Advertisement

UV Fusion: ಕಾಗೆಗಳ ಗುಣಗಳನ್ನರಿತರೆ ಯಶಸ್ಸು ಕಠಿನವಲ್ಲ

03:43 PM Jan 06, 2024 | Team Udayavani |

ಜಗತ್ತಿನಲ್ಲಿ ಹಲವು ವಿಧದ, ಬಣ್ಣದ, ರೂಪದ, ಗಾತ್ರದ ಪಕ್ಷಿಗಳಿದ್ದು, ಅವೆಲ್ಲದರ ಪೈಕಿ ಅತ್ಯಂತ ಹೆಚ್ಚು ಅನಾದರಕ್ಕೆ ಒಳಗಾದ ಪಕ್ಷಿಯೆಂದರೆ ಕಾಗೆ. ಬಣ್ಣದಲ್ಲಿ ಕ ಪ್ಪು, ಕೂಗಿನಲ್ಲಿ ಕರ್ಕಶ ಇವೆಲ್ಲಾ ಕಾರಣಗಳಿಂದ ಮನುಷ್ಯನಿಗೆ ಕಾಗೆಗಳೆಂದರೆ ಅಷ್ಟಕ್ಕಷ್ಟೇ. ಜಗತ್ತಿನ ಜೀವವಿಜ್ಞಾನಿಗಳು ಮತ್ತು ಮಹಾನ್‌ ಆಡಳಿತಗಾರನಾದ ಚಾಣಕ್ಯ ಹೇಳುವಂತೆ ಮನುಷ್ಯನು ಕಾಗೆಯನ್ನು ನೋಡಿ ಕಲಿಯಬೇಕಾಗಿರುವ ಬಹಳಷ್ಟು ವಿಚಾರಗಳಿವೆ. ಅದರಲ್ಲೂ ಮುಖ್ಯವಾಗಿ ಕಾಗೆಯಲ್ಲಿ ಇರುವ ಯಶಸ್ಸಿನ ಗುಣಗಳನ್ನು ಎಲ್ಲರೂ ಕಲಿಯಲೇಬೇಕು.

Advertisement

ಅನ್ನದ ಅಗುಳೊಂದ ಕಂಡರೆ ಕೂಗಿ ಕರೆಯದೇ ಕಾಗೆಯೊಂದು ತನ್ನ ಬಳಗವನ್ನು ಎಂಬ ಮಾತೇ ಇರುವಂತೆ ಕಾಗೆಯು ಒಂದು ತುತ್ತು ಆಹಾರ ಸಿಕ್ಕರೂ ಅದನ್ನು ತನ್ನ ಬಳಗದೊಂದಿಗೆ ಹಂಚಿಕೊಡು ತಿನ್ನುತ್ತದೆ. ಒಂದು ಅಗುಳು ಅನ್ನದ ಮೌಲ್ಯ ಹಾಗೂ ಹಸಿವಿನ ಬೆಲೆ ಕಾಗೆಗೆ ಚೆನ್ನಾಗಿ ತಿಳಿದಿದೆ. ಹಾಗಾಗಿ ತನಗೆ ಏನಾದರೂ ತಿನ್ನಲು ಸಿಕ್ಕರೆ ತತ್‌ಕ್ಷಣ ಅದು ತನ್ನ ಬಳಗವನ್ನೆಲ್ಲಾ ಕೂಗಿ ಕರೆದು ಅದನ್ನು ಹಂಚಿಕೊಡು ತಿನ್ನುತ್ತದೆ. ಆದರೆ ಮನುಷ್ಯನು ಸ್ವಾರ್ಥ ಜೀವಿಯಾಗಿದ್ದು, ತನಗೇನಾದರೂ ಸಿಕ್ಕರೆ ಅದು ತನಗೊಬ್ಬನಿಗೇ ಸೇರಬೇಕು ಎನ್ನುವ ಲಾಲಸೆಯ ಗುಣಕ್ಕೆ ಬದಲಾಗಿ ಎಲ್ಲರಿಗೂ ಹಂಚಿ ತಿನ್ನುವಂತಹ ವಿಭಿನ್ನವಾದ ಗುಣವನ್ನು ಹೊಂದಬೇಕು.

ಕಾಗೆಯಿಂದ ಕಲಿಯಬೇಕಾದ ಮೊದಲನೆಯ ಗುಣವೆಂದರೆ ಎಲ್ಲೂ ಕಾಗೆಯು ಬಹಿರಂಗವಾಗಿ ಮಿಲನವನ್ನು ನಡೆಸುವುದಿಲ್ಲ ಮತ್ತು ಅದನ್ನು ತೀರಾ ಗುಪ್ತವಾಗಿರಿಸುತ್ತದೆ. ಮನುಷ್ಯ ಇದನ್ನು ಸರಿಯಾಗಿ ಅರಿತುಕೊಂಡರೆ ಮತ್ತು ಅದರ ಮೌಲ್ಯವನ್ನು ಅರಿತರೆ ಆತನಿಗೆ ಸಮಾಜದಲ್ಲಿ ಅಪಾರ ಗೌರವ ಪ್ರಾಪ್ತಿಯಾಗುತ್ತದೆ.

