ಹೊಸಪೇಟೆ: ಸಚಿವ ಆನಂದ್ ಸಿಂಗ್ ಯಾದಿಯಾಗಿ ವಿಜಯನಗರ ಜಿಲ್ಲೆಯ ಕಾರ್ಯಕರ್ತರು, ರಾಮನಭಂಟ ಹನುಮನಂತೆ ಹಗಲಿರಳು ಶ್ರಮಿಸಿ ಬಿಜೆಪಿ ರಾಜ್ಯ ಕಾರ್ಯಕಾರಣಿಯನ್ನು ಯಶ್ವಸಿಗೊಳಿಸಿದ್ದಾರೆ. ಅವರ ಕಾರ್ಯಕ್ಕೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್ ಸಂತಸ ವ್ಯಕ್ತಪಡಿಸಿದರು.
ನಗರದ ಸಿದ್ದಿಪ್ರಿಯಾ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯ ಅವಲೋಕನ ಮತ್ತು ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ಕೇವಲ ಆಚಾರ-ವಿಚಾರ, ಅಧಿಕಾರ ಹಾಗೂ ರಾಜಕಾರಣಕ್ಕೆ ಹೆಸರುವಾಸಿಯಾಗಿಲ್ಲ. ಕಾರ್ಯದಕ್ಷತೆ, ಕರ್ತವ್ಯ ನಿಷ್ಠೆಗೂ ಮುಂಚೂಣಿಯಲ್ಲಿದೆ. ಇದಕ್ಕೆ ಕಳೆದ ತಿಂಗಳು ನಡೆದ ಯಶ್ವಸಿ ಕಾರ್ಯಕಾರಣಿಯೇ ಸಾಕ್ಷಿಯಾಗಿದೆ. ಕಾರ್ಯಕಾರಣಿ ಯಶ್ವಸಿಗೆ ಕಾರಣಾದ ಪ್ರತಿಯೊಬ್ಬ ಕಾರ್ಯಕರ್ತರು ಸ್ಮರಣೀಯ ಎಂದು ಕೊಂಡಾಡಿದರು.
ಪಕ್ಷದ ತತ್ವ-ಸಿದ್ಧಾಂತವನ್ನು ಒಪ್ಪಿ ನಗರಸಭೆಯ ಕಾಂಗ್ರೆಸ್‌ನ ಐವರು ಸದಸ್ಯರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ವಿಜಯನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಕ್ತ ಮಾಡಲಾಗುವುದು ಎಂದರು.
ಸಂಕಷ್ಟ ಸಮಯದಲ್ಲಿ ರಾಜ್ಯಾಧ್ಯಕ್ಷನಾಗಿ ಪಾರ್ಟಿ ಕಟ್ಟುವ ಕಾರ್ಯದಲ್ಲಿ ನಿರತನಾಗಿರುವೆ. ಕೋವಿಡ್ ಸಮಯದಲ್ಲಿ ಪಕ್ಷದ ಕಾರ್ಯಕರ್ತರಿಗೆ ಟಾಸ್ಕ್ ಗಳನ್ನು ನೀಡಿ ಯಶಸ್ವಿ ಮಾಡಿರುವೆ. ರಾಜ್ಯದಲ್ಲಿ ಆರು ಕಾರ್ಯಕಾರಿಣಿ ನಡೆಸಲಾಗಿದೆ. ಅದರಲ್ಲಿ ವಿಜಯನಗರದ ಕಾರ್ಯಕಾರಿಣಿ ಅತ್ಯುತ್ತಮ ಕಾರ್ಯಕಾರಿಣಿಯಾಗಿದೆ. ವಿಜಯನಗರ, ಬಳ್ಳಾರಿ ಜಿಲ್ಲೆಗಳ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವೆ ಎಂದರು.
ವಿಜಯನಗರದ ಕಾರ್ಯಕಾರಿಣಿಯಲ್ಲಿ ವಸ್ತುಪ್ರದರ್ಶನ ಅತ್ಯುತ್ತಮವಾಗಿತ್ತು. ಬಿಜೆಪಿ ವಿಚಾರ, ಸಿದ್ಧಾಂತ, ಅಧಿಕಾರದ ಮೇಲೆ ನಿಂತಿಲ್ಲ. ಕಾರ್ಯ ಪದ್ಧತಿ ಮೇಲೆ ನಿಂತಿದೆ. ಸಭೆ, ಮುಂದಿನ ಯೋಚನೆ, ಕಾರ್ಯಕರ್ತರ ಬೆಳವಣಿಗೆ, ವ್ಯಕ್ತಿಗತ ಬೆಳವಣಿಗೆ ಬಿಜೆಪಿ ಕಾರ್ಯಪದ್ಧತಿ ಶೈಲಿಯಾಗಿದೆ. ವಿಜಯನಗರದ ಕಾರ್ಯಕಾರಿಣಿ ಈ ಕಾರ್ಯ ಮಾಡಿದೆ ಎಂದರು.
ಕಾರ್ಯಕಾರಿಣಿ ನಡೆಸುವ ಮುನ್ನ ಫ್ಲೆಕ್ಸ್, ಲೈಟಿಂಗ್, ಪಕ್ಷದ ಬಾವುಟ, ಅಲಂಕಾರ ಹೇಗಿರಬೇಕು ಎಂದು ಪಕ್ಷ ತಿಳಿಸುತ್ತದೆ. ಯುವ ಮುಖಂಡ ಸಂದೀಪ್ ಸಿಂಗ್ ಅಚ್ಚುಕಟ್ಟಾಗಿ ಅಲಂಕಾರ ವ್ಯವಸ್ಥೆ ಮಾಡಿದ್ದರು. ಇನ್ನೂ ವೇದಿಕೆ ನಿರ್ಮಿಸಿದ ಎಂ.ವಿ. ವಾಸು, ಶರವಣ್ಯ ಅವರ ಕಾರ್ಯವೂ ಶ್ಲಾಘನೀಯವಾದುದು ಎಂದರು.
