Advertisement

ಸತ್‌ಚಿಂತನೆಯಿಂದ ಯಶಸ್ಸು

12:59 AM Mar 16, 2020 | Sriram |

ನಮ್ಮ ಸತ್‌ಚಿಂತನೆಗಳು ನಮ್ಮಲ್ಲಿ ಉತ್ತಮ ವ್ಯಕ್ತಿತ್ವ ವನ್ನು ರೂಪಿಸುತ್ತವೆ. ನಮ್ಮಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಢಿಸಿಕೊಂಡಾಗ ಯಶಸ್ಸು ಲಭಿಸುತ್ತದೆ. ಇದಕ್ಕೆ ಉತ್ತಮ ಅಲೋಚನೆಯನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂಬುವುದು ಈ ಲೇಖನದ ಸಾರ.

Advertisement

ನಮ್ಮ ಭಾವನೆ ಬದುಕನ್ನು ನಿರ್ಣಯಿಸುತ್ತದೆ. ವ್ಯಕ್ತಿತ್ವವನ್ನು ಸೂಚಿಸುತ್ತದೆ. ಮನಸ್ಸಿನಲ್ಲಿ ಸದ್ಭಾವನೆಯಿದ್ದರೆ ರಾಗ, ದ್ವೇಷಗಳು ನಮ್ಮನ್ನು ಕಾಡುವುದಿಲ್ಲ. ಹಾಗೇ ಅರಿಷಡ್ವರ್ಗಗಳು ನಮ್ಮ ನಿಯಂತ್ರಣದಲ್ಲಿದ್ದಾಗ ಸದಾ ಶಾಂತಿ ನೆಲೆಸಿ ಬದುಕು ಸಾರ್ಥಕ್ಯವನ್ನು ಕಾಣುತ್ತದೆ.

ನಮ್ಮ ಪ್ರತಿಯೊಂದು ಚಟುವಟಿಕೆ ಆಲೋಚನೆಯಿಂದ ಪ್ರಾರಂಭವಾಗುತ್ತದೆ. ಆಲೋ ಚನೆ ಭಾವನೆಯಿಂದ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಸದ್ಭಾವನೆಯ ಬೀಜಗಳನ್ನು ಮನಸ್ಸಿನಲ್ಲಿ ಬಿತ್ತಿದರೆ ಜೀವನದಲ್ಲಿ ಸಫ‌ಲತೆ ಕಾಣಬಹುದು.

ನಿಸ್ವಾರ್ಥ ಮನಸ್ಸಿನಿಂದ ಮಾಡುವ ಸತ್‌ಚಿಂತನೆ ಉತ್ತಮ ಫ‌ಲಕೊಡುತ್ತದೆ. ಪರರನ್ನು ದೂರುವುದಕ್ಕಿಂತ ಅಂತರ್‌ಮುಖೀಯಾಗಿ ನಮ್ಮೊಳಗಿನ ತಪ್ಪುಗಳನ್ನು ತಿದ್ದಿಕೊಂಡು ಕಲ್ಮಶರಹಿತ ಭಾವದಿಂದ ಕರ್ತವ್ಯ ನಿರತರಾಗಬೇಕು. ಸತ್‌ಚಿಂತನೆ, ಸದ್ಭಾವನೆ, ಸದ್ವರ್ತನೆಗಳಿಂದ ಸನ್ಮಾರ್ಗದ ಮೂಲಕ ಬದುಕಿನಲ್ಲಿ ಯಶಸ್ಸು ಕಂಡುಕೊಳ್ಳಬೇಕು.

ಸಂತೃಪ್ತಿ ಕಾಣಿರಿ
ಸುಖ-ದುಃಖ ಎರಡನ್ನೂ ಎಲ್ಲರೂ ಬದುಕಿನಲ್ಲಿ ಅನುಭವಿಸಲೇಬೇಕು. ಹಾಗಾಗಿ ಒಳಿತು – ಕೆಡುಕುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಪ್ರವೃತ್ತಿ ಬೆಳೆಸಿಕೊಳ್ಳುವುದು ಉತ್ತಮ. ಜೀವನ ಇವತ್ತು ಇದ್ದ ಹಾಗೆ ನಾಳೆ ಇರುವುದಿಲ್ಲ. ನಾಳೆಯ ಬಗ್ಗೆ ಚಿಂತಿಸುತ್ತಾ ಸಮಯ ಕಳೆಯುವ ಬದಲು ಇಂದಿನ ಕೆಲಸಕಾರ್ಯಗಳನ್ನು ಶ್ರದ್ಧೆಯಿಂದ ಮಾಡಿ. ತನ್ನ ಪಾಲಿಗೆ ಸಿಕ್ಕಿರುವ ಫ‌ಲದಲ್ಲಿ ಸಂತೃಪ್ತಿಯನ್ನು ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು.

