Advertisement
ರಸ್ತೆಗಳಲ್ಲಿ ಗುಂಡಿ, ಅಸಮರ್ಪಕ ನಿರ್ವಹಣೆಯಿಂದ ವಾಹನ ಸವಾರರು, ಸಾರ್ವಜನಿಕರು ಅಪಘಾತಕ್ಕೊಳಗಾದರೆ ಅದಕ್ಕೆ ಯಾರು ಹೊಣೆ ಮತ್ತು ಸಂತ್ರಸ್ತರಿಗೆ ಪರಿಹಾರ ನೀಡುವ ಉತ್ತರದಾಯಿತ್ವವನ್ನು ಯಾರು ಹೊರಬೇಕು ಎಂಬ ಗೊಂದಲ ಹಲವಾರು ವರ್ಷಗಳಿಂದ ಬಗೆ ಹರಿಯದೆ ಉಳಿದಿದೆ. ರಸ್ತೆಗಳ ಅಸಮರ್ಪಕ ನಿರ್ವಹಣೆ ಕಾರಣದಿಂದ ವಾಹನಗಳು ಗುಂಡಿಗೆ ಬಿದ್ದು, ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸಿದರೆ ಇದಕ್ಕೆ ಆಯಾಯಾ ನಗರಾಡಳಿತ ಸಂಸ್ಥೆಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು ಹಾಗೂ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ನಗರಾಡಳಿತ ಸಂಸ್ಥೆಗಳೇ ನೀಡಬೇಕು ಎಂಬ ಬಗ್ಗೆ ಹಲವಾರು ಕಾನೂನು ಹೋರಾಟಗಳು ನಡೆದಿವೆ. ಇದೀಗ ಈ ಗೊಂದಲಗಳಿಗೆ ಪರಿಹಾರ ದೊರಕುವ ಮತ್ತು ಸಂಬಂಧಪಟ್ಟ ನಗರಾಡಳಿತ ಸಂಸ್ಥೆಗಳೇ ಇದರ ಉತ್ತರದಾಯಿತ್ವವನ್ನು ವಹಿಸಿಕೊಳ್ಳುವ ಉಪಕ್ರಮವೊಂದಕ್ಕೆ ಬೆಂಗಳೂರು ನಾಂದಿಯಾಗುತ್ತಿದೆ. ಒಟ್ಟು ರಾಜ್ಯದಲ್ಲಿ ರಸ್ತೆ ಗುಂಡಿ ಮತ್ತು ಅಸಮರ್ಪಕ ನಿರ್ವಹಣೆಯಿಂದ ಸಂಭವಿಸುವ ಅಪಘಾತಗಳಿಗೆ ಪರಿಹಾರ ನೀಡುವಲ್ಲಿ ಇದು ದಿಕ್ಸೂಚಿಯಾಗಲಿದೆ.
Related Articles
Advertisement
ಬಿಬಿಎಂಪಿ ಇದೀಗ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಕ್ರಿಯೆಗಳನ್ನು ಆರಂಭಿಸಿರುವುದು ಸಾರ್ವಜನಿಕ ಸುರಕ್ಷತೆಯ ನಿಟ್ಟಿನಲ್ಲಿ ಒಂದು ಮಹತ್ವದ ಪೂರಕ ಕ್ರಮವಾಗಲಿದೆ ಹಾಗೂ ಇತರ ನಗರಾಡಳಿತ ಸಂಸ್ಥೆಗಳ ಮೇಲೂ ಅನ್ವಯವಾಗುವ ಸಾಧ್ಯತೆಗಳಿವೆ. ಅಪಘಾತಗಳು ಸಂಭವಿಸಿದ ಸಂದರ್ಭಗಳಲ್ಲಿ ಸಂತ್ರಸ್ತರು ನಗರಾಡಳಿತ ಸಂಸ್ಥೆಗಳಿಂದ ಪರಿಹಾರ ಕೋರಲು ಇದು ಮಾರ್ಗದರ್ಶಿಯಾಗಲಿದೆ.
