Advertisement

ಪ್ರಯತ್ನದಿಂದ ಯಶಸ್ಸಿನತ್ತ ಸಾಗಿದ ಸಾಧಕಿಯರು

01:13 PM Nov 26, 2018 | |

ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಅಂದುಕೊಂಡವರಿಗೆ ಯಾವುದೇ ವೈಫ‌ಲ್ಯಗಳು ಅಡ್ಡಿಯಾಗುವುದಿಲ್ಲ. ಸಾಧನೆಗೆ ಲಿಂಗಭೇದವಿಲ್ಲ. ನಾವು ಮಾಡುವ ಸಾಧನೆ ಇತರಿಗೂ ಸ್ಫೂರ್ತಿ, ಪ್ರೇರಣೆಯಾಗಬೇಕು. ಬಡತನ, ಸಮಾಜ, ಶೋಷಣೆಗಳನ್ನು ಎದುರಿಸಿ ಸಾಧನೆ ಮಾಡಿದವರು ನಮ್ಮೊಂದಿಗೆ ಇದ್ದಾರೆ. ಗುರಿ ತಲುಪಲು ಯಶಸ್ಸು ಎಂಬ ಹಂಬಲವಿದ್ದರೆ ಸಾಕು. ಇದು ಒಂದು ದಿನದ ಪ್ರಯತ್ನವಲ್ಲ. ತಾಳ್ಮೆ,ಆತ್ಮವಿಶ್ವಾಸ, ನಿರಂತರ ಪ್ರಯತ್ನ, ಮತ್ತು ಕಠಿನ ಪರಿಶ್ರಮ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಡವಿದಾಗ ಕುಗ್ಗದೆ ಮತ್ತೆ ಎದ್ದು ಮುನ್ನುಗುವ ಛಲವೇ ಸಾಧನೆಗೆ ಮೂಲ.

Advertisement

ಯಶಸ್ಸು ಎಂಬುದು ಹಾಗೆಯೇ… ಯಾರು ತಮ್ಮ ಶಕ್ತಿಗೂ ಮೀರಿ ಅಂದುಕೊಂಡ ಗುರಿಯನ್ನು ಸಾಧಿಸಲೇಬೇಕು ಎಂದು ಹಾತೊರೆದು ಶತಾಯಗತಾಯ ಪ್ರಯತ್ನಗಳನ್ನು ಮಾಡುತ್ತಾರೋ ಯಶಸ್ಸು ಅವರನ್ನು ಬಿಗಿದಪ್ಪಿಕೊಳ್ಳುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಮಹಿಳೆಯರು ಪುರುಷರು ಎಂಬ ಬೇದವೂ ಇಲ್ಲ. ಸಾಧನೆಯ ವಿಚಾರಕ್ಕೆ ಬಂದಾಗ ನಮ್ಮ ನಡುವೆಯೇ ಅನೇಕ ಮಹಿಳಾ ಸಾಧಕಿಯರನ್ನು ಕಾಣಬಹುದು. ಕಡು ಬಡತನದಲ್ಲಿ, ಕಷ್ಟಕಾಲದಲ್ಲಿ, ಹಾಗೂ ಅಂಗವೈಕಲ್ಯತೆ ಇತ್ಯಾದಿಗಳಿಂದ ಬಳಲುತ್ತಿರುವ, ನಮಗೆ ಬದುಕು ಕಟ್ಟಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎನ್ನುವಂತೆ ಪರಿಸ್ಥಿತಿಗಳಿದ್ದರೂ, ಅವೆಲ್ಲಕ್ಕೂ ಸಡ್ಡು ಹೊಡೆದು ವಿಜಯದ ನಗೆ ಬೀರಿದ ಮಹಿಳಾ ಮಾಣಿಕ್ಯಗಳ ಕಥೆ ಇದು. ಎಲ್ಲವೂ ಸರಿಯಾಗಿದ್ದು ಅದೃಷ್ಟದ ದಾರಿ ಕಾಯುತ್ತಾ, ಪ್ರಯತ್ನಕ್ಕೆ ವಿಮುಖರಾಗಿ ಬದುಕುತ್ತಿರುವ ಎಲ್ಲ ಜನರಿಗೂ ಇವರ ಬದುಕು ಬೆಳಕೇ ಸರಿ.