Advertisement

ಎತ್ತರಕ್ಕೆ ಬೆಳೆದಿರುವುದು ಬಾಗಲೇಬೇಕು. ಬಾಗಿದ್ದು ಬೀಳಲೇಬೇಕು. ಈ ನಿಜ ಸಂಗತಿಯನ್ನು ಅರಿತಾಗ ನಮ್ಮ ಬದುಕು ಇತಿಮಿತಿಯಲ್ಲಿ ನಡೆಯುತ್ತದೆ. ಸಕಲ ಜೀವರಾಶಿಗಳಲ್ಲಿ ಶ್ರೇಷ್ಠ ಎನಿಸಿರುವ ಮಾನವ ಜೀವನವನ್ನು ಉಪಯುಕ್ತವಾಗುವಂತೆ ಬಳಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ.

ಭ್ರಮೆಯಿಂದ ಹೊರಬನ್ನಿ
ಹಣ, ಅಧಿಕಾರ, ಪ್ರಭಾವ ಇದ್ದರೆ ಏನನ್ನೂ ಸಾಧಿಸಬಹುದು ಎಂಬ ಭ್ರಮೆಯಿಂದ ಹೊರಬಂದು, ಇನ್ನೊಬ್ಬರ ನೋವು-ನಲಿವುಗಳಿಗೆ ಸ್ಪಂದಿಸಿ. ಮನದಂಗಳದ ಗಿಡಗಳಾದ ವಾತ್ಸಲ್ಯ, ಕರುಣೆ, ಪ್ರೀತಿ, ದಯೆ, ಸಮಾಧಾನ, ಶಾಂತಿ ಇತ್ಯಾದಿಗಳಿಗೆ ನೀರೆರೆದು ಪೋಷಿಸಬೇಕು. ಇತರರೂ ಇಂತಹ ಸದ್ಭಾವನೆ ಬೆಳೆಸಿಕೊಳ್ಳುವಂತೆ ಪ್ರೇರೇಪಿಸಬೇಕು.

ಆಸೆಗೆ ಲಗಾಮು ಹಾಕಿ
ಎಲ್ಲವನ್ನು, ಎಲ್ಲರನ್ನೂ ಮೀರಿ ಬದುಕಬೇಕೆಂಬ ಭಾವನೆ, ಆಸೆ ಸಹಜ. ಹಾಗಾಗಿ ನಾವು ಲಗಾಮಿಲ್ಲದ ಹುಚ್ಚು ಕುದುರೆಯಂತೆ ವರ್ತಿಸುತ್ತೇವೆ. ಅದಕ್ಕಾಗಿಯೇ ಸ್ವ-ವಿಮರ್ಶೆಯ ಮನೋಭಾವ ಬೆಳೆಸಿಕೊಳ್ಳಬೇಕು. ಸ್ವ-ವಿಮರ್ಶೆ ಎಂಬುದೊಂದು ಆತ್ಮಾವಲೋಕನದ ಘಟ್ಟ, ಇದೊಂದು ಆರೋಗ್ಯಕರ ಚಿಂತನೆ, ಇಂತಹ ಚಿಂತನೆ ಬೆಳೆಸಿಕೊಂಡವನು ಎಲ್ಲರನ್ನೂ ತನ್ನಂತೆ ಕಾಣುತ್ತಾನೆ, ಬೇಡದ ಆಲೋಚನೆಗಳಿಗೆ ಲಗಾಮು ಹಾಕಿ ಮನಸ್ಸೆಂಬ ಕುದುರೆಯನ್ನು ಸ್ವಪಥದಲ್ಲಿ ಚಲಿಸುವಂತೆ ಮಾಡುತ್ತಾನೆ.

ಸನ್ಮಾರ್ಗ ಅನುಸರಿಸಿ
ಬದುಕು ಸುಂದರ ಎನ್ನುವುದು ಎಷ್ಟು ನಿಜ. ಹಾಗೇ ಸಂಕೀರ್ಣ ಕೂಡ ಹೌದು. ಕಣ್ಣ ಮುಂದಿರುವ ಭೂಮಿಯ ಮೇಲಿನ ಬದುಕನ್ನು ಬಿಟ್ಟು ಕಲ್ಪನೆಯ ಸ್ವರ್ಗಕ್ಕೆ ಹಂಬಲಿಸೋದರಲ್ಲಿ ಅರ್ಥವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಬದುಕಿನ ಪಥವನ್ನು ಅರಿತು ಜೀವನ ರೂಪಿಸಿಕೊಳ್ಳಬೇಕು. ಆಸೆ – ಆಕಾಂಕ್ಷೆಗಳಿಗೆ ಸ್ವ-ನಿಯಂತ್ರಣ ಹಾಕಿಕೊಂಡು ಜೀವನದಲ್ಲಿ ಸ್ಪಷ್ಟವಾದ ಗುರಿ, ಉದ್ದೇಶ, ಧ್ಯೇಯಗಳನ್ನು ಅಳವಡಿಸಿ ಕೊಳ್ಳಬೇಕು. ಅಲ್ಲದೆ ಅವುಗಳ ಈಡೇರಿಕೆಗೆ ಸನ್ಮಾರ್ಗವನ್ನು ಅನುಸರಿಸುವುದು ಕೂಡ ಮುಖ್ಯ.

