ಶಹಾಬಾದ: ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ ಓದುವುದನ್ನು ರೂಢಿಸಿಕೊಂಡರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ರಾಷ್ಟ್ರಭಾಷಾ ಶಿಕ್ಷಣ ಸಮಿತಿ ಅಧ್ಯಕ್ಷ ಬಾಲಕಿಶನ ವರ್ಮಾ ಹೇಳಿದರು.
ನಗರದ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯ ಎಸ್.ಎಸ್. ನಂದಿ ಮತ್ತು ಎಸ್.ಜಿ. ವರ್ಮಾ ಹಿಂದಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉನ್ನತ ಹುದ್ದೆಗೆ ಹೋಗಬೇಕು ಎಂದರೆ ಬರೀ ಕನಸು ಕಟ್ಟಿಕೊಂಡರೆ ಸಾಲುವುದಿಲ್ಲ. ಕನಸು ನನಸು ಮಾಡುವುದಕ್ಕೆ ಅನುಸರಿಸಬೇಕಾದ ಮಾರ್ಗದ ಬಗ್ಗೆಯೂ ಆಲೋಚಿಸಬೇಕು. ಯಾವುದೇ ಹುದ್ದೆಗೆ ಸೇರ್ಪಡೆಗೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕಾಗುತ್ತದೆ. ಹೀಗಾಗಿ ವಿದ್ಯಾರ್ಥಿ ದೆಸೆಯಲ್ಲೇ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಿಎ ಇಂಗಿನಶೆಟ್ಟಿ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ರಾಜಗೋಪಾಲ ಜೂಜಾರೆ ಮಾತನಾಡಿ, ಈಗ ಜಾಗತೀಕರಣದಿಂದ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಾ ಮನೋಭಾವ ಹೆಚ್ಚುತ್ತಿದೆ. ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಗೌರವಿಸುತ್ತ ಕಠಿಣ ಪರಿಶ್ರಮ ಹಾಗೂ ದೃಢ ಆತ್ಮವಿಶ್ವಾಸದಿಂದ ಮುನ್ನಡೆದಾಗ ಜೀವನದಲ್ಲಿ ಯಶಸ್ಸು ಗಳಿಸಬಹುದು. ಭಾರತದ ಉಜ್ವಲ ಭವಿಷ್ಯ ಯುವ ಜನಾಂಗದ ಕೈಯಲ್ಲಿದೆ. ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತ ದೇಶದ ಅಭಿವೃದ್ಧಿಗೆ ಮುಂದಾಗಿ ಎಂದು ಸಲಹೆ ನೀಡಿದರು.
ಅತಿಥಿಗಳಾಗಿ ಸಂಸ್ಥೆ ಸದಸ್ಯ ಅಶೋಕ ಸೋಮಯಾಜಿ, ಡಾ| ಸದಾನಂದ ಕೋರಿ, ಶರಣಬಸಪ್ಪ ನಂದಿ, ಆಡಳಿತಾಧಿಕಾರಿ ರಮೇಶ ಥಳಂಗೆ, ಮುಖ್ಯ ಗುರುಗಳಾದ ಅನಿತಾ ಶರ್ಮಾ ಇದ್ದರು.
ಮುಖ್ಯಶಿಕ್ಷಕಿ ದಮಯಂತಿ ಸೂರ್ಯವಂಶಿ ಸ್ವಾಗತಿಸಿದರು. ಬಾಬಾಸಾಹೇಬ ಸಾಳುಂಕೆ ನಿರೂಪಿಸಿದರು. ಸುಧಿಧೀರ ಕುಲಕರ್ಣಿ ವಂದಿಸಿದರು.