Advertisement

ಕೇಂದ್ರದಿಂದ ಫೆಬ್ರವರಿ ವರೆಗಿನ ಸಬ್ಸಿಡಿ ಸೀಮೆಎಣ್ಣೆ ಬಿಡುಗಡೆ

01:24 AM Jan 25, 2022 | Team Udayavani |

ಕುಂದಾಪುರ: ರಾಜ್ಯದ ನಾಡದೋಣಿ ಮೀನುಗಾರರಿಗೆ ಫೆಬ್ರವರಿಗೆ ಸಿಗಬೇಕಿದ್ದ ಬಾಕಿ ಸಬ್ಸಿಡಿ ಸೀಮೆಎಣ್ಣೆಯನ್ನು ಕೇಂದ್ರ ಸರಕಾರ ಸೋಮವಾರ ಬಿಡುಗಡೆ ಮಾಡಿದೆ. ಡಿಸೆಂಬರ್‌ನಿಂದ ಮಾರ್ಚ್‌ ವರೆಗೆ 5,115 ಕಿಲೋ ಲೀ. (51.15 ದಶಲಕ್ಷ ಲೀ.) ಸಿಗಬೇಕಿದ್ದು, ಆ ಪೈಕಿ ಈಗ ಫೆಬ್ರವರಿ ವರೆಗೆ 3,540 ಕಿಲೋ ಲೀ. (35.40 ದಶಲಕ್ಷ ಲೀ.) ಬಿಡುಗಡೆಯಾಗಿದೆ.

Advertisement

ಬಾಕಿ ಸೀಮೆಎಣ್ಣೆ ಬಿಡುಗಡೆ ಸಂಬಂಧ ಕರಾವಳಿ ಭಾಗದ ಮೀನುಗಾರರು ಕೇಂದ್ರ ಸಚಿವೆ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದ್ದರು. ಸಚಿವೆ ಶೋಭಾ ಅವರು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವರ ಗಮನಕ್ಕೆ ತಂದು ತ್ವರಿತಗತಿಯಲ್ಲಿ ಹೆಚ್ಚುವರಿ ಸೀಮೆಎಣ್ಣೆ ಬಿಡುಗಡೆ ಮಾಡಿ ಮೀನುಗಾರರ ಹಿತ ಕಾಯುವಂತೆ ಮನವಿ ಮಾಡಿದ್ದರು.

3,540 ಕಿ.ಲೀ. ಬಿಡುಗಡೆ
ಶೋಭಾ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಜ. 24ರಂದು 3,540 ಕಿಲೋ ಲೀ. ಸೀಮೆಎಣ್ಣೆಯನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ. ನವೆಂಬರ್‌ವರೆಗೆ ಈ ಹಿಂದೆ 7,080 ಕಿ.ಲೀ. (70.8 ದಶ ಲಕ್ಷ ಲೀ.) ಬಿಡುಗಡೆ ಮಾಡಿತ್ತು. ಈಗ 3,540 ಕಿ.ಲೀ. ಬಿಡುಗಡೆ ಮಾಡುವುದರೊಂದಿಗೆ ಡಿಸೆಂಬರ್‌, ಜನವರಿ ಹಾಗೂ ಫೆಬ್ರವರಿ ವರೆಗಿನ ಸೀಮೆಎಣ್ಣೆ ನೀಡಿದಂತಾಗಿದೆ. ಇನ್ನು ಮಾರ್ಚ್‌ ತಿಂಗಳಿನದ್ದು ಸೇರಿ ಒಟ್ಟು 1,575 ಕಿ.ಲೀ. ಸಿಗಲು ಬಾಕಿ ಇದೆ. ಕರಾವಳಿ ಜಿಲ್ಲೆಗಳಲ್ಲಿ ಸದ್ಯ ಸಬ್ಸಿಡಿ ಸೀಮೆಎಣ್ಣೆಗೆ ಅರ್ಹವಾಗಿರುವ 4,514 ದೋಣಿಗಳಿದ್ದು, 2013ರ ಆದೇಶದಂತೆ ತಲಾ 300 ಲೀ.ನಂತೆ ಮಾಸಿಕ 13.55 ದಶಲಕ್ಷ ಲೀ. ಸೀಮೆಎಣ್ಣೆ ನೀಡಲಾಗುತ್ತದೆ.

ನಾಡದೋಣಿ ಮೀನುಗಾರರ ಬೇಡಿಕೆಯನ್ನು ತ್ವರಿತವಾಗಿ ಈಡೇರಿಸಿ, ಸೀಮೆಎಣ್ಣೆ ಬಿಡುಗಡೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, ಪೆಟ್ರೋಲಿಯಂ ಸಚಿವರಿಗೆ ರಾಜ್ಯದ ಪರವಾಗಿ ಧನ್ಯವಾದ.
– ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಮೀನುಗಾರರಿಂದ ಕೃತಜ್ಞತೆ
ರಾಜ್ಯದ ಮೀನುಗಾರರ ಬೇಡಿಕೆಗೆ ಕ್ಷಿಪ್ರಗತಿಯಲ್ಲಿ ಸ್ಪಂದಿಸಿ, ಬಾಕಿ ಸೀಮೆಎಣ್ಣೆ ಬಿಡುಗಡೆಗೆ ಬಹುಮುಖ್ಯವಾಗಿ ಶ್ರಮಿಸಿದ ಸಚಿವೆ ಶೋಭಾ ಕರಂದ್ಲಾಜೆ, ಮೀನುಗಾರಿಕಾ ಸಚಿವ ಎಸ್‌. ಅಂಗಾರ, ಕರಾವಳಿಯ ಎಲ್ಲ ಸಂಸದರು, ಶಾಸಕರಿಗೆ ಎಲ್ಲ ನಾಡದೋಣಿ ಮೀನುಗಾರರ ಪರವಾಗಿ ಕೃತಜ್ಞತೆಗಳು.
– ಆನಂದ ಖಾರ್ವಿ, ಅಧ್ಯಕ್ಷರು, ರಾಜ್ಯ ಸಾಂಪ್ರದಾಯಿಕ
ನಾಡದೋಣಿ ಮೀನುಗಾರರ ಒಕ್ಕೂಟ

Advertisement

ಜ. 5ರಂದು ಉದಯವಾಣಿಯಲ್ಲಿ ಪ್ರಕಟಗೊಂಡ ವರದಿ
ಕೇರಳಕ್ಕೆ ಈ ಮೊದಲೇ ಸೀಮೆಎಣ್ಣೆ ಬಿಡುಗಡೆ ಮಾಡಿದ್ದ ಕೇಂದ್ರ ಸರಕಾರವು, ರಾಜ್ಯದ ಮೀನುಗಾರರಿಗೆ ಸೀಮೆಎಣ್ಣೆ ಬಿಡುಗಡೆಗೆ ವಿಳಂಬ ನೀತಿ ಅನುಸರಿಸುತ್ತಿದ್ದ ಬಗ್ಗೆ “ಉದಯವಾಣಿ’ಯು ಜ. 5ರಂದು “ರಾಜ್ಯಕ್ಕೆ ಕೇಂದ್ರದ ಮಲತಾಯಿ ಧೋರಣೆ’ ಎನ್ನುವುದಾಗಿ ವಿಶೇಷ ವರದಿ ಪ್ರಕಟಿಸಿ, ಗಮನಸೆಳೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next