Advertisement

ಅಭೂತಪೂರ್ವ ಯಶಸ್ಸು ಕಂಡ ಆರೋಗ್ಯ ಮೇಳ

03:59 PM Apr 20, 2022 | Team Udayavani |

ಲಕ್ಷ್ಮೇಶ್ವರ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ತಾಲೂಕು ಮಟ್ಟದ ಆರೋಗ್ಯ ಮೇಳ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತು. ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ತಂಡೋಪ ತಂಡವಾಗಿ ಆಗಮಿಸಿದ ಸಾರ್ವಜನಿಕರು ಆರೋಗ್ಯ ಮೇಳದ ಸದುಪಯೋಗ ಪಡೆದುಕೊಂಡರು. ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕು ಮಟ್ಟದ ಆರೋಗ್ಯ ಮೇಳವನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.

Advertisement

ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದ ಶಾಸಕ ರಾಮಣ್ಣ ಲಮಾಣಿ ಅವರು, ಆರೋಗ್ಯ ಭಾಗ್ಯದ ಮುಂದೆ ಯಾವ ಭಾಗ್ಯವೂ ಇಲ್ಲ. ಆರೋಗ್ಯಪೂರ್ಣ ಸ್ವಸ್ಥ ಸಮಾಜ ನಿರ್ಮಾಣದ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರಿಗೆ ಉಚಿತ ಆರೋಗ್ಯ ಸೇವೆ ನೀಡಲು ಮುಂದಾಗಿವೆ. ಆರೋಗ್ಯ ಸಮಸ್ಯೆಗಳನ್ನು ಮೂಲದಲ್ಲಿಯೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡುವುದು ಮೇಳದ ಉದ್ದೇಶ. ಜನರು ಇಂತಹ ಯೋಜನೆಯ ಪ್ರಯೋಜನ ಪಡೆದುಕೊಂಡು ಆರೋಗ್ಯಕರ-ಕುಟುಂಬ ಮತ್ತು ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದರು.

ಜಿಲ್ಲಾ ವೈದ್ಯಾಧಿಕಾರಿ ಡಾ|ಜಗದೀಶ ನುಚ್ಚಿನ ಮಾತನಾಡಿ, ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆಗೆ ಸ್ಟಂಟ್‌ ಅಳವಡಿಸಲು ಹಾಗೂ ಮೊಣಕಾಲು ಚಿಪ್ಪು ಅಳವಡಿಸಲು ಆಗುತ್ತಿದ್ದ ವೆಚ್ಚವನ್ನು ಗಣನೀಯವಾಗಿ ಕಡಿಮೆಗೊಳಿಸುವ ಮೂಲಕ ಕೇಂದ್ರ ಸರಕಾರ ಬಡವರಿಗೆ ಸೌಲಭ್ಯ ದೊರೆಯುವಂತೆ ಮಾಡಿದೆ. ಅದೇ ರೀತಿ, ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆ ಅಡಿ ಪ್ರತಿ ವರ್ಷ ಒಬ್ಬ ವ್ಯಕ್ತಿಗೆ 5 ಲಕ್ಷದವರೆಗೆ ಆರೋಗ್ಯ ಚಿಕಿತ್ಸಾ ವೆಚ್ಚವನ್ನು ಉಚಿತವಾಗಿ ಪಡೆಯಲು ಅವಕಾಶ ಕಲ್ಪಿಸಿವೆ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ಪ್ರತಿಯೊಬ್ಬರೂ ತಮ್ಮ ಜೀವನ ಶೈಲಿ, ಆಹಾರ ಪದ್ಧತಿ ಬದಲಾಯಿಸಿಕೊಳ್ಳಬೇಕೆಂದು ಹೇಳಿದರು.

ಪುರಸಭೆ ಅಧ್ಯಕ್ಷೆ ಅಶ್ವಿ‌ನಿ ಅಂಕಲಕೋಟಿ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ-ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಯುಷ್‌ ಇಲಾಖೆ, ಆರೋಗ್ಯ ಕಾರ್ಡ್‌ ಸಂಬಂಧಿತ ಮಾಹಿತಿ ನೀಡುವ ಮಳಿಗೆಗಳನ್ನು ತೆರೆಯಲಾಗಿತ್ತು. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಪಾರ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡು, ಚಿಕಿತ್ಸೆ, ಸಲಹೆ ಪಡೆದರು.

