Advertisement

ಪಠಣ, ಮಂಥನದ ಗುಣವಿದ್ದರೆ ವೃತ್ತಿಯಲ್ಲಿ ಯಶಸ್ಸು

06:08 PM Aug 19, 2022 | Team Udayavani |

ಚಿಕ್ಕಬಳ್ಳಾಪುರ: ಯಾರಿಗೆ ತನ್ನ ವೃತ್ತಿಯಲ್ಲಿ ಯಶಸ್ಸು ಸಾಧಿಸಬೇಕು ಎಂಬ ಹಂಬಲವಿರುತ್ತದೆಯೋ ಅಂತಹವರು ತಮ್ಮ ಕ್ಷೇತ್ರದ ಬಗ್ಗೆ ಪಠಣ, ಮನನ, ಮಂಥನ ಮಾಡುವುದು ಅಗತ್ಯವಾಗಿದೆ. ವಕೀಲ ವೃತ್ತಿಯಲ್ಲಿರುವವರು ಈ ಗುಣಗಳನ್ನು ಪಾಲಿಸಿದರೆ ಯಶಸ್ವಿ ನ್ಯಾಯವಾದಿ ಅಷ್ಟೇ ಅಲ್ಲದೆ, ನ್ಯಾಯಾಧೀಶರೂ ಆಗಬಹುದು ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ರಾಜಶೇಖರ್‌ ಅಭಿಪ್ರಾಯಪಟ್ಟರು.

Advertisement

ನಗರ ಹೊರವಲಯದ ಕೆಂಪೇಗೌಡ ಕಾನೂನು ಕಾಲೇಜಿನಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ನೂತನವಾಗಿ ಸ್ಥಾಪಿಸಿರುವ “ಉಚಿತ ಕಾನೂನು ಸೇವಾ ಕೇಂದ್ರ’ಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶದ ಎಲ್ಲಾ ಕಾನೂನು ಕಾಲೇಜುಗಳಲ್ಲಿರುವ “ಉಚಿತ ಕಾನೂನು ಸೇವಾ ಕೇಂದ್ರಗಳು’ ಕೇವಲ ಪ್ರದರ್ಶನದ ಗೊಂಬೆಗಳಾಗುವ ಬದಲು ತನ್ನ ಸ್ಥಾಪನೆಯ ಉದ್ದೇಶವನ್ನು ಅರಿತು ಕೆಲಸ ಮಾಡಿದಾಗ ಸಾರ್ಥಕತೆ ಪಡೆಯಲು ಸಾಧ್ಯ ಎಂದು ವಿವರಿಸಿದರು.

ಡಿಜಿಟಲೀಕರಣ: ಈ ಉಚಿತ ಕಾನೂನು ಸೇವಾ ಕೇಂದ್ರ, ಉತ್ತಮವಾಗಿ ಕೆಲಸ ಮಾಡುವುದೆಂಬ ನಂಬಿಕೆ ನನಗಿದೆ. ಇಂದು ನ್ಯಾಯಾಂಗ ಕ್ಷೇತ್ರವೂ ಬದಲಾದ ಕಾಲಕ್ಕೆ ಅನುಗುಣವಾಗಿ ಕ್ಷಿಪ್ರಗತಿಯಲ್ಲಿ ಡಿಜಿಟಲೀಕರಣಗೊಂಡು ನ್ಯಾಯದಾನವನ್ನು ಸಾರ್ವಜನಿಕರಿಗೆ ಒದಗಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ಷೇತ್ರದಲ್ಲಿ ಮುಂದೆ ಸಾಗಿ: 30-40 ವರ್ಷ ಹಿಂದೆ ಇದ್ದ ವ್ಯವಸ್ಥೆ ಈಗಿಲ್ಲ ಎಂಬುದನ್ನು ಅರಿತು ಆಧುನಿಕತೆಯ ಜತೆಗೆ ಕಾನೂನು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು, ಬೋಧಕರು, ವಕೀಲರು ತಮ್ಮ ಕಾರ್ಯಕ್ಷೇತ್ರದಲ್ಲಿ ಮುಂದೆ ಸಾಗಬೇಕು ಎಂದು ಸಲಹೆ ನೀಡಿದರು.

Advertisement

ಅಹಂಕಾರ ಬಿಡಿ: ಸಾರ್ವಜನಿಕ ಬದುಕಿನಲ್ಲಿ ನಿವೃತ್ತಿಯ ಹಂಗಿಲ್ಲದ ಯಾವುದಾದರೂ ವೃತ್ತಿಯಿದೆ ಎಂದರೆ ಅದು ವಕೀಲಿ ವೃತ್ತಿಯಾಗಿದೆ. ಆಧುನಿಕತೆಯ ಕಾಲಘಟ್ಟದಲ್ಲಿ ಕೂಡ ವಕೀಲಿಕೆ ಬಹುಬೇಡಿಕೆಯ ವೃತ್ತಿಯಾಗಿ ಚಾಲ್ತಿಯಲ್ಲಿದೆ. ಇಂತಹ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಯಾವುದೇ ವ್ಯಕ್ತಿ ಇರಲಿ, ನನಗೆ ಎಲ್ಲವೂ ಗೊತ್ತು ಎನ್ನುವ ಅಹಂಕಾರವನ್ನು ತ್ಯಜಿಸಿದರೆ ಮಾತ್ರ ಜನಾನುರಾಗಿ ನ್ಯಾಯವಾದಿಯಾಗಬಹುದು ಎಂದು ಹೇಳಿದರು.

ಕಾನೂನು ಗೌರವಿಸಿ: ಎಲ್‌ಎಲ್‌ಬಿ ಮಾಡುವಾಗ ಓದಿದ ಎಲ್ಲ ಜ್ಞಾನವೂ ವೃತ್ತಿ ಬದುಕಿನಲ್ಲಿ ಕೈಹಿಡಿಯಲಿದೆ. ಹೀಗಾಗಿ ಈ ದೇಶದ ಕಾನೂನುಗಳಿಗೆ ಶಿಕ್ಷಣ ಪಡೆಯುವ ಪ್ರತಿಯೊಬ್ಬರೂ ಗೌರವ ನೀಡಿದಾಗ ಮಾತ್ರವೇ ಕಾನೂನು ನಮ್ಮನ್ನು ಗೌರವಿಸಲಿದೆ ಎಂದು ತಿಳಿಸಿದರು.

ಸತತ ಪರಿಶ್ರಮ, ಶ್ರದ್ಧೆ ಇರಲಿ: ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್‌ ಜೆ. ಮಿಸ್ಕಿನ್‌ ಮಾತನಾಡಿ, ಲಾ ಓದುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಸತತ ಪರಿಶ್ರಮ, ಶ್ರದ್ಧೆ ಮತ್ತು ಸೇವಾಪರವಾದ ಮನಸ್ಸನ್ನು ಹೊಂದಿದಾಗ ಮಾತ್ರವೇ ಜೀವನದಲ್ಲಿ ಎತ್ತರದ ಸ್ಥಾನ ಅಲಂಕರಿಸಲು ಸಾಧ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶೋಭಾ ಮಾತನಾಡಿದರು. ವಕೀಲರಾದ ಮಂಜುನಾಥರೆಡ್ಡಿ, ಸೌಜನ್ಯಾ ಗಾಂಧಿ, ಕಾನೂನು ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next