Advertisement
ಹೊಸಪೇಟೆ, ವಿಜಯನಗರ, ಗೋಕಾಕ್, ಚಿಕ್ಕೋಡಿ ಜಿಲ್ಲಾ ರಚನೆಗೆ ಆಗ್ರಹ, ಹಿಂದಿನ ಮೈತ್ರಿ ಸರ್ಕಾರ ಜೆಎಸ್‌ಡಬ್ಲೂ ಕಂಪನಿಗೆ 3,600 ಎಕರೆ ಭೂಮಿ ಪರಭಾರೆ ಮಾಡಿರುವ ವಿಚಾರದ ಬಗ್ಗೆ ಮೂಲ ಬಿಜೆಪಿಗರು ಹಾಗೂ ಇತ್ತೀಚೆಗೆ ಬಿಜೆಪಿ ಸೇರಿ ಗೆದ್ದ ಶಾಸಕರ ನಿಲುವು ಭಿನ್ನವಾಗಿತ್ತು. ಇದೀಗ ಎಲ್ಲರೂ ಒಂದೇ ಪಕ್ಷದಲ್ಲಿದ್ದು, ಒಮ್ಮತದ ನಿಲುವಿಗೆ ಬದ್ಧರಾಗಿರುವರೇ ಎಂಬುದು ಮುಂದಿನ ಬೆಳವಣಿಗೆ ಮೇಲೆ ಅವಲಂಬಿತವಾಗಿದೆ.
Related Articles
Advertisement
ಗೋಕಾಕ್ ಜಿಲ್ಲೆ ರಚನೆ ಕೂಗು: 14 ತಾಲೂಕುಗಳು ಹಾಗೂ 18 ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಬೆಳಗಾವಿ ಜಿಲ್ಲೆಯನ್ನು ಮೂರು ಜಿಲ್ಲೆಗಳಾಗಿ ವಿಭಜಿ ಸಬೇಕು ಎಂಬ ಕೂಗು ಬಹಳ ಕಾಲದಿಂದ ಇದೆ. ಗೋಕಾಕ್ ತಾಲೂಕನ್ನು ಜಿಲ್ಲೆ ಮಾಡಬೇಕು ಎಂಬು ದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿಲುವು. ಚಿಕ್ಕೋಡಿ ಜಿಲ್ಲೆ ರಚಿಸಬೇಕು ಎಂಬುದು ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ, ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಅವರ ಆಗ್ರಹ. ಪ್ರಕಾಶ್ ಹುಕ್ಕೇರಿ ಹೊರತುಪಡಿಸಿ ಉಳಿದವರೆಲ್ಲಾ ಈಗ ಬಿಜೆಪಿಯಲ್ಲೇ ಇದ್ದಾರೆ. ಬೆಳಗಾವಿಯನ್ನು 3 ಜಿಲ್ಲೆಯಾಗಿ ವಿಂಗಡಿಸಬೇಕೆಂಬ ಒತ್ತಾಯ ವಿದ್ದರೂ ಆ ಭಾಗದ ಜನಪ್ರತಿನಿಧಿಗಳಲ್ಲಿ ಒಮ್ಮತ ಮೂಡದ ಕಾರಣ ಈ ಪ್ರಯತ್ನದಲ್ಲಿ ಯಶಸ್ಸು ಕಂಡಿಲ್ಲ.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಚರ್ಚಿಸಿ, ಒಮ್ಮತದ ನಿಲುವಿಗೆ ಬಂದರೆ ಮೂರು ಜಿಲ್ಲೆ ರಚಿಸಲು ಬದ್ಧ ಎಂದು ಹೇಳಿದ್ದರು. ಆದರೆ, ಆ ಭಾಗದ ಶಾಸಕರು ಒಮ್ಮತದ ನಿರ್ಧಾರ ಕೈಗೊಂಡಿರಲಿಲ್ಲ. ಇದೀಗ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಸೇರಿದ್ದು, ಸದ್ಯದಲ್ಲೇ ಸಚಿವರಾಗಲಿದ್ದಾರೆ. ಹಾಗಾಗಿ, ಹೊಸ ಜಿಲ್ಲೆಗಳ ರಚನೆ ಪ್ರಯತ್ನ ವೇಗ ಪಡೆಯುವುದೇ ಎಂಬ ಕುತೂಹಲ ಮೂಡಿದೆ.
ಜಿಂದಾಲ್ ಜಟಾಪಟಿ: ಹಿಂದಿನ ಮೈತ್ರಿ ಸರ್ಕಾರ ಜೆಎಸ್‌ಡಬ್ಲೂ ಕಂಪನಿಗೆ 3,600 ಎಕರೆ ಭೂಮಿಯನ್ನು ಪರಭಾರೆ ಮಾಡಿದ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ಖಂಡಿಸಿತ್ತು. ಆಗ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಅಹೋರಾತ್ರಿ ಧರಣಿ ನಡೆಸಿದ್ದರು. ಬೆಲೆಬಾಳುವ ಭೂಮಿಯನ್ನು ಜಿಂದಾಲ್ ಕಂಪನಿಗೆ ಮಾರಾಟ ಮಾಡುವ ಮೂಲಕ ಮೈತ್ರಿ ಸರ್ಕಾರ ಕಿಕ್‌ಬ್ಯಾಕ್ ಪಡೆದಿದೆ ಎಂದು ಆರೋಪಿಸಿದ್ದರು. ಆದರೆ, ಬಿಜೆಪಿ ಸರ್ಕಾರ ರಚನೆಯಾಗಿ ನಾಲ್ಕೂವರೆ ತಿಂಗಳು ಕಳೆದರೂ ಜಿಂದಾಲ್‌ಗೆ ಭೂಮಿ ಪರಭಾರೆ ಮಾಡಿರುವ ಬಗ್ಗೆ ಯಾವುದೇ ಕ್ರಮ ಕೈಗೊಂಡಂತಿಲ್ಲ.
ಈ ವಿಚಾರದಲ್ಲೂ ಸಚಿವ ಶ್ರೀರಾಮುಲು ಅವರು ಸ್ಪಷ್ಟ ನಿಲುವು ಪ್ರಕಟಿಸಿರಲಿಲ್ಲ. ಬದಲಿಗೆ ಕೈಗಾರಿಕೆಗಳಿಗೆ ಪ್ರೋತ್ಸಾಹ ಅಗತ್ಯ ಎಂಬರ್ಥದಲ್ಲಿ ಮಾತನಾಡಿದ್ದರು. ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಮಾಡಿರುವುದನ್ನು ವಿರೋಧಿಸಿಯೇ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಆನಂದ್ ಸಿಂಗ್ ಹೇಳಿದ್ದರು. ಇದೀಗ ಆನಂದ್ ಸಿಂಗ್ ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದು, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ, ಈ ವಿಚಾರದಲ್ಲೂ ಸ್ವಪಕ್ಷೀಯರಲ್ಲೇ ಹಿತಾಸಕ್ತಿ ಸಂಘರ್ಷ ಸೃಷ್ಟಿಯಾಗುವ ಆತಂಕದ ಮಾತುಗಳು ಕೇಳಿ ಬರುತ್ತಿವೆ.
ವಿಜಯನಗರ ಜಿಲ್ಲೆ ರಚನೆ, ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ವಿಚಾರದ ಬಗ್ಗೆ ನನ್ನ ನಿಲುವು, ಮನವಿಯನ್ನು ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ.-ಆನಂದ್ ಸಿಂಗ್, ಬಿಜೆಪಿ ಶಾಸಕ * ಎಂ. ಕೀರ್ತಿಪ್ರಸಾದ್