ಕಾಲುಗಳನ್ನು ಯಶಸ್ವಿಯಾಗಿ ಮರುಜೋಡಣೆ ಮಾಡುವ ಮೂಲಕ ನಗರದ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರು ಸಾಧನೆ ಮೆರೆದಿದ್ದಾರೆ.
Advertisement
ಜಗತ್ತಿನಲ್ಲಿ ಈವರೆಗೆ ಇಂತಹ 13 ಚಿಕಿತ್ಸೆ ನಡೆದಿದ್ದು, ಭಾರತದಲ್ಲಿ ಪ್ರಥಮ ಎನ್ನಬಹುದಾದ ಕಾಲುಗಳ ಮರುಜೋಡಣೆಯ ಪ್ರಕರಣ ಇದಾಗಿದೆ. ಜೋಡಣೆಯ ಮೈಕ್ರೋವ್ಯಾಸ್ಕಾಲರ್ ಚಿಕಿತ್ಸೆಯನ್ನು ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ| ದಿನೇಶ್ ಕದಂ ನೇತೃತ್ವದ ತಂಡ ನಡೆಸಿದ್ದು, ಪ್ರಸ್ತುತ ಮಗು ನಡೆದಾಡಲು ಆರಂಭಿಸಿದೆ. ಶುಕ್ರವಾರ ನಗರದಲ್ಲಿ ಈ ಕುರಿತುಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಎ.ಜೆ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಪ್ರಶಾಂತ್ ಮಾರ್ಲ ಅವರು, ಕಳೆದ
ಏ.29ರಂದು ಕೇರಳದಲ್ಲಿ ನಡೆದ ರೈಲು ಅಪಘಾತದಲ್ಲಿ 2 ವರ್ಷದ ಮೊಹಮ್ಮದ್ ಸಾಲೆ ಎರಡೂ ಕಾಲುಗಳನ್ನು
ಕಳೆದುಕೊಂಡಿದ್ದು, ಆತನ ತಾಯಿ ಮೃತಪಟ್ಟಿದ್ದರು. ಮಗುವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ರೈಲ್ವೇ ಪೊಲೀಸರು, ಬೇರ್ಪಟ್ಟ ಕಾಲುಗಳನ್ನು ಶೀತಲ ಥರ್ಮಾಕೋಲ್ ಬಾಕ್ಸ್‌ನಲ್ಲಿಟ್ಟು ಎ.ಜೆ.ಆಸ್ಪತ್ರೆಗೆ ಕರೆತಂದಿದ್ದರು.
ಆಸ್ಪತ್ರೆಯ ವೈದ್ಯರ ತಂಡ ನಿರಂತರ 7 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಬೇರ್ಪಟ್ಟ ಕಾಲುಗಳನ್ನು ಜೋಡಿಸಿತ್ತು. ಡಾ| ದಿನೇಶ್
ಕದಂ ನೇತೃತ್ವದಲ್ಲಿ ಡಾ| ಸನತ್ ಭಂಡಾರಿ, ಡಾ| ತ್ರಿವಿಕ್ರಮ್ ತಂತ್ರಿ, ಡಾ| ಮಿಥುನ್ ಶೆಟ್ಟಿ, ಡಾ| ಗೌತಮ್ ಶೆಟ್ಟಿ ಪಾಲ್ಗೊಂಡಿದ್ದರು.
ಬಳಿಕ ಮಗುವಿನ ತಂದೆ ಹಾಗೂ ಸಂಬಂಧಿಕರ ಸಂಪರ್ಕ ಸಾಧ್ಯವಾಗಿ, ಅವರೂ ಚಿಕಿತ್ಸೆಗೆ ಬೆಂಬಲ ನೀಡಿದ್ದರು. ಚಿಕಿತ್ಸೆಯ ಬಳಿಕ ರಕ್ತದೊತ್ತಡ, ಸೋಂಕು ಸಾಧ್ಯತೆಯ ಕುರಿತು ನಿಗಾ ವಹಿಸಲಾಗಿದೆ. ಮರುಜೋಡಿಸಿದ ಕಾಲು, ಗಾಯಗಳ ಆರೈಕೆ, ಗಾಯಗಳ ಚರ್ಮ ಕಸಿ ಚಿಕಿತ್ಸೆ, ಫಿಸಿಯೋಥೆರಪಿ ಕುರಿತು ಆಸ್ಪತ್ರೆಯ ವೈದ್ಯರ ಜತೆಗೆ ನರ್ಸಿಂಗ್ ಸಿಬ್ಬಂದಿ ವಿಶೇಷ ಸಾಂಗತ್ಯ ನೀಡಿದ್ದಾರೆ ಎಂದರು. ಪ್ರಸ್ತುತ ಮಗು ಸ್ವತಂತ್ರವಾಗಿ ನಡೆದಾಡುವ ಸ್ಥಿತಿ ತಲುಪಿದ್ದು, ಎಲುಬುಗಳು ಸಂಪೂರ್ಣ ಜೋಡಣೆಯಾಗಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲಿದೆ. ಜೋಡಣೆಯ ವೇಳೆ ಕಾಲಿನ ಉದ್ದದಲ್ಲಿ ವ್ಯತ್ಯಾಸವಾಗಿದ್ದರೂ ಎರಡೂ ಕಾಲುಗಳ ಉದ್ದದಲ್ಲಿ ವ್ಯತ್ಯಾಸ ಇಲ್ಲದೇ ಇರುವುದರಿಂದ ನಡೆದಾಡುವುದಕ್ಕೆ ತೊಂದರೆ ಇಲ್ಲ ಎಂದು ವೈದ್ಯ ಡಾ| ದಿನೇಶ್ ಕದಂ ತಿಳಿಸಿದ್ದಾರೆ. ಮಗುವಿನ ಬಲಗಾಲು ಮೊಣಗಂಟಿನ ಮೇಲ್ಭಾಗದಿಂದ, ಎಡಗಾಲು ಮೊಣಗಂಟಿನ ಕೆಳಗೆ ತುಂಡಾಗಿದ್ದರಿಂದ ಮುಂದಿನ ಬೆಳವಣಿಗೆಗೆ ವಿಶೇಷ ನಿಗಾ ವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
Related Articles
Advertisement