ಉಡುಪಿ: ವೃತ್ತಿ ಮತ್ತು ಪ್ರವೃತ್ತಿ ನಮ್ಮನ್ನು ಜಗತ್ತಿನಲ್ಲಿ ಒಟ್ಟಿಗೆ ಮುನ್ನಡೆಸುತ್ತವೆ. ಈ ಎರಡರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕಲು ಕಲಿತರೆ ಯಶಸ್ಸು ಖಚಿತ ಎಂದು ಉದ್ಯಮಿ ಕುಂದಾಪುರದ ಅಭಿನಂದನ್ ಎ. ಶೆಟ್ಟಿ ಹೇಳಿದರು. ಅವರು ಉಡುಪಿಯ ಅಸೋಸಿ ಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಆ್ಯಂಡ್ ಆರ್ಕಿಟೆಕ್ಟ್ (ಎಸಿಸಿಇಎ) ವತಿಯಿಂದ ಮಂಗಳವಾರ ಸ್ವದೇಶ್ ಹೊಟೇಲ್ ಸಭಾಂಗಣದಲ್ಲಿ ನಡೆದ ಎಂಜಿನಿಯರುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆವಿಷ್ಕಾರ ಮತ್ತು ವಿಜ್ಞಾನದ ಸಮಾಗಮವೇ ಎಂಜಿನಿಯರಿಂಗ್. ಇದು ಹೆಚ್ಚಿನವರ ಅಗತ್ಯವೂ ಆಗಿದೆ. ಜಗತ್ತಿನಲ್ಲಿ ಆಶಾವಾದಿಗಳಿಗೆ ಬಹಳಷ್ಟು ಆಸೆಗಳಿರುತ್ತವೆ. ಕೆಲವರಿಗೆ ನಿರಾಸೆ ಇರುತ್ತದೆ. ಆಸೆ ಮತ್ತು ನಿರಾಸೆ ನಡುವೆ ಇರುವವರು ಎಂಜಿನಿಯರ್‌ಗಳು. ವಾಸಿಸಲು, ಗೌರವದಿಂದ ಬದುಕಲು ಎಂಜಿನಿಯರ್‌ಗಳು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ ಎಂದರು.
ಯಶಸ್ಸು ಎಂಬುದು ಅದ್ಭುತವಾದ ವಿಚಾರ. ಇದು ಒಬ್ಬೊಬ್ಬರಿಗೆ ಒಂದೊಂದು ರೀತಿ ಭಿನ್ನವಾಗಿರುತ್ತದೆ. ವಿಭಿನ್ನವಾದ ಆಲೋಚನಾ ಕ್ರಮದಿಂದ ಹೊಸ ಯೋಚನೆಗಳು ಹುಟ್ಟಲು ಸಾಧ್ಯವಿದೆ. ಇದಕ್ಕೆ ವೃತ್ತಿ ಯೊಂದಿಗೆ ಆತ್ಮಪ್ರವೃತ್ತಿ ಬೆಳೆಸಿಕೊಳ್ಳ ಬೇಕು ಎಂದು ತಿಳಿಸಿದರು.
ಸಮ್ಮಾನ
ನಿವೃತ್ತ ಪ್ರಾಧ್ಯಾಪಕ ಮಣಿಪಾಲದ ಸಂಜೀವ ಶೇರಿಗಾರ್ ಮತ್ತು ಬ್ರಹ್ಮಾವರದ ಉದ್ಯಮಿ ರತ್ನಾಕರ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನಿತರು ಅನಿಸಿಕೆ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಗೋಪಾಲ ಭಟ್ ಸ್ವಾಗತಿಸಿದರು. ಪಾಂಡುರಂಗ ಎಚ್.ಆರ್. ನಿರೂಪಿಸಿದರು. ಗೌರವಾಧ್ಯಕ್ಷ ನಾಗೇಶ್ ಹೆಗ್ಡೆ, ಕಾರ್ಯದರ್ಶಿ ಅಮಿತ್ ಅರವಿಂದ್, ರತ್ನಾಕರ ಶೆಟ್ಟಿ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯ ಉಪಸ್ಥಿತರಿದ್ದರು.