ಅರುಣಿಮಾ
ಈಕೆ ಏಷ್ಯಾದ ಹೊರಗಿನ ಎತ್ತರದ ಪರ್ವತವನ್ನು ಏರಿ ಅಲ್ಲಿ ಭಾರತದ ರಾಷ್ಟಧ್ವಜವನ್ನು ಹಾರಿಸಿದ ಹುಡುಗಿ. ಅದರಲ್ಲೇನು ವಿಶೇಷ ಎಂದಿರಾ. ಹಾಗಾದರೆ ಆಕೆಯ ಕಥೆಯನ್ನೊಮ್ಮೆ ಕೇಳಿ. ಪರ್ವತಾರೋಹಿಯಾಗಬೇಕು ಎಂಬ ಕನಸು ಕಂಗಳ ಹುಡುಗಿ. ಅದಕ್ಕೆ ಮುಖ್ಯವಾಗಿ ಬೇಕಾದದ್ದು ಕಾಲು. ಯಾವುದೋ ಒಂದು ದುರ್ಘ‌ಟನೆಯ ಕಾರಣಕ್ಕೆ ತನ್ನ ಒಂದು ಕಾಲನ್ನು ಕಳೆದುಕೊಂಡ ಹುಡುಗಿ ಅರುಣಿಮಾ.. ಇಂತಹ ಪರಿಸ್ಥಿತಿಯಲ್ಲಿ ಇತರರಾದರೆ ಇನ್ನು ತಮ್ಮ ಭವಿಷ್ಯವೇ ಕತ್ತಲಾಯಿತು ಎಂದು ಕಣ್ಣೀರಿಡುತ್ತಾ ಬದುಕುತ್ತಿದ್ದರೋ ಏನೋ. ಆದರೆ ಈಕೆ ಎದೆಗುಂದಲಿಲ್ಲ. ಯಶಸ್ವಿ ಶಸ್ತ್ರ ಚಿಕಿತ್ಸೆಯ ಮೂಲಕ ಕೃತಕ ಕಾಲನ್ನು ಜೋಡಿಸಿಕೊಂಡು ಮತ್ತೆ ಉತ್ಸಾಹದಿಂದ ಬದುಕು ಆರಂಭಿಸಿದವಳು. 

ತನ್ನ ಛಲ ಮತ್ತು ಆತ್ಮವಿಶ್ವಾಸದ ಮೂಲಕ ಕೃತಕ ಕಾಲಿನ ಸಹಾಯದಿಂದಲೇ ಮೌಂಟ್‌ ಎವರೆಸ್ಟ್‌ ಏರುತ್ತಾಳೆ. ಆ ಮೂಲಕ ಪ್ರಥಮ ಮಹಿಳಾ ಪರ್ವತಾರೋಹಿ ಎಂಬ ಹೆಗ್ಗಳಿಕೆಯನ್ನು ಮುಡಿಗೇರಿಸಿಕೊಂಡವಳು. 6,960 ಮೀ ಎತ್ತರದ ಪರ್ವತವನ್ನು ಕೇವಲ 13 ದಿನದಲ್ಲಿಯೇ ಏರಿ ಮುಗಿಸಿದ ಇವಳ ಬದುಕು ಎಲ್ಲರಿಗೂ ಸ್ಫೂರ್ತಿ.ಈಕೆಯ ಸಾಧನೆಯಿಂದ ಸ್ಫೂರ್ತಿ ಪಡೆದ ಬಾಲಿವುಡ್‌ನ‌ ಫ‌ರ್ಹಾನ್‌ ಅಖ್ತರ್‌ ಮತ್ತು ರಿತೇಶ್‌ ಸಿದ್ವಾನಿ ಇವಳ ಜೀವನ ಗಾಥೆಯನ್ನು ಚಲನಚಿತ್ರವಾಗಿ ನಿರ್ಮಿಸುತ್ತಾರೆ. ತನ್ನ ಕಥೆಯನ್ನು ಬಳಸಿಕೊಳ್ಳುವುದಕ್ಕೆ ಇವಳು ಅವರಿಂದ ಪಡೆದ 5 ಕೋಟಿ ರೂ. ಗಳನ್ನು ತನ್ನ ಕನಸಿನ ಕೂಸಾದ ವಿಕಲಾಂಗ ಚೇತನರಿಗೆ ಸ್ಪೋರ್ಟ್ಸ್  ಅಕಾಡೆಮಿಯ ನಿರ್ಮಾಣಕ್ಕಾಗಿ ಬಳಕೆ ಮಾಡುತ್ತಾಳೆ. ಆ ಮೂಲಕ ಇತರರ ಬಾಳಿಗೂ ಬೆಳಕು ನೀಡುತ್ತಾಳೆ.