ಸಾತ್ವಿಕ ಶಕ್ತಿ ಪ್ರಜ್ವಲನ
ಸದ್ಭಾವನೆ, ಸತ್‌ಚಿಂತನೆ ಅಳವಡಿಸಿಕೊಳ್ಳುವುದರಿಂದ ವ್ಯಕ್ತಿತ್ವ ವೃದ್ಧಿಯಾಗಿ ಸಾತ್ವಿಕ ಶಕ್ತಿ ಪ್ರಜ್ವಲಿಸುತ್ತದೆ. ಜೀವನ ಶೈಲಿ, ಮನುಷ್ಯನ ಆಚಾರ, ವಿಚಾರ, ನಡವಳಿಕೆ ಆತನ ಭಾವನೆಯನ್ನು ಸೂಚಿಸುತ್ತದೆ. ಸದ್ಭಾವನೆ, ಸತ್‌ಚಿಂತನೆ ಅಜ್ಞಾನವನ್ನು ದೂರ ಮಾಡಿ, ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಪಡೆಯಲು ಸಹಕಾರಿ.

ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಲು ಸದ್ಭಾವನೆ, ಸತ್‌ಚಿಂತನೆ ಮುಖ್ಯ. ಸಮಸ್ಯೆಗಳ ನಡುವೆಯೂ ಸಹನೆ, ತಾಳ್ಮೆ, ನಿರೀಕ್ಷೆಗಳನ್ನಿಟ್ಟುಕೊಂಡು ಬಾಳುವ ಗುಣ ಉತ್ತಮ ಸತ್‌ಚಿಂತನೆಯಿಂದ ಪಡೆಯಬಹುದು. ಅಂತೆಯೇ ಬದುಕಿನ ಪ್ರತಿಯೊಂದು ಚಟುವಟಿಕೆಗಳಲ್ಲಿ ಸಕ್ರಿಯವಾಗಿರಲು ಮತ್ತು ಸಮತೋಲನ ಕಾಪಾಡಿಕೊಳ್ಳಲು ಸದ್ಭಾವನೆ ಮುಖ್ಯವಾಗಿ ಬೇಕು.

ಸವಾಲು ಎದುರಿಸಿ
ಪ್ರೀತಿ, ಪರಸ್ಪರ ಭಾವನೆಗಳನ್ನು ಗೌರವಿಸುವ ಗುಣ ಮತ್ತು ಒಮ್ಮೆ ಕಲಿತ ಪಾಠವನ್ನು ಬದುಕಿನುದ್ದಕ್ಕೂ ಅಳವಡಿಸಿಕೊಳ್ಳುದು ಅತ್ಯಗತ್ಯ. ಚಿಂತನೆ ನಮ್ಮ ಮನಸ್ಸಿನ ಮೂಲ ಆಸ್ತಿಯಾಗಿರಬೇಕು. ಆಗ ಜೀವನದಲ್ಲಿ ಏಳು ಬೀಳುಗಳು ಎದುರಾದರೂ ದೃಢವಾಗಿ ನಿಲ್ಲಬಹುದು. ಕಷ್ಟ – ನಷ್ಟಗಳನ್ನು ಅನುಭವಿಸಿ, ಬದುಕಿನ ಸವಾಲುಗಳನ್ನು ಮೆಟ್ಟಿನಿಲ್ಲಲು ಸತ್‌ಚಿಂತನೆ ಪ್ರೇರಣೆಯಾಗುವುದು.

ಪ್ರೀತಿಯಿಂದ ಇತರರ ಮನಸ್ಸನ್ನು ಗೆಲ್ಲಿ. ಬೇರೆಯವರ ಭಾವನೆಯೊಂದಿಗೆ ಚೆಲ್ಲಾಟ ಆಡದಿರಿ. ಯಾಂತ್ರಿಕತೆ, ಆಡಂಬರ ದೂರವಿರಲಿ. ಸಹಜತೆ, ಸರಳತೆಗೆ ಆದ್ಯತೆ ನೀಡಿ. ಸದಾ ಸಂತೋಷವಾಗಿರಿ. ಇತರರನ್ನೂ ಸಂತೋಷವಾಗಿರಿಸಲು ಯತ್ನಿಸಿ. ಚಿಕ್ಕಪುಟ್ಟ ವಿಷಯ ಗಳಿಗೂ ಕಚ್ಚಾಡುವ ಮನೋಭಾವ ಬಿಡಿ. ಸದಾ ನಗುಮುಖದಿಂದಿರಿ.

- ಗಣೇಶ ಕುಳಮರ್ವ

Advertisement

Udayavani is now on Telegram. Click here to join our channel and stay updated with the latest news.

Next