Advertisement

ಮೇಳದಲ್ಲಿ ಒಟ್ಟು 957 ಜನರು ಆರೋಗ್ಯ ಮೇಳದ ಸದುಪಯೋಗಪಡೆದುಕೊಂದಿದ್ದಾರೆ. ಒಟ್ಟು 810 ಜನರಿಗೆ ಆಯುಷ್ಮಾನ್‌ ಆರೋಗ್ಯ ಕರ್ನಾಟಕ ಕಾರ್ಡ್‌ ಸ್ಥಳದಲ್ಲಿಯೇ ವಿತರಿಸಲಾಗಿದೆ. 405 ಕ್ಕೂ ಹೆಚ್ಚು ಎನ್‌ಸಿಡಿ, ಗುಣಪಡಿಸಲಾಗದ ರೋಗಿಗಳಿಗೆ ಸೂಕ್ತ ಸಲಹೆ-ಸೂಚನೆ ನೀಡಿ, ತಪಾಸಣೆ ಮಾಡಿ ಔಷಧೋಪಚಾರ ನೀಡಲಾಗಿದೆ.

ಡಾ|ಪರ್ವತಗೌಡ ಹಿರೇಗೌಡ್ರ ಅವರು ನೀಡಿದ ಅಕ್ಯೂಪಂಕ್ಚರ್‌ ಚಿಕಿತ್ಸೆಗೆ ಜನರು ಮುಗಿಬಿದ್ದ ದೃಶ್ಯ ಕಂಡುಬಂದಿತು. ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಪರಶು ರಾಮ ಸತ್ತಿಗೇರಿ, ತಾಲೂಕು ವೈದ್ಯಾಧಿಕಾರಿ ಡಾ|ಸುಭಾಸಚಂದ್ರ ದಾಯಗೊಂಡ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀಕಾಂತ ಕಾಟೇವಾಲೆ, ತಾಲೂಕು ನೋಡೆಲ್‌ ಅಧಿಕಾರಿ ಡಾ.ಆರುಂದತಿ ಕುಲಕರ್ಣಿ, ವಿವಿಧ ರೋಗಗಳ ತಜ್ಞ ವೈದ್ಯರಾದ ಡಾ.ವಿಜಯದತ್ತ ಎಂ., ಡಾ.ದೇವೆಂದ್ರಪ್ಪ ಕೆ., ಡಾ.ಬಿಜಾಪೂರ, ಡಾ.ವೆಂಕಟೇಶ ರಾಥೋಡ, ಡಾ.ತಾರಾಚಂದ, ಡಾ.ಸುನೀತಾ ಪಾಟೀಲ, ಡಾ.ನಿಖೀತಾ ಕೊಣ್ಣೂರ, ಡಾ.ಗೋಪಾಲರಾಜ, ಡಾ.ಪಿ.ಜಿ.ಸಜ್ಜನರ, ಡಾ.ಗುರುರಾಜ, ಡಾ.ಪುಷ್ಪಾ ಹಿರೇಮಠ ಅವರು ರೋಗಿಗಳ ತಪಾಸಣೆ ಮಾಡಿ ಸಲಹೆ ನೀಡಿದರು.

ಚಂಬಣ್ಣ ಬಾಳಿಕಾಯಿ, ಪುರಸಭೆ ಸದಸ್ಯರು, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ವಿಜಯ ಕುಂಬಾರ, ಪ್ರವೀಣ ಬೋಮಲೆ, ರಾಮಣ್ಣ ರಿತ್ತಿ, ಅನಿಲ ಮುಳಗುಂದ ಇತರರು ಹಾಜರಿದ್ದರು. ಬಿ.ಎಸ್‌.ಹಿರೇಮಠ, ಕೃಷ್ಣಕುಮಾರ ಕುಲಕರ್ಣಿ, ಶಿವಯ್ಯ ಕುಲಕರ್ಣಿ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next