ವಸಂತ ಕುಮಾರಿ
ಪುರುಷ ಕೇಂದ್ರಿತ ಸಮಾಜ, ಪಿತೃ ಪ್ರಧಾನ ಕುಟುಂಬ ಅದರೊಂದಿಗ ಕಿತ್ತು ತಿನ್ನುವ ಬಡತನ. ಈ ಎಲ್ಲ ಸಂಕಷ್ಟಗಳ ನಡುವೆ ಬಸ್ಸು ಚಾಲಕಿಯಾಗಿ ಬದುಕು ಕಟ್ಟಿಕೊಂಡ, ಭಾರತದ ಮಾತ್ರವಲ್ಲದೆ ಏಷ್ಯಾದ ಮೊದಲ ಬಸ್ಸು ಚಾಲಕಿ ಎಂಬ ಪ್ರಶಂಸೆಗೆ ಭಾಜನರಾದ ಮಹಿಳೆ ವಸಂತ ಕುಮಾರಿ. ತನ್ನ 14 ನೇಯ ವಯಸ್ಸಿನಲ್ಲಿಯೇ ಚಾಲನ ವೃತ್ತಿಯನ್ನು ಆರಂಭಿಸಿ ಇಡೀ ಸಂಸಾರವನ್ನು ಸಾಗಿಸಿದಾಕೆ ಈಕೆ. ಚಾಲನಾ ಪರವಾನಗಿಗಾಗಿ ಮೂರು ಬಾರಿ ಪರೀಕ್ಷೆಗಳನ್ನೆದುರಿಸಿದರೂ ಸಿಗದೇ ಇದ್ದಾಗ ತಾಳ್ಮೆಗೆಡದೇ ಸಂಯಮದಿಂದಿದ್ದು, ಕೊನೆಗೂ ಪರವಾನಗಿ ಪಡೆದು ತನ್ನ ಕನಸನ್ನು ಕೈಗೂಡಿಸಿಕೊಂಡವರಲ್ಲಿ ಇವರೂ ಒಬ್ಬರು.

