Advertisement

ಪರಿಶ್ರಮ-ಏಕಾಗ್ರತೆಯಿಂದ ಯಶಸ್ಸು ಸಾಧ್ಯ: ಹಾದಿಮನಿ

01:23 PM Mar 25, 2022 | Team Udayavani |

ಹುನಗುಂದ: ಸತತ ಪರಿಶ್ರಮ ಮತ್ತು ಏಕಾಗ್ರತೆಯಿಂದ ಮಾಡಿದ ಕಾರ್ಯದಲ್ಲಿ ಮಾತ್ರ ಯಶಸ್ಸು ನಿರೀಕ್ಷಿಸಲು ಸಾಧ್ಯ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ, ನಿವೃತ್ತ ಪ್ರಾಧ್ಯಾಪಕ ಎಸ್‌. ಎನ್‌.ಹಾದಿಮನಿ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಅಮೂಲ್ಯವಾದ ವಿದ್ಯಾರ್ಥಿ ಜೀವನದ ಪ್ರತಿ ಕ್ಷಣ ಸದುಪಯೋಗಪಡಿಸಿಕೊಂಡು ತಮ್ಮ ಬದುಕನ್ನು ರೂಪಿಸಿಕೊಳ್ಳುವುದರತ್ತ ವಿದ್ಯಾರ್ಥಿಗಳು ಗಮನಕೊಡಬೇಕು. ಸಾಧಕರಾದಾಗ ಮಾತ್ರ ಸಮಾಜ ನಮ್ಮನ್ನು ಗೌರವಿಸುತ್ತದೆ. ನಿರಂತರ ಪ್ರಯತ್ನದಿಂದ ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಮಾದರಿ ವ್ಯಕ್ತಿಗಳಾಗಿ ಎಂದರು.

ಪತ್ರಕರ್ತ ಅಮರೇಶ ನಾಗೂರ ಮಾತನಾಡಿ, ಸರ್ಕಾರದ ಸೌಲಭ್ಯದ ಜತೆಗೆ ದಾನಿಗಳ ನೆರವನ್ನು ಸದುಪಯೋಗಪಡಿಸಿಕೊಳ್ಳಬೇಕು. ರಾಜ್ಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಬೇಕು ಎಂದರು.

ಸರ್ಕಾರದಿಂದ ಪೂರೈಕೆಯಾದ ಸ್ಮಾರ್ಟ್‌ ಬೋರ್ಡ್‌ ಅನಾವರಣ ಮಾಡಿದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶರಣಗೌಡ ಅಮರಣ್ಣವರ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ವಿದ್ಯಾರ್ಥಿಗಳಾದ ಅಪೂರ್ವ ಮಲಗಿಹಾಳಮಠ, ಐಶ್ವರ್ಯ ಮುಳ್ಳೂರ, ಸ್ವಪ್ನಾ ಮೇಟಿ, ಪಾರ್ವತಿ ಹಿರೇಕುರುಬರ, ಅಮರೇಶ ಬಡಿಗೇರ, ಬಸಮ್ಮ ಗೌಡರ, ಸಾವಿತ್ರಿ ಬಸನಗೌಡರ, ಯಲ್ಲವ್ವ ನಡಗಡ್ಡಿ ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕರ ಪರವಾಗಿ ಶರಣಪ್ಪ ಹೂಲಗೇರಿ ಮಾತನಾಡಿದರು.

Advertisement

ಇದೇ ಸಂದರ್ಭದಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗಾಗಿ ಉಚಿತ ನೋಟ್‌ಬುಕ್‌ ವಿತರಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸುಭಾಸ ಮುಕ್ಕಣ್ಣವರ, ಯಲ್ಲಪ್ಪ ಕರಿಗೌಡರ ಉಪಸ್ಥಿತರಿದ್ದರು. ಪ್ರಾಚಾರ್ಯ ಎ.ಎಚ್‌. ಮೋಮಿನ್‌ ಅಧ್ಯಕ್ಷತೆ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next