Advertisement

ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ: ಪಿ.ವಿ.ಸಿಂಧು

09:18 AM Oct 02, 2019 | Lakshmi GovindaRaju |

ಮೈಸೂರು: ಕ್ರೀಡಾಪಟುಗಳು ಪಿ.ವಿ.ಸಿಂಧು ಅವರನ್ನು ಮಾದರಿಯಾಗಿಸಿಕೊಂಡು ಪರಿಶ್ರಮದಿಂದ ಯಶಸ್ಸು ಸಾಧಿಸಿ ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಶುಭ ಹಾರೈಸಿದರು. ದಸರಾ ಮಹೋತ್ಸವದ ಅಂಗವಾಗಿ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ದಸರಾ ಕ್ರೀಡಾಕೂಟ ಹಾಗೂ ಮುಖ್ಯಮಂತ್ರಿ ಕಪ್‌ – 2019 ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಕ್ರೀಡಾಪಟು ಪಿ.ವಿ.ಸಿಂಧು ಮಾತನಾಡಿ, ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಎಲ್ಲ ಕ್ರೀಡಾಪಟುಗಳೂ ಕಠಿಣ ಪರಿಶ್ರಮದಲ್ಲಿ ತೊಡಗುವ ಮೂಲಕ ತಮ್ಮ ಗುರಿ ತಲುಪಿ ಎಂದು ಸಲಹೆ ನೀಡಿದರು. ಇದಕ್ಕೂ ಮುನ್ನ ಯಡಿಯೂರಪ್ಪ ಅವರು, ಪಥಸಂಚಲನ ನಡೆಸಿದ ಮೈಸೂರು ಕ್ರೀಡಾ ವಸತಿ ನಿಲಯ, ಕಲಬುರಗಿ ವಲಯ, ಬೆಳಗಾವಿ ವಲಯ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ವಲಯ, ಮೈಸೂರು ವಲಯ ಮತ್ತು ಪೊಲೀಸ್‌ ಬ್ಯಾಂಡ್‌ ತಂಡದ ಸದಸ್ಯರಿಂದ ಗೌರವ ಧ್ವಜವಂದನೆ ಸ್ವೀಕರಿಸಿದರು.

ರೈತ, ಯೋಗ ದಸರಾ ಉದ್ಘಾಟನೆ: ಇದೇ ವೇಳೆ, ನಗರದ ಜೀವಣ್ಣರಾಯನಕಟ್ಟೆ ಮೈದಾನದಲ್ಲಿ ರೈತ ದಸರಾಕ್ಕೆ ಚಾಲನೆ ನೀಡಲಾಯಿತು. ರೈತ ದಸರಾ ಉದ್ಘಾಟಿಸಿ ಮಾತನಾಡಿದ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರೈತ ದಸರಾ, ರೈತರ ಬದುಕನ್ನು ಅನಾವರಣ ಗೊಳಿಸಲು ಉತ್ತಮ ವೇದಿಕೆಯಾಗಿದೆ ಎಂದರು. ರಾಜ್ಯದಲ್ಲಿ 34 ಸಾವಿರಕ್ಕೂ ಹೆಚ್ಚು ಮುಜ ರಾಯಿ ದೇವಸ್ಥಾನಗಳಿದ್ದು, ಈ ಪೈಕಿ ಸಂಪದ್ಬರಿತ ದೇವಸ್ಥಾನಗಳ ಮೂಲಕ ಸಾಮೂಹಿಕ ವಿವಾಹ ಏರ್ಪಡಿಸಿ, ವಧುವಿಗೆ ತಾಳಿ, ಸೀರೆ ಕೊಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಯೋಗ ದಸರಾ: ಕುವೆಂಪುನಗರದ ಸೌಗಂಧಿಕ ಉದ್ಯಾನದಲ್ಲಿ ಯೋಗ ವಾಹಿನಿ ಕಾರ್ಯಕ್ರಮಕ್ಕೆ ಶಾಸಕ ಎಸ್‌.ಎ.ರಾಮದಾಸ್‌ ಚಾಲನೆ ನೀಡಿದರು. ಈ ವೇಳೆ, ಮಾತನಾಡಿ, ಮೈಸೂರು ನಗರದಲ್ಲಿ ಈಗಾಗಲೇ ಅತಿ ಹೆಚ್ಚು ಜನರು ಒಂದೆಡೆ ಸೇರಿ ಸಾಮೂಹಿಕ ಯೋಗ ಪ್ರದರ್ಶನ ಮಾಡುವ ಮೂಲಕ ಗಿನ್ನಿಸ್‌ ದಾಖಲೆ ಮಾಡಲಾಗಿದೆ ಎಂದರು. ಇದೇ ವೇಳೆ, ಶಾಸಕ ಎಸ್‌.ಎ.ರಾಮದಾಸ್‌ ಅವರು, ನಗರದ ಪುರಭವನದ ಬಳಿ ಆಯೋಜಿಸಿದ್ದ ಪಾರಂಪರಿಕ ಉಡುಗೆಯಲ್ಲಿ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next