Advertisement

ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ವಸಂತ ಕುಮಾರಿಯ ತಂದೆ ಎರಡನೇ ಮದುವೆಯಾಗುತ್ತಾರೆ. ನಂತರದಲ್ಲಿ ಅವರಿಗೆ 19 ವರ್ಷವಾದಾಗ ಆಕೆಯನ್ನು ನಾಲ್ಕು ಪುತ್ರಿಯರಿರುವ, ಮೊದಲ ಪತ್ನಿ ಮರಣ ಹೊಂದಿದ ವ್ಯಕ್ತಿಗೆ ಮದುವೆ ಮಾಡುತ್ತಾರೆ. ಈಕೆಯ ಗಂಡ ಕನ್ಸ್‌ಸ್ಟ್ರಕ್ಷನ್‌ ಕಾರ್ಯನಿರ್ವಹಿಸುತ್ತಿರುತ್ತಾರೆ. ಕಾಲಿಗಿದ್ದರೆ ಮುಡಿಗಿಲ್ಲ, ಮುಡಿಗಿದ್ದರೆ ಕಾಲಿಗಿಲ್ಲ ಎನ್ನುವ ಪರಿಸ್ಥಿತಿ. ಇಂತಹ ಸಂದರ್ಭದಲ್ಲಿ ಇವರ ಸಹಾಯಕ್ಕೆ ಬಂದದ್ದು ಚಿಕ್ಕ ವಯಸ್ಸಿನಲ್ಲಿ ಕಲಿತಿದ್ದ ಚಾಲನಾ ವತ್ತಿ. 1993 ರಲ್ಲಿ ತಮಿಳುನಾಡಿನ ಸಾರಿಗೆ ಸಂಸ್ಥೆಯಿಂದ ಚಾಲನಾ ಪರವಾನಗಿಯನ್ನು ಪಡೆದು ವೃತ್ತಿ ಆರಂಭಿಸುತ್ತಾರೆ. ತನ್ನ ಗಂಡನಿಗೆ ಹೆಗಲಾಗುತ್ತಾರೆ. ಕಡು ಬಡತನವನ್ನು ಮೆಟ್ಟಿ ನಿಲ್ಲುತ್ತಾರೆ. ಛಲವಿದ್ದರೆ ಬಲವಿದೆ ಎಂಬುದನ್ನು ಸಾಧಿಸಿ ತೋರುತ್ತಾರೆ.

ಹಿಂದಿನಿಂದಲೂ ಮಹಿಳೆಯರಿಗೆ ಚಾಲನಾ ವೃತ್ತಿ ಹೇಳಿ ಆಡಿಸಿದ ಕೆಲಸವಲ್ಲ ಎಂಬ ಮಾತಿದೆ. ಅದು ಇಂದಿಗೂ ಪ್ರಸ್ತುತವೇ. ಅಲ್ಲಿ ಮಹಿಳಾ ದೌರ್ಜನ್ಯಗಳಾಗುವ ಸಂದರ್ಭಗಳೇ ಹೆಚ್ಚು. ಹೀಗಿರುವಾಗಲೂ ಚಾಲನಾ ವೃತ್ತಿಯಲ್ಲಿ ಸಾಧಿಸಿ, ಹೆಸರುಗಳಿಸಿದ, ಆ ಮೂಲಕ ಬದುಕನ್ನೇ ಬದಲಾಯಿಸಿಕೊಂಡ, ಸಮಾಜದ ಕಟ್ಟುಪಾಡುಗಳನ್ನು ಮುರಿದು ಹೀಗೂ ಬದುಕಬಹುದು. ನಮ್ಮಲ್ಲಿ ತಾಳ್ಮೆ, ಆತ್ಮ ವಿಶ್ವಾಸವಿದ್ದಾಗ ಸಾಧಿಸುವ ಹಾದಿ ಕಷ್ಟವಲ್ಲ ಎಂದು ತೋರಿಸಿದ ವಸಂತ ಕುಮಾರಿ ನಿಜಕ್ಕೂ ಮಾದರಿ.

