ಸಾಮಾನ್ಯವಾಗಿ ಕೋಳಿ ಸಾಕಣೆ ಮಾಂಸ ಮಾರಾಟದ ಉದ್ದೇಶದಿಂದ ಮಾಡುತ್ತಾರೆ. ಅಧಿಕ ಲಾಭ ಪಡೆಯುವ ಸಲುವಾಗಿ ಹೈಬ್ರೀಡ್ ತಳಿಯ ಕೋಳಿಗಳನ್ನು ಸಾಕಾಣಿಕೆ ಮಾಡುವುದು ಸಹಜ.
ಕರಾವಳಿಗರ ನಂಬಿಕೆಯಾದ ಭೂತಾರಾಧನೆಗೆ ನಾಟಿ ಕೋಳಿಯ ಲಭ್ಯತೆ ಇತ್ತೀಚಿನ ದಿನಗಳಲ್ಲಿ ವಿರಳವಾಗಿದೆ. ಈ ಆಚರಣೆಗಳಿಗೆ ಹರಕೆ ಹೊತ್ತ ಭಕ್ತರಿಗೆ ಸಹಕಾರಿಯಾಗುವಂತೆ ನಾಟಿ ಕೋಳಿಗಳನ್ನು ಇಲ್ಲೋಬ್ಬರು ಸಾಕಿ ಯಶಸ್ಸು ಕಂಡಿದ್ದಾರೆ. ಇವರ ಈ ಪ್ರಯತ್ನಕ್ಕೆ ಬೆಂಬಲ ನೀಡಿದ್ದು ಸರಕಾರದ ನರೇಗಾ ಯೋಜನೆ.
ಕರಾವಳಿಯಲ್ಲಿ ಭೂತಾರಾಧನೆಯ ಭಾಗವಾಗಿ ಭಕ್ತರು ದೈವಗಳಿಗೆ ಹರಕೆಯ ರೂಪದಲ್ಲಿ ಊರಿನ ಕೋಳಿಗಳನ್ನು ಸಮರ್ಪಿಸುವ ಕ್ರಮವಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಊರಿನ ಕೋಳಿಗಳಿಗೆ ತುಸು ಹೆಚ್ಚೇ ಬೇಡಿಕೆಯಿದೆ. ಇದನ್ನೇ ಗಮನದಲ್ಲಿ ಇಟ್ಟುಕೊಂಡು ಶಿಶಿಲ ಗ್ರಾಮದ ರಮೇಶ್ ನಾಟಿಕೋಳಿ ಸಾಕಣೆಯನ್ನು ಆರಂಭಿಸಿದ್ದಾರೆ.
ಶಿಶಿಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಹೆಸರು ನೋಂದಾಯಿಸಿ, ಯೋಜನೆಯಡಿಯಲ್ಲಿ ದೊರೆತ 50,000 ರೂಪಾಯಿಗಳನ್ನು ಬಂಡವಾಳವಾಗಿಸಿ ಕೋಳಿ ಸಾಕಾಣಿಕೆಗೆ ಬಳಸಿದ್ದಾರೆ.
ಪ್ರಸ್ತುತ ರಮೇಶ್ ಇವರು 60ಕ್ಕೂಹೆಚ್ಚು ನಾಟಿ ಕೋಳಿಗಳನ್ನು ಸಾಕುತ್ತಿದ್ದು, ಈ ಕೆಲಸದಲ್ಲಿ ರಮೇಶ್ ಅವರ ಜೊತೆ ಇವರ ಮಡದಿ ಕೈ ಜೋಡಿಸಿದ್ದಾರೆ. ನಾನಾ ಜಾತಿಯ ಕೋಳಿಗಳಿಗೆ ಪೌಷ್ಠಿಕ ಕಾಳು, ಹುಲ್ಲು ಮತ್ತು ಅಕ್ಕಿಯನ್ನು ಆಹಾರವಾಗಿ ನೀಡುತ್ತದ್ದಾರೆ.
ಹರಕೆ ಹೊತ್ತ ಭಕ್ತಾದಿಗಳು ರಮೇಶ್ ಇವರ ಮನೆಗೆ ಬಂದು ನಾಟಿ ಕೋಳಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಲಾಭಗಳಿಸುವುದಕ್ಕಿಂತ ಹೆಚ್ಚಾಗಿ ಈ ಕೆಲಸ ಮಾಡುವುದರಲ್ಲಿ ಆತ್ಮತೃಪ್ತಿ ಇದೆ ಅನ್ನುತ್ತಾರೆ ರಮೇಶ್.
-ಹರ್ಷಿತಾ ಹೆಬ್ಬಾರ್, ಉಜಿರೆ