Advertisement

ನಿತ್ಯ ಅಧ್ಯಯನ ಶೀಲರಾದಾಗ ಮಾತ್ರ ಯಶಸ್ಸು: ಹಿರೇಮಠ

03:34 PM Dec 06, 2021 | Team Udayavani |

ಮಾನ್ವಿ: ವಕೀಲರು ನಿತ್ಯ ಅಧ್ಯಯನಶೀಲರಾದಾಗ ಮಾತ್ರ ಪ್ರತಿದಿನ ಜಾರಿಯಾಗುವ ಹೊಸ ಕಾನೂನುಗಳನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ಸಿವಿಲ್‌ ಮತ್ತು ಪ್ರಥಮ ದರ್ಜೆ ನ್ಯಾಯಾಧೀಶರಾದ ವಿಜಯಕುಮಾರ.ಎಸ್‌. ಹಿರೇಮಠ ತಿಳಿಸಿದರು.

Advertisement

ಪಟ್ಟಣದ ಸಿವಿಲ್‌ ಮತ್ತು ಪ್ರಥಮ ದರ್ಜೆ ನ್ಯಾಯಾಲಯ ಆವರಣದಲ್ಲಿ ವಕೀಲರ ಸಂಘದ ವತಿಯಿಂದ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಕಾನೂನು ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ಕಾನೂನಿನ ಜ್ಞಾನವನ್ನು ಕಿರಿಯ ವಕೀಲರಿಗೆ ತಿಳಿಸಿಕೊಡುವ ಮೂಲಕ ಕಕ್ಷಿದಾರರಿಗೆ ಕಾನೂನಿನ ನೆರವನ್ನು ಒದಗಿಸಲು ಸಾಧ್ಯವಾಗುತ್ತದೆ. ತಾಲೂಕಿನಲ್ಲಿ ನೂರಾರು ಕಾನೂನು ಅರಿವು-ನೆರವು ಕಾರ್ಯಕ್ರಮಗಳ ಮೂಲಕ ಸಾಮಾನ್ಯ ಜನರಿಗೆ ಕಾನೂನಿನ ಅರಿವನ್ನು ಮೂಡಿಸಲಾಗಿದೆ ಎಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್‌ ಮಾತನಾಡಿ, ಸಮಾಜದ ಆರೋಗ್ಯ ಕಾಪಾಡುವವರು, ಸಮಾಜವನ್ನು ಕಟ್ಟುವವರು ವಕೀಲರು. ತಾವು ಬದುಕುವ ಪರಿಸರವನ್ನು ಉತ್ತಮವಾಗಿ ರೂಪಿಸಿಕೊಳ್ಳುವುದಕ್ಕೆ ವಕೀಲರಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬ ವಕೀಲರು ನೈತಿಕ ಮೌಲ್ಯಗಳನ್ನು ಪಾಲಿಸುತ್ತ ಎಲ್ಲರನ್ನು ಪಾಲಿಸುವಂತೆ ಮಾಡುವುದು ವಕೀಲರ ಪ್ರಮುಖ ಕರ್ತವ್ಯವಾಗಿದೆ ಎಂದು ತಿಳಿಸಿದರು.

ವಕೀಲ ವೃತ್ತಿಯಲ್ಲಿ 50 ವರ್ಷ ಪೂರೈಸಿದ ಹಿರಿಯ ನ್ಯಾಯವಾದಿ ಎ.ಬಿ. ಉಪ್ಪಳಮಠ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಡಿ.ಜೆ.ಪಿ. ಪಾಟೀಲ್‌, ಮಹಾಂತಪ್ಪ ಅಮರೇಗೌಡ, ಹಿರಿಯ ವಕೀಲರಾದ ಮಲ್ಲನಗೌಡ ಬಿ.ಪಾಟೀಲ್‌, ಶರಣಬಸಪ್ಪ.ಕೆ., ದೊಡ್ಡಬಸಪ್ಪ.ಕೆ., ಮಲ್ಲಿಕಾರ್ಜುನ ಪಾಟೀಲ್‌, ವಕೀಲರ ಸಂಘದ ಮಾಜಿ ಅಧ್ಯಕ್ಷ ಶೇಖರಪ್ಪ ಪಾಟೀಲ್‌, ಬಿ.ಚನ್ನನಗೌಡ, ಗುಮ್ಮಾ ಬಸವರಾಜ, ಅಯ್ಯಪ್ಪ ನಾಯಕ, ಬಿ.ಕೆ. ಅಮರೇಶಪ್ಪ ಸೇರಿದಂತೆ ಇನ್ನಿತರರನ್ನು ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ವಕೀಲರ ದಿನಾಚರಣೆ ಅಂಗವಾಗಿ ವಕೀಲರಿಗಾಗಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹಿಂದೂಸ್ಥಾನಿ ಸಂಗೀತಾ ಬಳಗದ ವತಿಯಿಂದ ಸಂಗೀತಾ ಕಾರ್ಯಕ್ರಮ ನಡೆಯಿತು. ಸಹಾಯಕ ಸರಕಾರಿ ಅಭಿಯೋಜಕರಾದ ಅರ್ಚನ ಯಾದವ್‌, ಕಾರ್ಯದರ್ಶಿ ರವಿಕುಮಾರ ಪಾಟೀಲ್‌, ಖಜಾಂಚಿ ಚಂದ್ರು ಮದ್ಲಾಪುರ, ಹಿರಿಯ ನ್ಯಾಯವಾದಿಗಳಾದ ಮಾಳಿಂಗರಾಯ, ಚಂದ್ರಕಲಾ, ಉರುಕುಂದ, ಯಲ್ಲಪ್ಪ ನಾಯಕ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next