ಕೋಲಾರ: ಕೋವಿಡ್ 19 ಭೀತಿ ನಡುವೆ ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನ ಯಶಸ್ವಿಯಾಗಿ ನಡೆಯಿತು, ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ ವಿಷಯಕ್ಕೆ ಗುರುವಾರ 678 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದು ಯಾವುದೇ ಅವ್ಯವಹಾರದ ಪ್ರಕರಣ ವರದಿಯಾಗಿಲ್ಲ. ಜಿಲ್ಲೆಯ 70 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ ಪರೀಕ್ಷೆಗೆ ಒಟ್ಟು 20387 ವಿದ್ಯಾರ್ಥಿಗಳು ನೋಂದಾ ಯಿಸಿದ್ದು, 678 ಮಂದಿ ಗೈರಾದರು. ಕಂಟೇನ್ಮೆಂಟ್‌ಜೋನ್‌ಗಳಿಂದ 99, ನೆರೆ ರಾಜ್ಯಗಳಿಂದ ಬಂದ 19 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಬೆಳಗ್ಗೆ 7.30ರಿಂದಲೇ ಕೇಂದ್ರಕ್ಕೆ ಪ್ರವೇಶ: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಗುಂಪು ಸೇರುವುದನ್ನು ತಡೆಯಲು 10.30ಕ್ಕಿರುವ ಪರೀಕ್ಷೆಗೆ ಬೆಳಗ್ಗೆ 7.30 ರಿಂದಲೇ ಕೇಂದ್ರದೊಳಕ್ಕೆ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿತ್ತು. ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರು ಬರುವ ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ಹಾಕಿ ಮಾಸ್ಕ್ ಕೊಟ್ಟು ದ್ವನಿವರ್ಧಕಗಳ ಮೂಲಕ ಮಾರ್ಗದರ್ಶನ ನೀಡಿ ಕೊಠಡಿಯಲ್ಲಿ ಕುಳಿತು ಓದುವಂತೆ ಕಳುಹಿಸಿಕೊಟ್ಟರು.
ಪ್ರತಿ ಶಾಲೆಯ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಣ್ಣದಿಂದ ಬಾಕ್ಸ್‌ಗಳನ್ನು ರಚಿಸಲಾಗಿದ್ದು, ಮುಂಭಾಗ ಪೆಂಡಾಲ್ ಹಾಕಿ ಮಕ್ಕಳಿಗೆ ಸ್ವಾಗತ ಕೋರಿ ಕೋವಿಡ್ ಮಾರ್ಗಸೂಚಿ ಅನುಸರಿಸಿ ಒಳ ಪ್ರವೇಶ ನೀಡಲಾಯಿತು. ಪರೀಕ್ಷೆಗೆ ಆಗಮಿಸಿದ್ದ ಸಿಬ್ಬಂದಿಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಗೊಳಿಸಲಾಗಿದ್ದು, ಕೈಗಳಿಗೆ ಗ್ಲೌಸ್ ಧರಿಸಿಯೇ ಪರೀಕ್ಷಾ ಕಾರ್ಯ ನಿರ್ವಹಿಸಿದರು. ಪರೀಕ್ಷೆ ಮುಗಿಸಿ ಹೋಗುವಾಗಲೂ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎಚ್ಚರಿಕೆ ವಹಿಸಲಾಗಿದ್ದು, ಒಂದೊಂದೇ ಕೊಠಡಿಯ ಮಕ್ಕಳನ್ನು ಕಳುಹಿಸಿ ಎಚ್ಚರಿಕೆ ವಹಿಸಲಾಗಿತ್ತು.
ಪ್ರೌಢಶಿಕ್ಷಣ ಇಲಾಖೆ ನಿರ್ದೇಶಕರ ಭೇಟಿ: ಜಿಲ್ಲೆಯ ನರಸಾಪುರ, ವೇಮಗಲ್, ಕ್ಯಾಲ ನೂರು ಸೇರಿದಂತೆ ಕೆಲವು ಕೇಂದ್ರಗಳಿಗೆ ಭೇಟಿ ನೀಡಿದ್ದ ರಾಜ್ಯ ಪ್ರೌಢಶಿಕ್ಷಣ ಇಲಾಖೆ ನಿರ್ದೇಶಕ ಕರಿ ಚನ್ನಣ್ಣನವರ್, ಕೋವಿಡ್ ಮಾರ್ಗಸೂಚಿ ಅನುಸರಿಸಿ ಕೈಗೊಂಡಿರುವ ಸಿದ್ಧತೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ, ಡಿಡಿಪಿಐ ಭೇಟಿ: ನಗರದ ಚಿನ್ಮಯ, ಮಹಿಳಾ ಸಮಾಜ, ಸೆಂಟ್‌ಆನ್ಸ್, ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಪಿಯು ಕಾಲೇಜು ಕೇಂದ್ರಗಳಿಗೆ ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಜಿಲ್ಲಾಧಿಕಾರಿ ಸಿ.ಸತ್ಯ ಭಾಮ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿಡಿಪಿಐ ಕೆ.ರತ್ನಯ್ಯ, ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್. ನಾಗೇಂದ್ರ ಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಮತ್ತಿತರರೂ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸಿದರಲ್ಲದೇ, ಸಣ್ಣಪುಟ್ಟ ಲೋಪಗಳಿಗೂ ಅವಕಾಶವಿಲ್ಲದಂತೆ ಎಚ್ಚರವಹಿಸಿ ರಾಜ್ಯಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾದರು.