Advertisement

ಹೆದ್ದಾರಿ ಗುಂಡಿ; ಗುಂಡಿಗೆ ಗಟ್ಟಿ ಮಾಡಿಕೊಂಡು ಸಾಗಿ !

10:28 AM Sep 17, 2019 | Sriram |

ದ.ಕ. ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳ ಬಹುತೇಕ ಕಡೆ ಹೊಂಡಗಳದ್ದೇ ಕಾರುಬಾರು. ಮಾಣಿಯಿಂದ ಬಿ.ಸಿ. ರೋಡ್‌ ಮತ್ತು ಕೂಳೂರಿನಿಂದ ಪಣಂಬೂರು ವರೆಗಿನ ರಸ್ತೆ ತುಂಬಾ ಹೊಂಡ ಗುಂಡಿಗಳಿಂದ ಕೂಡಿದೆ. ಇಲ್ಲಿ ಸರಿಯಾದ ರಸ್ತೆಯೇ ಕಾಣಸಿಗದು. ಹೊಂಡಮಯ ರಸ್ತೆಯಲ್ಲಿ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಾಗಿದೆ. ಸದ್ಯ ತೇಪೆ ಕಾರ್ಯ ನಡೆಯುತ್ತಿದೆಯಾದರೂ ಶಾಶ್ವತ ಪರಿಹಾರದ ಅಗತ್ಯವಿದೆ.

Advertisement

ಮಂಗಳೂರು: ಜಿಲ್ಲೆಯ ಸಾವಿರಾರು ಪ್ರಯಾ ಣಿಕ ವಾಹನಗಳಿಗೆ ನಿತ್ಯ ಆಸರೆಯಾಗುವ ಹೆದ್ದಾರಿಯು ಮರಣ ಗುಂಡಿಗಳಾಗಿ ಬದ ಲಾಗುತ್ತಿದೆ. ಯಾವ ಹೆದ್ದಾರಿಯ ಯಾವ ಗುಂಡಿ ಯಾರ ಬಲಿ ಪಡೆಯಲು ಕಾದಿದೆಯೋ ಎಂಬ ಪರಿಸ್ಥಿತಿ ಸದ್ಯದ್ದು.

ಜಿಲ್ಲೆಯಲ್ಲಿ ಹಾದುಹೋಗುವ ಪ್ರಮುಖ ಎರಡು ರಾಷ್ಟ್ರೀಯ ಹೆದ್ದಾರಿಗಳ (66 ಮತ್ತು 75) ಬಹುತೇಕ ಭಾಗಗಳಲ್ಲಿ ಹೊಂಡಗಳೇ ತುಂಬಿ ಕೊಂಡಿದ್ದು, ಸಂಚಾರ ಸಂಕಷ್ಟ ವಾಗಿದೆ. ಇಲ್ಲಿರುವ ಗುಂಡಿಗಳು ಸವಾರರ ಮತ್ತು ಪ್ರಯಾಣಿಕರ ಹೃದಯಬಡಿತ ಹೆಚ್ಚಿಸು ವಂತಿವೆ. ಸ್ವಲ್ಪ ಎಚ್ಚರ ತಪ್ಪಿದರೂ ಸಾಕು, ವಾಹನ ಹೊಂಡಕ್ಕೆ ಬೀಳುವುದು ಖಚಿತ. ಬಂಟ್ವಾಳ- ಬೆಳ್ತಂಗಡಿ-ಮೂಡಿಗೆರೆ ರಾ.ಹೆ. 73 ಮತ್ತು ನಂತೂರು-ಮೂಡುಬಿದಿರೆ-ಕಾರ್ಕಳ ರಾ.ಹೆ. 169ರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ತಾತ್ಕಾಲಿಕ ದುರಸ್ತಿ
ಹದಗೆಟ್ಟ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿ ಸುವ ಸವಾರರ ಸಂಕಷ್ಟವನ್ನು ಕೊನೆಗೂ ಮನಗಂಡ ಅಧಿಕಾರಿಗಳು ತಾತ್ಕಾಲಿಕ ದುರಸ್ತಿಗೆ ಮುಂದಾಗಿದ್ದಾರೆ. ಆದರೆ ಇದು ಶಾಶ್ವತವಲ್ಲ. ಇನ್ನೊಂದು ಮಳೆ ಬಂದರೆ ಮತ್ತೆ ಹೊಂಡ ರೂಪು ಪಡೆಯುವುದು ಖಚಿತ. ಹೊಂಡಕ್ಕೆ ಶಾಶ್ವತ ಪರಿಹಾರ ಇಲ್ಲಿ ಮರೀಚಿಕೆ.

ಫ್ಲೈಓವರ್‌ ಕೆಳಗಿನ
ಸರ್ವಿಸ್‌ ರಸ್ತೆ ಹೊಂಡಮಯ
ಪಂಪ್‌ವೆಲ್‌ ಫ್ಲೈಓವರ್‌ ಒಂದು ಮುಗಿಯದ ವೃತ್ತಾಂತ. ಇದರ ಕಾಮಗಾರಿಯ ಕಾರಣಕ್ಕಾಗಿ ತೊಕ್ಕೊಟ್ಟು ಮತ್ತು ಮಂಗಳೂರು ಕಡೆಗೆ ಬರುವ ವಾಹನಗಳಿಗೆ ಸರ್ವಿಸ್‌ ರಸ್ತೆ ಮಾಡಲಾಗಿದೆ. ಆದರೆ ಇಲ್ಲಿನ ಗುಂಡಿಗಳು ವಾಹನದ ಆಯಸ್ಸನ್ನೇ ಕಡಿಮೆ ಮಾಡುತ್ತಿವೆ ಮಾತ್ರವಲ್ಲದೆ, ಸವಾರರ ಜೀವ ಹಿಂಡುತ್ತಿವೆ. ಈ ರಸ್ತೆ ತುಂಬಾ ಹೊಂಡಗಳೇ. ತೊಕ್ಕೊಟ್ಟು ಫ್ಲೈಓವರ್‌ ಕೆಳಭಾಗ ಸರ್ವಿಸ್‌ ರಸ್ತೆ ಕೂಡ ಇದೇ ಪರಿಸ್ಥಿತಿಯಲ್ಲಿದೆ. ಬಿ.ಸಿ.ರೋಡ್‌ ಫ್ಲೈಓವರ್‌ ಕೆಳಗಿನ ಸರ್ವಿಸ್‌ ರಸ್ತೆ ಕೂಡ ಇದಕ್ಕೆ ಹೊರತಾಗಿಲ್ಲ.

Advertisement

ಗುಂಡಿಗಳ ಲೆಕ್ಕಾಚಾರ ಕಷ್ಟ
ಯಾವ ರಸ್ತೆಯಲ್ಲಿ ಎಲ್ಲೆಲ್ಲಿ ಎಷ್ಟು ಗುಂಡಿಗಳಿವೆ ಎಂದು ಲೆಕ್ಕ ಹಾಕಲು ಸಾಧ್ಯವಿಲ್ಲ. ಯಾಕೆಂದರೆ ಅರೆಕ್ಷಣಕ್ಕೊಂದು ಗುಂಡಿ ಧುತ್ತೆಂದು ಎದುರುಗೊಳ್ಳುತ್ತದೆ. ಅವು ಲೆಕ್ಕ ಮಾಡಿದಷ್ಟು ಮುಗಿಯುವುದಿಲ್ಲ. ಅದರಲ್ಲೂ ಮಂಗಳೂರು ವ್ಯಾಪ್ತಿಯಲ್ಲಿ ಹೆದ್ದಾರಿಯ ಸ್ಥಿತಿ ಭೀಕರ ಅನ್ನಿಸುವಂತಿದೆ. ಕೊಂಚ ದುರಸ್ತಿ ಕಾರ್ಯವನ್ನು ಹೆದ್ದಾರಿ ಇಲಾಖೆಯವರು ಈಗ ನಡೆಸುತ್ತಿದ್ದಾರಾದರೂ ನಂತೂರು, ಪಂಪ್‌ವೆಲ್‌, ಕೊಟ್ಟಾರ, ಕೂಳೂರು, ಬೈಕಂಪಾಡಿ, ಪಣಂಬೂರು ಜಂಕ್ಷನ್‌ಗಳ ಪಾಡು ಹೇಳತೀರದು.

ಮಾಣಿ-ಬಿ.ಸಿ.ರೋಡ್‌ ನರಕದರ್ಶನ
ಪಾಣೆಮಂಗಳೂರು, ಮೆಲ್ಕಾರು, ಪೆರ್ನೆ ವ್ಯಾಪ್ತಿಯಲ್ಲಿ ಸಂಚರಿಸುವಾಗ ಹೆದ್ದಾರಿ ನರಕದರ್ಶನವನ್ನೇ ಒದಗಿಸುತ್ತದೆ. ಇಲ್ಲಿ ರಸ್ತೆಯೇ ಇಲ್ಲವೆಂದರೂ ತಪ್ಪಾಗದು. ಇಂಚು ಇಂಚಿಗೂ ಹೊಂಡಗಳು ರಾರಾಜಿಸುತ್ತಿದ್ದು, ಪ್ರಯಾಣ ದುಸ್ತರವಾಗಿದೆ. ಗುಂಡಿಯಲ್ಲೇ ಎದ್ದುಬಿದ್ದು ಸಂಚರಿಸಬೇಕಾದ ದ್ವಿಚಕ್ರ ವಾಹನ ಸವಾರರ ಪಾಡು ಹೇಳತೀರದು. ಗುಂಡಿ ತಪ್ಪಿಸಲು ಹೋದರೆ ಅಪಘಾತ ನಡೆಯುವ ಸಾಧ್ಯತೆಯಿದೆ.

ಹೊಂಡ ಮುಚ್ಚಲು
ಒಂದೂವರೆ ತಿಂಗಳ ಗಡುವು !
ನಂತೂರಿಂದ ತಲಪಾಡಿ, ಬಿ.ಸಿ. ರೋಡ್‌- ಸುರತ್ಕಲ್‌ವುತ್ತು ಕುಲಶೇಖರದಿಂದ ಕಾರ್ಕಳ, ಬಿ.ಸಿ. ರೋಡ್‌, ಚಾರ್ಮಾಡಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಹೊಂಡಗಳು ಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿದೆ. ಹೀಗಾಗಿ ಅಕ್ಟೋಬರ್‌ ತಿಂಗಳಾಂತ್ಯದ ಒಳಗೆ ಹೆದ್ದಾರಿಯ ಹೊಂಡ ಮುಚ್ಚಿ ನಿರ್ವಹಣ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದ್ದಾರೆ.

ಬಸ್‌ ಟ್ರಿಪ್‌ ಕಟ್‌!
ಹೊಂಡಮಯ ರಸ್ತೆಗಳಲ್ಲಿ ವೇಗಕ್ಕೆ ಕಡಿವಾಣ ಬೀಳುವ ಜತೆ ಸರ್ಕಸ್‌ ಮಾಡುತ್ತ ಸಂಚರಿಸುವ ಕಾರಣ ಬಸ್‌ಗಳು ಸಮಯ ಪಾಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಹಲವು ಸಮಸ್ಯೆಗಳು ಎದುರಾಗುತ್ತವೆ. ಬಸ್‌ಗಳ ಮಧ್ಯೆ ಸ್ಪರ್ಧೆಯ ಜತೆ ತಾಂತ್ರಿಕ ಸಮಸ್ಯೆಯೂ ಉಂಟಾಗುತ್ತದೆ. ಇದರಿಂದ ಬಸ್‌ನವರು ಟ್ರಿಪ್‌ ಕಟ್‌ ಮಾಡುತ್ತಿದ್ದಾರೆ.

ಗುಂಡಿಯಲ್ಲಿ ವಾಹನ ನಿಲ್ಲಿಸಿ ಟೋಲ್‌ ಪಾವತಿಸಿ !
ಬ್ರಹ್ಮರಕೂಟ್ಲು ಬಳಿ ಹೊಂಡದಲ್ಲಿಯೇ ವಾಹನ ನಿಲ್ಲಿಸಿ ಸುಂಕ ಸಂಗ್ರಹ ಮಾಡುವ ಪರಿಸ್ಥಿತಿ ಇದೆ. ಇದು ಹೆದ್ದಾರಿಯ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ. ಈ ಟೋಲ್‌ನ ಎರಡೂ ಕಡೆ ಸಾಗುವಾಗ ಗುಂಡಿಗಳ ದರ್ಶನವಾಗುತ್ತದೆ.

ಟೋಲ್‌ ಬಳಿಕ ಪಾಣೆಮಂಗಳೂರು ಸೇತುವೆ ಬಳಿ, ನರಿಕೊಂಬು ತಿರುವಿನ ಬಳಿ, ಮೆಲ್ಕಾರ್‌, ಕಲ್ಲಡ್ಕ, ಮಾಣಿಯವರೆಗೂ ಬೃಹತ್‌ ಹೊಂಡಗಳು ವಾಹನ ಸವಾರರನ್ನು ದಿಕ್ಕು ತಪ್ಪಿಸುತ್ತಿವೆ. ಸಾಮಾನ್ಯ ಬಸ್‌ಗಳಲ್ಲಿ ತೆರಳುವ ಪ್ರಯಾಣಿಕರಷ್ಟೇ ಅಲ್ಲ; ಮಲ್ಟಿ ಆ್ಯಕ್ಸಿಲ್‌ ಬಸ್‌ಗಳ ಸಂಚಾರಿಗಳೂ ಹೊಂಡದಿಂದಾಗಿ ಹೌಹಾರುವ ಪ್ರಮೇಯವಿದೆ. ರಸ್ತೆಯೆಲ್ಲ ಹದಗೆಟ್ಟ ಕಾರಣ ತಾಸುಗಟ್ಟಲೆ ಟ್ರಾಫಿಕ್‌ ಜಾಮ್‌ ಇಲ್ಲಿ ಮಾಮೂಲಿ.

Advertisement

Udayavani is now on Telegram. Click here to join our channel and stay updated with the latest news.

Next