ವಿಜಯಪುರ: ನಗರದಲ್ಲಿ ಫೆ.23ರಿಂದ ಎರಡು ದಿನಗಳ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಸದರಿ ಮೇಳದ ಯಶಸ್ಸಿಗೆ ಈಗಾಗಲೇ ನೇಮಕಗೊಂಡಿರುವ ವಿವಿಧ ಸಮಿತಿಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿ ಉದ್ಯೋಗ ಮೇಳ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಸೂಚನೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ನಡೆದ ಮಿನಿ ಉದ್ಯೋಗ ಮೇಳದ ನಿರ್ವಹಣೆಗೆ ಸಂಬಂಧಿಸಿದಂತೆ ಉಪ ಸಮಿತಿಗಳ ಕಾರ್ಯಚಟುವಟಿಕೆಗಳ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೌಶಲ ಹೊಂದಿರುವ ನಿರುದ್ಯೋಗಿಗಳ ಸಂಖ್ಯೆ ಕುರಿತು ನಿಖರ ದತ್ತಾಂಶ ಸಂಗ್ರಹಿಸಬೇಕು. ಈಗಾಗಲೇ ಉದ್ಯೋಗ ಮೇಳಕ್ಕೆ ಸಂಬಂಧಿಸಿದ ವೆಬ್‌ಸೈಟ್ ಉದ್ಘಾಟಿಸಲಾಗಿದೆ. ಆನ್‌ಲೈನ್ ಮತ್ತು ಆಪ್‌ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಆದ್ದರಿಂದ ಈ ಕುರಿತು ಗ್ರಾಮ ಪಂಚಾಯತವಾರು ವಿವಿಧ ಪ್ರಚಾರ ಸಾಮಗ್ರಿ ಬಳಸಿಕೊಂಡು ಹೆಚ್ಚಿನ ಪ್ರಚಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಉದ್ಯೋಗ ಮೇಳಕ್ಕೆ ಬರುವ ವಿವಿಧ ಉದ್ದಿಮೆಗಳು, ಖಾಸಗಿ ಸಂಸ್ಥೆಗಳು ಭಾಗವಹಿಸುವ ಕುರಿತು ಫೆ.10ರೊಳಗೆ ನಿಖರ ಮಾಹಿತಿ ಸಂಗ್ರಹಿಸಿ ಪಟ್ಟಿ ಸಿದ್ಧಪಡಿಸಬೇಕು. ಮೇಳದಲ್ಲಿ ಭಾಗವಹಿಸುವ ಅತಿಥಿಗಳಿಗೆ ಊಟೋಪಚಾರ, ಮೇಳದ ಸ್ಥಳದ ಶಾಮಿಯಾನ್, ಸ್ಟಾಲ್‌ಗಳ ಸ್ಥಾಪನೆ, ಮೂಲಭೂತ ಸೌಲಭ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ನೇಮಕ ಮಾಡಿದ ಸಮಿತಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕೌಶಲಾಭಿವೃದ್ಧಿ ಇಲಾಖೆ ವತಿಯಿಂದ ಈಗಾಗಲೇ ತರಬೇತಿಗೊಂಡ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಗೆ ಪ್ರೋತ್ಸಾಹ ನೀಡಿ, ಉದ್ದಿಮೆ ಬಯಸುವ ಅರ್ಹತೆಯುಳ್ಳ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಸೂಚನೆ ನೀಡಿದರು.
ಜಿಪಂ ಸಿಇಒ ವಿಕಾಸ ಕಿಶೋರ ಸುರಳಕರ, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಕೌಶಲಾಭಿವೃದ್ಧಿ ಅಧಿಕಾರಿ ರಮೇಶ ದೇಸಾಯಿ ಸೇರಿದಂತೆ ವಿವಿಧ ಸಮಿತಿಗಳ ಸದಸ್ಯರು, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.