ಇನ್ನೊಂದೆಡೆ ನಗರಾಡಳಿತ ಸಂಸ್ಥೆಗಳ ಪಾಲಿಗೆ ಇದು ಎಚ್ಚರಿಕೆಯೂ ಆಗಿದೆ. ರಸ್ತೆಗುಂಡಿಗಳ ದುರಸ್ತಿಗೊಳಿಸಲು ಹಾಗೂ ರಸ್ತೆಗಳನ್ನು ಸುವ್ಯವಸ್ಥೆ ಸ್ಥಿತಿಯಲ್ಲಿಡುವ ಕಾರ್ಯಕ್ಕೆ ತುರ್ತುನೆಲೆಯಲ್ಲಿ ಮುಂದಾಗುವುದು ಅನಿವಾರ್ಯವಾಗಲಿದೆ. ರಸ್ತೆ ಅವ್ಯವಸೆœಯಿಂದ ಅಪಘಾತಗಳು ಸಂಭವಿಸಿದ ಸಂದರ್ಭಗಳಲ್ಲಿ ಲಕ್ಷಾಂತರ ರೂ. ಪರಿಹಾರ ನೀಡಬೇಕಾಗುತ್ತದೆ. ಬರೇ ಪರಿಹಾರದ ಪ್ರಶ್ನೆ ಮಾತ್ರವಲ್ಲ. ಸಂಬಂಧಪಟ್ಟ ನಗರಾಡಳಿತ ಸಂಸ್ಥೆಗಳಿಗೆ ಇದೊಂದು ಕಪ್ಪುಚುಕ್ಕೆ ಕೂಡ ಆಗಲಿದೆ.
ದಿಕ್ಸೂಚಿಯಾಗುವ ಉಪಕ್ರಮಬೆಂಗಳೂರಿನಲ್ಲಿ ಬಿಬಿಎಂಪಿ ಕೈಗೊಂಡಿರುವ ಉಪಕ್ರಮ ರಾಜ್ಯದಲ್ಲಿ ಮಂಗಳೂರು ಸೇರಿದಂತೆ ನಗರಗಳಲ್ಲಿ ರಸ್ತೆಗುಂಡಿ ಹಾಗೂ ಅಸಮರ್ಪಕ ರಸ್ತೆ ನಿರ್ವಹಣೆ ಸಮಸ್ಯೆಗೆ ಒಂದು ನಿರ್ದಿಷ್ಟವಾದ ಪರಿಹಾರವನ್ನು ರೂಪಿಸುವಲ್ಲಿ ದಿಕ್ಸೂಚಿಯಾಗಲಿದೆ. ರಸ್ತೆ ಅವ್ಯವಸ್ಥೆ ಬಗ್ಗೆ ನಗರಾಡಳಿತ ಸಂಸ್ಥೆಗಳು ಬಹುತೇಕ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಾ ಬರುತ್ತಿವೆ. ಮಾರಣಾಂತಿಕ ಅಪಘಾತಗಳು ಸಂಭವಿಸಿದರೂ, ಸಾರ್ವಜನಿಕರು ಇದರ ಬಗ್ಗೆ ಸಂಬಂಧಪಟ್ಟ ನಗರಾಡಳಿತದ ಗಮನ ಸೆಳೆದರೂ ಅನೇಕ ಬಾರಿ ಇದು ಅರಣ್ಯರೋಧನವಾದ ಪ್ರಕರಣಗಳು ಬಹಳಷ್ಟಿವೆ. ರಸ್ತೆಗುಂಡಿ ಅಥವಾ ಅಸಮರ್ಪಕ ರಸ್ತೆ ನಿರ್ವಹಣೆಯಿಂದ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಕೆಲವು ಬಾರಿ ಜಿಲ್ಲಾಡಳಿತ, ಪೊಲೀಸ್ ಅಧಿಕಾರಿಗಳು ಸಂಬಂಧಪಟ್ಟ ನಗರಾಡಳಿತ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್ ದಾವೆ ದಾಖಲಿಸಿಕೊಳ್ಳುವ ಎಚ್ಚರಿಕೆ ನೀಡಿದ್ದೂ ಇದೆ. ಮಂಗಳೂರು ನಗರವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಫುಟ್‌ಪಾತ್‌ಗಳು, ರಸ್ತೆಗಳಲ್ಲಿ ಗುಂಡಿಗಳು ಅಪಾಯಕಾರಿಯಾಗಿ ಬಾಯ್ದೆರೆದು ನಿಂತಿರುವ ನಿದರ್ಶನಗಳಿವೆ. ರಸ್ತೆಗಳನ್ನು ವಿವಿಧ ಕಾಮಗಾರಿಗಳಿಗೆ ಅಗೆದು ತಿಂಗಳುಗಟ್ಟಲೇ ಹಾಗೆಯೇ ಬಿಟ್ಟು ಹೋಗುವ ಪ್ರಮೇಯಗಳು ಕೂಡ ಇವೆ. ಇಂತಹ ಸನ್ನಿವೇಶಗಳಲ್ಲಿ ಪಾದಚಾರಿಗಳು, ದ್ವಿಚಕ್ರವಾಹನಗಳು ಅಪಘಾತಕ್ಕೀಡಾದರೆ ಸವಾರರು ಸಂಕಷ್ಟ ಅನುಭವಿಸಬೇಕಾಗುತ್ತದೆ. -ಕೇಶವ ಕುಂದರ್