ಶಾಂತಿ ದೇವಿ
ಈ ಸಮಾಜದಲ್ಲಿ ಕೆಲವೊಂದು ಕೆಲಸಗಳು ಕೇವಲ ಪುರುಷರಿಗಷ್ಟೇ ಸೀಮಿತ ಎಂಬ ಮನಸ್ಥಿತಿ ಇದೆ. ಹಿಂದೆಯೂ, ಈಗಲೂ. ಮನಃಸ್ಥಿತಿ ಎಷ್ಟೇ ಬದಲಾಗಲಿ ಆದರೆ ಕೆಲವು ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳುವುದಕ್ಕೆ ಮನುಷ್ಯ ಸಿದ್ಧನಿಲ್ಲ. ಅಂತಹ ಒಂದು ವಿಚಾರದಲ್ಲಿ ಮೆಕ್ಯಾನಿಕ್‌ ಕೆಲಸವೂ ಒಂದು. ಈ ವಿಭಾಗ ಕೇವಲ ಪುರುಷರಿಗಷ್ಟೇ ಸೀಮಿತ ಎಂದು ಗೆರೆ ಎಳೆದಿಟ್ಟವರೂ ನಮ್ಮ ಸಮಾಜದಲ್ಲಿದ್ದಾರೆ. ಆದರೆ ಈ ಕಟ್ಟುಪಾಡುಗಳನ್ನು ಮೀರಿ ಒಂದು ಒಳ್ಳೆಯ ಟ್ರಕ್‌ ಮೆಕ್ಯಾನಿಕ್‌ ಆಗಿ ಗುರುತಿಸಿಕೊಂಡವರು ಶಾಂತಿ ದೇವಿ. ತಮ್ಮ ಪತಿ ರಾಮ್‌ ಬಹದ್ದೂರ್‌ ಅವರೊಂದಿಗೆ ಸೇರಿ ದಿಲ್ಲಿಯಲ್ಲಿ ಆರಂಭಿಸಿದ ಟ್ರಕ್‌ ವರ್ಕ್‌ಶಾಪ್‌ನಲ್ಲಿ ದೊಡ್ಡ ದೊಡ್ಡ ಟ್ರಕ್‌ಗಳಿಗೆ ಚಕ್ರಗಳನ್ನು ಬದಲಾಯಿಸುವಲ್ಲಿ ಶಾಂತಿದೇವಿ ಎತ್ತಿದ ಕೈ. ನೋಡುಗರು ಮೂಗಿಗೆ ಬೆರಳೇರಿಸುವಂತೆ ಅತ್ಯಂತ ಚಾಕಚಕ್ಯತೆಯಿಂದ, ನೈಪುಣ್ಯತೆಯಿಂದ ಈ ಕೆಲಸವನ್ನು ಯಾವುದೇ ಗಂಡಸರಿಗೂ ತಾನೇನು ಕಡಿಮೆ ಇಲ್ಲ ಎಂಬಂತೆ ಮಾಡುತ್ತಿದ್ದವರು. ಆ ಮೂಲಕ ದಿಲ್ಲಿಯೆಲ್ಲೆಡೆ ಮನೆಮಾತಾಗಿದ್ದ ವರು. ಇನ್ನು ಮನೆಯಲ್ಲಿಯೂ ಸಮರ್ಥ ಪತ್ನಿಯಾಗಿ, ತಾಯಿಯಾಗಿ ತಮ್ಮೆಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದವರು. ಆರಂಭದಲ್ಲಿ ಪತಿ ಪತ್ನಿ ರಸ್ತೆ ಬದಿಯಲ್ಲಿ ಟೀ ಶಾಪ್‌ ಆರಂಭಿಸಿದ್ದು, ಆ ರಸ್ತೆಯಲ್ಲಿ ದಿನವೊಂದಕ್ಕೆ ಸುಮರು 20,000ಕ್ಕೂ ಅಧಿಕ ಟ್ರಕ್‌ ಸಾಗುವುದನ್ನು ಗಮನಿಸಿದ ದಂಪತಿ, ತಾವೇಕೆ ಟ್ರಕ್‌ ವರ್ಕ್‌ಶಾಪ್‌ ಆರಂಭಿಸಬಾರದು ಎಂದು ಯೋಚಿಸುತ್ತಾರೆ. ಅದರಂತೆ ಕಾರ್ಯ ಪ್ರವೃತ್ತರಾಗುತ್ತಾರೆ. ಮಹಿಳೆಯೊಬ್ಬಳು ಯಾವುದೇ ಕ್ಷೇತ್ರದಲ್ಲಿಯೂ ಮಿಂಚುವುದು ಸಾಧ್ಯ. ಅದಕ್ಕೆ ಬೇಕಾದದ್ದು ಮನೋಹಂಬಲವಷ್ಟೇ ಎಂಬುದನ್ನು ಸಾಧಿಸಿಕೊಟ್ಟ ಶಾಂತಿ ದೇವಿ ಮಹಿಳೆಯರ ಶಕ್ತಿ ಎಂದರೂ ತಪ್ಪಲ್ಲ. 

ಭುವನಾ ಬಾಬು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next