Advertisement

ಸಬ್ಸಿಡಿ, ಅನುದಾನ ಹಣ ಮೊಬೈಲ್‌ ಖಾತೆಗೆ!

06:00 AM Aug 24, 2017 | |

ಬೆಳ್ತಂಗಡಿ: ಹೈನುಗಾರ ಸರಕಾರದ ಹಾಲು ಸಬ್ಸಿಡಿಗೆ ಕಾದರೆ ಆತನ ಬ್ಯಾಂಕ್‌ಗೆ ನಯಾ ಪೈಸೆ ಬಿದ್ದಿರುವುದಿಲ್ಲ. ಆದರೆ ಏರ್‌ಟೆಲ್‌ ಮೊಬೈಲ್‌ ಖಾತೆಗೆ ಒಮ್ಮಿಂದೊಮ್ಮೆಗೆ ಸಾವಿರಾರು ರೂ. ಜಮೆ ಯಾಗಿರುತ್ತದೆ. ಉದ್ಯೋಗ ಖಾತರಿಯ ಕೂಲಿಯೂ ಮೊಬೈಲ್‌ ಕಂಪೆನಿಯಲ್ಲಿನ ಖಾತೆಗೆ ! 

Advertisement

ಸರಕಾರದ ಸಬ್ಸಿಡಿ, ಬೆಳೆ ಹಾನಿ ಪರಿಹಾರ ಹೀಗೆ ಸರಕಾರದಿಂದ ಆಧಾರ್‌ ಆಧಾರದಿಂದ ಪಾವತಿ ಯಾಗುವ ಹಣ ಏರ್‌ಟೆಲ್‌ ಮೊಬೈಲ್‌ ಕರೆನ್ಸಿಯಾಗಿ ಪರಿವರ್ತನೆಯಾಗುತ್ತಿದ್ದು, ಅನಕ್ಷರಸ್ಥ ರಿಗೆ ಇದರ ಮಾಹಿತಿಯೇ ಇರುವುದಿಲ್ಲ. ಅವರು ಸಬ್ಸಿಡಿಗಾಗಿ ಅಲೆದಾಡುತ್ತಲೇ ಇರುತ್ತಾರೆ. ಕಡತ ದಾಖಲೆಗಳ ಪ್ರಕಾರ ಸಬ್ಸಿಡಿ ವಿತರಿಸಲಾಗಿರುತ್ತದೆ. ಹೀಗೊಂದು ಗೊಂದಲ ಸೃಷ್ಟಿಯಾದದ್ದು ಆಧಾರ್‌ ಲಿಂಕ್‌ನಿಂದ. ದೇಶಾದ್ಯಂತ ಈ ಸಮಸ್ಯೆ ಸೃಷ್ಟಿ ಯಾಗಿದ್ದು ಗ್ರಾಹಕ ಬಯಸಿದ ಖಾತೆಗೆ ಹಣ ಜಮೆಯಾಗುವಂಥ ತಂತ್ರಜ್ಞಾನದ ತಿದ್ದುಪಡಿ ಆಗಬೇಕಿದೆ.

ಕೇಂದ್ರ ಸರಕಾರದ ಸೂಚನೆಯನ್ವಯ ಎಲ್ಲ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಕೊಂಡಿ ಕಡ್ಡಾಯ. ಒಬ್ಬ ವ್ಯಕ್ತಿ ಎಂಟತ್ತು ಕಡೆ ಬ್ಯಾಂಕ್‌ ಖಾತೆ ತೆರೆದಿದ್ದರೆ ಅಷ್ಟೂ ಕಡೆ ಆಧಾರ್‌ಗೆ ಜೋಡಿಸಿರಬೇಕು. ಖಾತೆಗೆ ಮೊಬೈಲ್‌ ಸಂಖ್ಯೆ ಜೋಡಿಸಬೇಕು. ಇಲ್ಲದಿದ್ದರೆ ಬ್ಯಾಂಕ್‌ ಖಾತೆ ನಿರ್ಜೀವವಾಗುತ್ತದೆ. ಏತನ್ಮಧ್ಯೆ ಮೊಬೈಲ್‌ ಸಿಮ್‌ಗೂ ಆಧಾರ್‌ ಅವಶ್ಯ.

