಾಗಲೇ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ. ನಾನೂ ಸಹ ಆ ಕ್ಷೇತ್ರಗಳಿಗೆ ಹೋಗಿ ಸಭೆ ನಡೆಸುತ್ತೇನೆ ಎಂದು ತಿಳಿಸಿದರು.

ಬಂದವರು ನಮ್ಮ ಸೊಸೆ ಇದ್ದಂತೆ: ಮಹಾಲಕ್ಷ್ಮೀ ಲೇಔಟ್‌, ಯಶವಂತಪುರ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಭೆ ನಡೆಸಲಾಗಿದ್ದು, ಕೆ.ಗೋಪಾಲಯ್ಯ, ಎಸ್‌.ಟಿ. ಸೋಮಶೇಖರ್‌, ಕಾರ್ಯಕರ್ತರ ಜತೆ ಒಟ್ಟಾಗಿ ಚರ್ಚಿಸಲಾಗಿದೆ. ಎಲ್ಲರ ನಡುವೆ ಸಮನ್ವಯವಿದೆ. ಮಾಜಿ ಉಪಮೇಯರ್‌ ಎಸ್‌.ಹರೀಶ್‌ ಅವರೊಂದಿಗೂ ಮಾತುಕತೆ ನಡೆಸಲಾಗಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬಂಡಾಯವೆಂಬ ಪದವೇ ಇಲ್ಲ. ಬಂದವರು ನಮ್ಮ ಮನೆ ಸೊಸೆ ಇದ್ದಂತೆ. ಅವರ ಕೈಗೆ ಕೀಲಿ ಕೊಟ್ಟಿದ್ದೇವೆ ಎಂದು ಹೇಳಿದರು.

ಜಗ್ಗೇಶ್‌ಗೆ ಸಂಬಂಧವಿಲ್ಲ: ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಯಶವಂತಪುರ ಕ್ಷೇತ್ರದಲ್ಲಿ ಎಸ್‌.ಟಿ.ಸೋಮಶೇಖರ್‌ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಈ ಹಿಂದೆ ಯಶವಂತಪುರ ಕ್ಷೇತ್ರದ ಜನತೆ ನನಗೆ ಆಶೀರ್ವಾದ ಮಾಡಿದ್ದರು. ಎಸ್‌.ಟಿ.ಸೋಮಶೇಖರ್‌ ಅವರು ಬಿಜೆಪಿ ಸೇರುವ ಮೂಲಕ ಮತ್ತಷ್ಟು ಬಲ ಬಂದಿದೆ. ನಮ್ಮ ಕಾರ್ಯಕರ್ತರು, ಅವರ ಕಾರ್ಯಕರ್ತರೆಲ್ಲಾ ಒಟ್ಟಾಗಿ ಸಭೆ ನಡೆಸಿ ಒಟ್ಟಾಗಿ ಮುಂದುವರಿಯುತ್ತೇವೆ. ಜಗ್ಗೇಶ್‌ ಅವರಿಗೂ ಯಶವಂತಪುರ ಕ್ಷೇತ್ರಕ್ಕೂ ಸಂಬಂಧವಿಲ್ಲ. ಬಿಜೆಪಿ ಕಳೆದ ಬಾರಿ ಆ ಕ್ಷೇತ್ರವನ್ನು ಕೊನೆಯ ಕ್ಷಣದಲ್ಲಿ ಜಗ್ಗೇಶ್‌ ಅವರಿಗೆ ನೀಡಿತ್ತು. ಪ್ರಚಾರಕ್ಕೆ ಅವರು ಬರುವ ವಿಶ್ವಾಸವಿದೆ ಎಂದು ಹೇಳಿದರು.

Advertisement

ಪ್ರಚಾರ ಮಾಡುವೆ – ಜಗ್ಗೇಶ್‌; ಮುನಿಸಿಕೊಂಡಿದ್ದ ಜಗ್ಗೇಶ್‌ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಯಡಿಯೂರಪ್ಪ ಅವರು ನಡೆಸಿದ ಮಾತುಕತೆ ಯಶಸ್ವಿಯಾಯಿತು. ಬಳಿಕ ಪ್ರತಿಕ್ರಿಯಿಸಿದ ಜಗ್ಗೇಶ್‌, ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಬಿಜೆಪಿ ನಮಗೆ ಮರ. ಹಾಗಾಗಿ ಪಕ್ಷ ನಮಗೆ ನೆರಳಾಗಿರುತ್ತದೆ. ನಾವೆಲ್ಲರೂ ಪಕ್ಷದ ಸೈನಿಕರು. ಪಕ್ಷದ ಸೂಚನೆ ಪಾಲಿಸುತ್ತೇವೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ಅದಕ್ಕಾಗಿ ನಾನು ಸೋಮಶೇಖರ್‌ ಅವರಿಗೆ ಬೆಂಬಲ ನೀಡುತ್ತೇನೆ. ಸೋಮಶೇಖರ್‌ ಅವರೊಂದಿಗೆ ವೇದಿಕೆ ಹಂಚಿಕೊಂಡು ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.

ಮಹಾಲಕ್ಷ್ಮೀ ಲೇಔಟ್‌ನಲ್ಲಿ ಬಂಡಾಯ ಶಮನ: ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಟಿಕೆಟ್‌ ಸಿಗದ ಕಾರಣ ಮುನಿಸಿಕೊಂಡಿದ್ದ ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಅವರನ್ನು ಸಚಿವ ವಿ.ಸೋಮಣ್ಣ ಅವರು ಯಡಿಯೂರಪ್ಪ ಅವರ ನಿವಾಸಕ್ಕೆ ಕರೆ ತಂದರು. ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ನರೇಂದ್ರ ಬಾಬು ಅವರು ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಹೇಳಿದರು.

ಸಚಿವ ವಿ.ಸೋಮಣ್ಣ ಮಾತನಾಡಿ, ನರೇಂದ್ರ ಬಾಬು ಅವರು ತಮ್ಮದೇ ಆದ ವ್ಯವಸ್ಥೆಯಲ್ಲಿ ಬೆಳೆದು ಬಂದವರು. ಅವರು ಮಹಾಲಕ್ಷ್ಮೀ ಲೇಔಟ್‌ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲೂ ಕೆಲಸ ಮಾಡಲಿದ್ದು, ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ತಿಳಿಸಿದರು. ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಮಾತನಾಡಿ, ಪಕ್ಷ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಹಾಗಾಗಿ, ಪಕ್ಷದ ಆದೇಶದಂತೆ ಕೆಲಸ ಮಾಡುತ್ತೇನೆ. ಸರ್ಕಾರ ಮೂರೂವರೆ ವರ್ಷದ ಅಧಿಕಾರ ಪೂರ್ಣಗೊಳಿಸಬೇಕು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ಹಾಗಾಗಿ, ಅವರು ಸೂಚಿಸಿದ್ದನ್ನು ಪಾಲಿಸುತ್ತೇನೆ. ಆದರೆ, ಮುಂದೆ ನಾನು ಕ್ಷೇತ್ರವನ್ನು ಬಿಟ್ಟು ಕೊಡುವುದಿಲ್ಲ ಎಂದು ಹೇಳಿದರು. ಇನ್ನೊಂದೆಡೆ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಚಿವರಾದ ವಿ.ಸೋಮಣ್ಣ, ಎಸ್‌.ಸುರೇಶ್‌ ಕುಮಾರ್‌ ಅವರು ಮಾಜಿ ಉಪಮೇಯರ್‌ ಎಸ್‌.ಹರೀಶ್‌ ಅವರ ಮನವೊಲಿಸಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next