ಶತ್ರುಗಳು ಯಾರಾದರೂ ಕಾಗೆಯ ಮೇಲೆ, ತನ್ನ ಮನೆಯ ಮೇಲೆ ಅಥವಾ ತನ್ನ ಕುಟುಂಬದ ಮೇಲೆ ದಾಳಿಯನ್ನು ಮಾಡಿದರೆ ಅಥವಾ ದಾಳಿ ಮಾಡುವ ಮುನ್ಸೂಚನೆ ದೊರೆತರೆ ಶತ್ರುಗಳ ಮೇಲೆ ಏಕಾಂಗಿಯಾಗಿಯೂ ಪ್ರತಿಯಾಗಿ ದಾಳಿ ನಡೆಸಿ ಅವರನ್ನು ಬಿಟ್ಟೂಬಿಡದೆ ಕಾಡಿ ಹೈರಾಣಾಗಿ ಮಾಡುತ್ತದೆ. ತನ್ನ ಹಾಗೂ ತನ್ನ ಕುಟುಂಬದ ರಕ್ಷಣೆಗೆ ತನಗೆ ಅಪಾಯವಿದ್ದರೂ ಕಾಗೆಯು ಭಿತಿಗೊಳ್ಳದೇ ಧೈರ್ಯದಿಂದ ಎದುರಾಳಿಯನ್ನು ಹಿಮ್ಮೆಟ್ಟಿಸುತ್ತದೆ. ಮನುಷ್ಯನೂ ಬದುಕಲ್ಲಿ ಎಂತಹ ಪರಿಸ್ಥಿತಿ ಬಂದರೂ ಧೈರ್ಯದಿಂದ ಅದನ್ನು ಎದುರಿಸುವ ಮನೋಧೈರ್ಯವನ್ನು ಹೊಂದಬೇಕು. ಅದೇ ರೀತಿ ಕಾಗೆಯಲ್ಲಿರುವ ಮತ್ತೂಂದು ಗುಣವೆಂದರೆ ತನ್ನ ಬಳಿ ಇರುವ ಯಾವುದೇ ವಸ್ತುಗಳನ್ನು ಅದು ಬಹಳ ಜಾಗರೂಕತೆಯಿಂದ ಕಾಪಾಡಿಕೊಳ್ಳುತ್ತದೆ.

ಕಾಗೆಯು ಯಾವುದೇ ವಸ್ತುವೂ ವ್ಯರ್ಥವಾಗಿ ಹಾಳಾಗಬಾರದು ಎಂದು ಅದನ್ನು ಅತ್ಯಂತ ಜತನದಿಂದ ಕಾಪಾಡಿಕೊಳ್ಳುತ್ತದೆ. ಅದೇ ರೀತಿ ಮನುಷ್ಯನೂ ಯಾವುದೇ ವಸ್ತುವನ್ನು ನಿರುಪಯುಕ್ತವೆಂದು ಕಸದ ಬುಟ್ಟಿಗೆ ಎಸೆಯುವ ಮೊದಲು ಹಲವು ಬಾರಿ ಯೋಚಿಸಬೇಕು ಮತ್ತು ಅದರ ಮರುಬಳಕೆಯ ಕುರಿತು ಕಾಳಜಿವಹಿಸಬೇಕು.

Advertisement

ಕಾಗೆಯ ಮತ್ತೂಂದು ಅದ್ಭುತವಾದ ಗುಣವೆಂದರೆ ಅದು ಯಾವತ್ತೂ ಮೈಮರೆಯದೇ ಸದಾ ಜಾಗೃತ ಸ್ಥಿತಿಯಲ್ಲಿರುತ್ತದೆ. ತನ್ನ ಮೇಲೆ ಯಾವ ದಿಕ್ಕಿನಿಂದ ಆಕ್ರಮಣ ನಡೆದರೂ ಅದನ್ನು ಎದುರಿಸಲು ಸದಾ ಸನ್ನದವಾಗಿಯೇ ಇರುತ್ತದೆ ಮತ್ತು ತನ್ನ ಶತ್ರುಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರುತ್ತದೆ. ಅದೇ ರೀತಿ ಮನುಷ್ಯನು ತನ್ನ ಸುತ್ತಮುತ್ತ ಇರುವ ಶತ್ರುಗಳು ಮತ್ತು ಸ್ನೇಹಿತರ ಕುರಿತು ಎಚ್ಚರಿಕೆಯಿಂದ ಇರಬೇಕು.

ಕಾಗೆಯು ಯಾರನ್ನೂ ಅತಿಯಾಗಿ ನಂಬದೇ ಇರುವ ಪಕ್ಷಿ, ಕಾಗೆಯು ತನಗೆ ತಾನೇ ಸಾಟಿ ಎನ್ನುವಂತೆ ಸ್ವಸಾಮರ್ಥ್ಯವನ್ನು ನಂಬಿಕೊಡು ಜೀವಿಸುತ್ತದೆ. ಮನುಷ್ಯನೂ ಇದೇ ರೀತಿ ಎಲ್ಲ ವಿಚಾರಗಳಲ್ಲೂ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಇಂತಹ ವಿಶಿಷ್ಟವಾದ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸಿನೆಡೆಗೆ ಸಾಗಬಹುದು.

-ಸಂತೋಷ್‌ ರಾವ್‌ ಪೆರ್ಮುಡ

ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next