ಏಪ್ರಿಲ್ 16ರ ರಾತ್ರಿ ವರುಣದೇವ ಪರೀಕ್ಷೆ ಒಡ್ಡಿದರು. ವೇದಿಕೆ ಬೀಳುವ ಹಂತಕ್ಕೆ ಹೋಗಿತ್ತು. ಅದನ್ನು ಮೀರಿ ಬುದ್ಧಿವಂತಿಕೆಯಿಂದ ವೇದಿಕೆ ಬೀಳದಂತೆ ನಿಗಾವಹಿಸಿ ವೇದಿಕೆಯನ್ನು ಯಥಾವತ್ ಮರು ನಿರ್ಮಿಸಿದ್ದು ವಿಜಯನಗರದ ಜನ ಬುದ್ಧಿವಂತಿಕೆಯಲ್ಲೂ ಮುಂದಿದ್ದಾರೆ ಎಂಬುದನ್ನು ತೋರ್ಪಡಿಸುತ್ತದೆ ಎಂದರು.
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾತನಾಡಿ, ವಿಜಯನಗರದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಅಂತ್ಯವಲ್ಲ. ಆರಂಭ. ಈ ಬಾರಿ ಬಿಜೆಪಿ 150 ಸ್ಥಾನ ಗೆಲ್ಲುವ ಗುರಿ ಹೊಂದಿದೆ. ನನ್ನ ಪ್ರಕಾರ 126 ಸ್ಥಾನದಲ್ಲಿ ಗೆದ್ದು ಮತ್ತೆ ಸರ್ಕಾರ ರಚನೆ ಮಾಡಲಿದೆ ಎಂದರು.
ಚುನಾವಣೆಯಲ್ಲಿ ಗೆದ್ದ ಸಂಭ್ರಮಕ್ಕಿಂತ ಕಾರ್ಯಕಾರಿಣಿ ಯಶಸ್ಸಿಗೊಳಿಸಿದ್ದು ನನಗೆ ಖುಷಿ ಕೊಟ್ಟಿದೆ. ಕಾಂಗ್ರೆಸ್‌ಗೆ ಭವಿಷ್ಯ ಇಲ್ಲ. ಹಾಗಾಗಿ ನಗರಸಭೆಯ ಐವರು ಕೈ ಸದಸ್ಯರು ಬಿಜೆಪಿ ಸೇರಿದ್ದಾರೆ. ಟೀಮ್ ವರ್ಕ್, ನೆಟ್ ವರ್ಕ್, ಹಾರ್ಡ್ ವರ್ಕ್‌ದಿಂದ ಕೆಲಸ ಮಾಡಿದರೆ ಖಂಡಿತ ಯಶಸ್ಸು ಲಭಿಸಲಿದೆ ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮಾತನಾಡಿ, ರಾಜ್ಯ ಕಾರ್ಯಕಾರಿಣಿಯಿಂದ ಎರಡನೇ ಹಂತದ ನಾಯಕರನ್ನು ಬೆಳೆಸುವ ಕಾರ್ಯ ಮಾಡಲಾಯಿತು. ಅಶ್ವಮೇಧಯಾಗದ ಕುದುರೆ ವಿಜಯನಗರದಿಂದ ಬಿಡಲಾಗಿದೆ. ಖಂಡಿತ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ದೊರೆಯಲಿದೆ ಎಂದರು.
ಬಿಜೆಪಿ ವಿಜಯನಗರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಎಂಎಲ್ಸಿ ವೈ.ಎಂ. ಸತೀಶ್, ಮಾಜಿ ಶಾಸಕರಾದ ನೇಮಿರಾಜ್ ನಾಯ್ಕ, ಚಂದ್ರಾ ನಾಯ್ಕ, ಮುಖಂಡರಾದ ಅಶ್ವತ್ಥ ನಾರಾಯಣ, ಶಶಿಲ್ ನಮೋಶಿ, ಚಂದ್ರಶೇಖರ ಪಾಟೀಲ್ ಹಲಗೇರಿ, ಸಿದ್ದೇಶ್ ಯಾದವ್, ಅಯ್ನಾಳಿ ತಿಮ್ಮಪ್ಪ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಹುಡಾ ಅಧ್ಯಕ್ಷ ಅಶೋಕ್ ಜೀರೆ, ಸಿದ್ದಾರ್ಥ ಸಿಂಗ್, ಬಂಗಾರು ಹನುಮಂತ, ಕವಿತಾ ಸಿಂಗ್, ಸುವರ್ಣ ಆರುಂಡಿ, ಸುಗುಣ ಮತ್ತಿತರರಿದ್ದರು.
ಬಿಜೆಪಿ ಸೇರಿದ ನಗರಸಭೆ ಸದಸ್ಯರು
ಕಾಂಗ್ರೆಸ್‌ನ ನಗರಸಭೆ ಸದಸ್ಯರಾದ ವಿ. ಹುಲುಗಪ್ಪ, ಗುಡುಗಂಟಿ ರಾಧಾ ಮಲ್ಲಿಕಾರ್ಜುನ, ಎಚ್.ಕೆ. ಮಂಜುನಾಥ, ಲಕ್ಷೀ ಪರಗಂಟಿ ಮತ್ತು ರೋಹಿಣಿ ವೆಂಕಟೇಶ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.