ಮೊಬೈಲ್‌ ವ್ಯಾಲೆಟ್‌ಗಳು: ಈಗ ಬ್ಯಾಂಕ್‌ ಗಳಷ್ಟೇ ಹಣದ ವ್ಯವಹಾರವನ್ನು ನಡೆಸುವುದಲ್ಲ. ಮೊಬೈಲ್‌ನಲ್ಲಿ  ದೊರೆಯುವ ನೂರಾರು ವ್ಯಾಲೆಟ್‌ ಆ್ಯಪ್‌ಗ್ಳಲ್ಲಿ ಹಣದ ವ್ಯವಹಾರ ನಡೆಸಲು ಅವಕಾಶವಿದೆ. ಏರ್‌ಟೆಲ್‌ ಅಧಿಕೃತವಾಗಿ ಹಣದ ವ್ಯವಹಾರ ನಡೆಸಲು ಅನುಮತಿ ಪಡೆದಿದ್ದು ಏರ್‌ಟೆಲ್‌ ಮನಿ ಎಂಬ ಹೆಸರಿನ ಮೂಲಕ ಮೊಬೈಲ್‌ ವ್ಯಾಲೆಟ್‌ನಲ್ಲಿ ಹಣ ವಿನಿಮಯ, ವ್ಯವಹಾರಕ್ಕೆ ಅನುಕೂಲ ಮಾಡಿದೆ. 

ಇಲ್ಲಾಗಿದೆ ಎಡವಟ್ಟು: ಆಧಾರ್‌ ಸಂಖ್ಯೆಯನ್ನು ಖಾತೆಗೆ ಜೋಡಿಸುತ್ತಾ ಕೊನೆಯದಾಗಿ ಯಾವ ಖಾತೆಗೆ ಆಧಾರ್‌ ಸಂಖ್ಯೆ ಜೋಡಿಸುತ್ತಾರೋ ಆ ಖಾತೆಗೆ ಹಣ ಜಮೆಯಾಗುವಂತಹ ತಂತ್ರಜ್ಞಾನ ವ್ಯವಸ್ಥೆ ಈಗ ಚಾಲ್ತಿಯಲ್ಲಿದೆ. ಅಂದರೆ ಹತ್ತಾರು ಬ್ಯಾಂಕುಗಳಲ್ಲಿ ಎಕೌಂಟ್‌ ಇದ್ದರೆ ಎಲ್ಲ ಬ್ಯಾಂಕುಗಳಲ್ಲಿ ಆಧಾರ್‌ ಜೋಡಣೆ ಮಾಡಿ ಸುತ್ತಾ ಕೊನೆಗೆ ಯಾವ ಬ್ಯಾಂಕಿನ ಖಾತೆಗೆ ಆಧಾರ್‌ ಹೊಂದಿಸುತ್ತಾರೋ ಆ ಖಾತೆಗೆ ಅನಂತರದ ದಿನಗಳಲ್ಲಿ ಎಲ್ಲ ಸಬ್ಸಿಡಿ, ಅನುದಾನ ಜಮೆಯಾಗುತ್ತದೆ. 

Advertisement

ಕೊನೆಗೆ ಏರ್‌ಟೆಲ್‌ ಸಿಮ್‌ಗೆ ಆಧಾರ್‌ ಲಿಂಕ್‌ ಮಾಡಿದರೆ ಹಣದ ವಹಿವಾಟಿನ ಮಾನ್ಯತೆಯ ಏರ್‌ಟೆಲ್‌ ಮನಿ ಖಾತೆಗೆ ಎಲ್ಲ ಹಣ ಜಮೆಯಾಗುತ್ತದೆ. ಏರ್‌ಟೆಲ್‌ ಮಾತ್ರ ಅಲ್ಲ, ಕೆಲವು ಸ್ವಯಂಸೇವಾ ಸಂಸ್ಥೆಗಳು ಖಾಸಗಿ ಬ್ಯಾಂಕುಗಳಲ್ಲಿ ಸ್ವಯಂ ಸೇವಾ ಸಂಘದ ಸದಸ್ಯರ ಖಾತೆ ತೆರೆದಿದ್ದು ಅನೇಕರ ಹಣ ಅಂತಹ ಖಾಸಗಿ ಬ್ಯಾಂಕುಗಳಿಗೂ ಹೋಗುತ್ತಿದೆ. ಆದರೆ ಮುಗ್ಧರು ತಾವು ಹೆಚ್ಚಾಗಿ ಉಪಯೋಗ ಮಾಡುವ ಬ್ಯಾಂಕ್‌ನ ಖಾತೆಯನ್ನಷ್ಟೇ ಪರಿಶೀಲಿಸಿ ಸಬ್ಸಿಡಿ, ಅನುದಾನ, ಪರಿಹಾರ ಎಂದು ಕೊಸರಾಡಿಕೊಳ್ಳುತ್ತಿದ್ದಾರೆ.

ಹಾಲಿನ ಸಬ್ಸಿಡಿ: ಮಂಗಳೂರು ಕೆಎಂಎಫ್‌ನ ಹೈನುಗಾರ ಸದಸ್ಯರಿಗೆ ಕೂಡ ಇಂತಹ ಸಮಸ್ಯೆ ತಲೆದೋರಿದೆ. ದಿನವಹಿ ಹಾಲು ಉತ್ಪಾದನೆಯಲ್ಲಿ ಮಂಗಳೂರು ಕೆಎಂಎಫ್‌ ರಾಜ್ಯದ 14 ಒಕ್ಕೂಟಗಳ ಪೈಕಿ 7ನೇ ಸ್ಥಾನದಲ್ಲಿದ್ದು ಇತರ ಎಲ್ಲ ವ್ಯವಹಾರಗಳಲ್ಲಿ ನಂ.1 ಆಗಿದೆ. ದ.ಕ. ಹಾಗೂ ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ 703 ಹಾಲು ಉತ್ಪಾದಕ ಸಂಘಗಳಿದ್ದು 67 ಸಾವಿರ ಸದಸ್ಯರಿಂದ ಎರಡು ಜಿಲ್ಲೆಗಳಿಂದ ಪ್ರತಿದಿನ 4.37 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿದೆ. ಪ್ರತೀ ಲೀ.ಗೆ 5 ರೂ.ಗಳಂತೆ ಸಹಾಯಧನ ದೊರೆಯುತ್ತದೆ. 

ಮಾಸಿಕ 6 ಕೋ.ರೂ.ಗಳಷ್ಟು ಸಹಾಯಧನ ಸರಕಾರದಿಂದ ದೊರೆಯುತ್ತಿದ್ದು ಇವೆಲ್ಲವೂ ಆಯಾ ಹೈನುಗಾರರ ಬ್ಯಾಂಕ್‌ ಖಾತೆಗೇ ಜಮೆಯಾಗುತ್ತಿದೆ. 1 ವಾರದ ಹಿಂದೆ ಎಪ್ರಿಲ್‌ ತಿಂಗಳ ಸಬ್ಸಿಡಿ ಸರಕಾರದಿಂದ ಬಿಡುಗಡೆಯಾಗಿದೆ. ಹೈನುಗಾರರು ಸಬ್ಸಿಡಿ ಹಣ ತಮ್ಮ ಬ್ಯಾಂಕ್‌ ಖಾತೆಗೆ ಬಂದಿಲ್ಲ ಎಂದು ಚಡಪಡಿಸುತ್ತಿದ್ದಾಗ ಈ ರೀತಿ ಬೇರೆ ಬೇರೆ ಖಾತೆಗಳಿಗೆ ಜಮೆಯಾಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ. 

ಪೂರ್ಣಪ್ರಮಾಣದಲ್ಲಿ ಗೊಂದಲ ಪರಿಹಾರವಾಗಿಲ್ಲ ಎನ್ನುತ್ತಾರೆ ಕೆಎಂಎಫ್‌ ಉಪವ್ಯವಸ್ಥಾಪಕ ಡಾ| ರವಿರಾಜ ಉಡುಪ. ಮಂದರ್ತಿ, ಕೊಕ್ಕರ್ಣೆ, ಬೆಳ್ಮಣ್‌, ಮಲವಂತಿಗೆ ಮೊದಲಾದೆಡೆ ಜನ ಹೆಚ್ಚಾಗಿ ಏರ್‌ಟೆಲ್‌ಗೆ ಮೊರೆ ಹೋಗಿದ್ದು ಅಲ್ಲಿ ಇತ್ತೀಚೆಗಷ್ಟೇ ಆಧಾರ್‌ ಜೋಡಣೆ ಮಾಡಿರುವಲ್ಲಿ ಹೆಚ್ಚು ಗೊಂದಲ ಉಂಟಾಗಿದೆ.

