ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮತ್ತು ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಇವರ ಜಂಟಿ ಆಯೋಜನೆಯಲ್ಲಿ ಮುಂಬಯಿ ಉಪ ನಗರದಲ್ಲಿ ವಾಸಿಸುವ ಬಿಲ್ಲವ ಸಮುದಾಯದ ಸಂಭಾವ್ಯ ವಧು- ವರ ಹೊಂದಾಣಿಕೆ ಕಾರ್ಯಕ್ರಮವು ನ. 19ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಯಶಸ್ವಿಯಾಗಿ ಜರಗಿತು.
ಪ್ರಾರಂಭದಲ್ಲಿ ಬಿಲ್ಲವರ ಅಸೋಸಿಯೇಶನ್‌ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಮತ್ತು ಬಿಲ್ಲವರ ಅಸೋಸಿಯೇಶನ್ ಬೆಂಗಳೂರು ಇದರ ಅಧ್ಯಕ್ಷರಾದ ಎಂ. ವೇದ್‌ಕುಮಾರ್ ಅವರೊಂದಿಗೆ ಅಸೋಸಿಯೇಶನ್‌ನ ನಿಕಟಪೂರ್ವ ಅಧ್ಯಕ್ಷ ಎಲ್. ವಿ. ಅಮೀನ್ ದಂಪತಿ, ಹಿರಿಯರಾದ ವಾಮನ್ ಡಿ. ಪೂಜಾರಿ ದಂಪತಿ, ಮಾಜಿ ಕೋಶಾಧಿಕಾರಿ ಎನ್. ಎಂ. ಸನಿಲ್ ದಂಪತಿ ಮತ್ತು ಬೇಬಿ ಶ್ಯಾಮ ಕುಕ್ಯಾನ್ ದಂಪತಿ, ಭಾಸ್ಕರ್ ಸಾಲ್ಯಾನ್ ಇವರು ದೀಪ ಪ್ರಜ್ವಲಿಸಿ ಹೊಂದಾಣಿಕೆಯ ಒಲುಮೆಗೆ ಚಾಲನೆ ನೀಡಿದರು.
ಜ್ಯೋತಿ ಸುವರ್ಣ ಅವರು ಪ್ರಾರ್ಥನೆಗೈದರು. ಈ ಕಾರ್ಯಕ್ರಮಕ್ಕೆ ಸಂಭಾವ್ಯ ವಧು-ವರರು ಬಿಲ್ಲವ ಭವನದಲ್ಲಿ ಉಪಸ್ಥಿತರಿದ್ದು ಸಭಾಭವನ ತುಂಬಿ ತುಳುಕುತ್ತಿತ್ತು. ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ನಿಮ್ಮೆಲ್ಲರ ಉಪಸ್ಥಿತಿ ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಂತಾಗಿದೆ. ನಮ್ಮ ಊಹೆಗೂ ಮೀರಿ ನೀವಿಲ್ಲಿ ನೆರೆದಿದ್ದೀರಿ, ಅಸೋಸಿಯೇಶನ್ ಚರಿತ್ರೆಯಲ್ಲಿ ಇಂತಹ ಬಹುಸಂಖ್ಯೆಯ ವಿವಾಹ ಯೋಗ್ಯ ಅಭ್ಯರ್ಥಿಗಳು ಒಂದೆಡೆ ಸೇರಿದ್ದು ಸಂಸ್ಥೆಯ ಮೇಲಿನ ಪ್ರೀತಿ ಮತ್ತು ಅಭಿಮಾನದ ದ್ಯೋತಕವಾಗಿದೆ. ಈ ಕಾರ್ಯಕ್ರಮವು ಕಟ್ಟು-ನಿಟ್ಟಾದ ಕ್ರಮ ನಿಬಂಧನೆಗಳು ಮತ್ತು ಪಾರದರ್ಶಕತೆಯಿಂದ ನಡೆಯಲಿದೆ ಎಂದು ತಿಳಿಸಿ ವಧು-ವರರ ವಿವರವನ್ನು ನಾಲ್ಕು ವಿಭಾಗವಾಗಿ ವಿಂಗಡಿಸಿರುವೆ. ಅದನ್ನು ವಧು-ವರರು ಬರೆದಿಟ್ಟುಕೊಂಡು ಹೆಚ್ಚಿನ ಮಾಹಿತಿಯನ್ನು ಸಮಾಲೋಚನ ಕಕ್ಷೆಯಲ್ಲಿ ಪಡೆದುಕೊಳ್ಳಬಹುದು ಎಂದರು.
ಬೆಂಗಳೂರಿನ ವೇದ್‌ಕುಮಾರ್ ಅವರು ಮಾತನಾಡಿ, ಈ ವಧು-ವರ ಹೊಂದಾಣಿಕೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಸಂಘಟಿಸು
ತ್ತಿದ್ದು, ಸಮಾಜ ಬಾಂಧವರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಈ ಯೋಜನೆಯನ್ನು ಮಂಗಳೂರು, ಉಡುಪಿ, ಕುಂದಾಪುರ, ಬೆಳ್ತಂಗಡಿ ಮುಂತಾದ ಕಡೆಗಳಲ್ಲಿ ಈಗಾಗಲೇ ನಡೆಸಿ ಸಮಾಜ ಬಾಂಧವರ ಶ್ಲಾಘನೆಯನ್ನು ಪಡೆದು ಅನೇಕ ವೈವಾಹಿಕ ಸಂಬಂಧಗಳನ್ನು ಜೋಡಿಸಿದ್ದೇವೆ. ಇಲ್ಲಿಯೂ ನೀವು ಇದರ ಪ್ರಯೋಜನವನ್ನು ಪಡೆಯಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಸುಮಾರು 350ಕ್ಕೂ ಮಿಕ್ಕಿ ಸಂಭಾವ್ಯ ವಧು-ವರರು ಭಾಗವಹಿಸಿದ್ದರು. ಪವರ್ ಪಾಯಿಂಟ್ ಮುಖೇನ ಪ್ರತಿಯೊಬ್ಬ ಅಭ್ಯರ್ಥಿಯ ವೈಯಕ್ತಿಕ ವಿವರ, ಮಾಹಿತಿಗಳನ್ನು ಸಚಿತ್ರದೊಂದಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಪ್ರದರ್ಶಿಸಲಾಯಿತು. ಬೆಂಗಳೂರಿನಿಂದ ಆಗಮಿಸಿದ ಬಿಲ್ಲವ ಅಸೋಸಿಯೇಶನ್‌ನ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಶಾಲು ಹಾಗೂ ಪುಷ್ಪ ಗೌರವ ನೀಡಿ ಗೌರವಿಸಲಾಯಿತು. ಹರೀಶ್ ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ್ ಜಿ. ಅಂಚನ್ ಸ್ವಾಗತಿಸಿ, ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.