ಮಾರ್ಗದರ್ಶನ ಬೇಕು: ಇಂಟರ್ನೆಟ್‌ ಮೂಲಕ ಹಣ ವರ್ಗಾವಣೆಗೆ ದಿಲ್ಲಿಯ ನ್ಯಾಶನಲ್‌ ಪೇಮೆಂಟ್‌ ಕಾರ್ಪೋ ರೇಶನ್‌ ಆಫ್‌ ಇಂಡಿಯಾ ಸೂತ್ರಧಾರನಾಗಿದ್ದು, ಶೆಡ್ನೂಲ್ಡ್‌ ಬ್ಯಾಂಕ್‌ ಅಲ್ಲದ ಖಾತೆಗಳಿಗೆ ಹಣ ಹಾಕುವ ಕುರಿತು ಸೂಕ್ತ ಮಾರ್ಗದರ್ಶಕ ಸೂತ್ರ ರೂಪಿಸಿದರೆ ಸಮಸ್ಯೆಗೆ ಪರಿಹಾರ ದೊರೆಯಲಿದೆ.

ವರ್ಗಾಯಿಸಬಹುದು
ಅಸಲಿಗೆ ಏರ್‌ಟೆಲ್‌ ಅಥವಾ ಯಾವುದೇ ಬ್ಯಾಂಕ್‌ ಖಾತೆಯಿಂದ ನಾಗರಿಕರು ತಮಗೆ ಬೇಕಾದ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಬಹುದು. ಆದರೆ ಮಾಹಿತಿಯಿಲ್ಲದವರು ಗೊಂದಲಕ್ಕೆ ಒಳಗಾಗಿದ್ದಾರೆ. ಮೊಬೈಲ್‌ನಲ್ಲಿ  *99# ಒತ್ತಿದರೆ ಆಧಾರ್‌ ಸಂಖ್ಯೆ ಯಾವ ಖಾತೆಗೆ ಜೋಡಣೆಯಾಗಿದೆ ಎಂದು ತಿಳಿಯುತ್ತದೆ. ನಮಗೆ ಬೇಕಾದ ಬ್ಯಾಂಕ್‌ಗೆ ಹೋಗಿ ಮತ್ತೂಮ್ಮೆ ಆಧಾರ್‌ ಮರು ಜೋಡಣೆ ಮಾಡಿದರೆ ಹಣ ಆ ಖಾತೆಗೆ ಬರುತ್ತದೆ.

ಪುನಃ ಜೋಡಿಸಬೇಕು
ನಾಗರಿಕರು ತಮ್ಮ ಯಾವ ಖಾತೆಗೆ ಸಬ್ಸಿಡಿ ಹಣ ಬರಬೇಕೋ ಆ ಬ್ಯಾಂಕ್‌ನ ಶಾಖೆಗೆ ತೆರಳಿ ಅಲ್ಲಿ ಆಧಾರ್‌ ಸಂಪರ್ಕ ತೆಗೆದು ಮರುಸಂಪರ್ಕ ಮಾಡಿದಾಗ ಹೊಸದಾಗಿ ಆಧಾರ್‌ ಜೋಡಣೆಯಾದಂತಾಗುತ್ತದೆ. ಆಗ ಸಬ್ಸಿಡಿ ಅದೇ ಖಾತೆಗೆ ಬರುತ್ತದೆ. ಈ ಗೊಂದಲ ಕುರಿತು ಆಧಾರ್‌ನ ರಾಜ್ಯ ಮುಖ್ಯಸ್ಥರ ಗಮನ ಸೆಳೆಯಲಾಗಿದೆ 
– ಡಾ| ಬಿ.ವಿ. ಸತ್ಯನಾರಾಯಣ
 ವ್ಯವಸ್ಥಾಪಕ ನಿರ್ದೇಶಕರು, ಕೆಎಂಎಫ್‌

ಮಾಹಿತಿ ಕೊಡಲಾಗುತ್ತಿದೆ
ಗ್ರಾಮಾಂತರ ಪ್ರದೇಶದಲ್ಲಿ ಗೊಂದಲ ಇದ್ದು ಈ ಬಗ್ಗೆ ಹೈನುಗಾರರಿಗೆ ಮಾಹಿತಿ ಕೊಡಲಾಗುತ್ತಿದೆ. ಯಾವುದಾ ದರೂ ಒಂದು ಖಾತೆಯಲ್ಲಿ ಹಣ ಜಮೆಯಾಗಿರುತ್ತದೆ. ಆದ್ದರಿಂದ ಗೊಂದಲ ಬೇಡ 

– ರವಿರಾಜ್‌ ಹೆಗ್ಡೆ, ಅಧ್ಯಕ್ಷರು, ಕೆಎಂಎಫ್‌

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next