Advertisement

ಹಾಲು ಕರೆಯುವ ಯಂತ್ರ ಖರೀದಿಗೆ ಸಬ್ಸಿಡಿ

09:55 AM Nov 28, 2019 | mahesh |

ಬಂಟ್ವಾಳ: ಹೈನುಗಾರಿಕೆ ಬೆಂಬಲಿಸುವ ನಿಟ್ಟಿನಲ್ಲಿ ಸರಕಾರ ಪಶು ಸಂಗೋಪನ ಇಲಾಖೆಯಿಂದ ವಿವಿಧ ಸೌಲಭ್ಯ ನೀಡುತ್ತಿದ್ದು, ಆದರೆ ಇಲಾಖೆ ಈ ತನಕ ಹೈನುಗಾರರಿಗೆ ಹಾಲು ಕರೆಯುವ ಯಂತ್ರ ಖರೀದಿಗೆ ಸಬ್ಸಿಡಿ ನೀಡಿಲ್ಲ. ಆದರೆ ಇದೀಗ ಬಂಟ್ವಾಳ ಪಶುಸಂಗೋಪನೆ ಇಲಾಖೆಯಿಂದ ಸಬ್ಸಿಡಿ ನೀಡುವ ಕುರಿತು ಪ್ರಸ್ತಾವನೆ ಹೋಗಿದ್ದು, ಸರಕಾರದಿಂದ ಸಕಾರಾತ್ಮಕ ಸ್ಪಂದನೆಯೂ ದೊರಕಿದೆ.

Advertisement

ಹೈನುಗಾರರಿಂದ ಹಾಲು ಖರೀದಿ ಕಾರ್ಯವನ್ನು ಕೆಎಂಎಫ್‌ ನಿರ್ವಹಿಸುತ್ತಿದ್ದು, ಹೀಗಾಗಿ ಕೆಎಂಎಫ್‌ನಿಂದಲೇ ಯಂತ್ರಕ್ಕೆ ಸಬ್ಸಿಡಿ ನೀಡಲಾಗುತ್ತಿದೆ. ಹಾಲು ಕರೆಯಲು ಸಾಧ್ಯವಾಗುತ್ತಿಲ್ಲ ಎಂದು ಸಣ್ಣ ಹೈನುಗಾರರಿಂದ ಯಂತ್ರಕ್ಕೆ ಬೇಡಿಕೆ ಬರುತ್ತಿರುವುದರಿಂದ ಪಶುಸಂಗೋಪನೆ ಇಲಾಖೆಯಿಂದ ಸಹಾಯಕ ನಿರ್ದೇಶಕರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ಅದಕ್ಕೆ ಪೂರಕ ಸ್ಪಂದನೆ ನೀಡಿರುವ ಸರಕಾರದ ಪ್ರಿನ್ಸಿಪಲ್‌ ಸೆಕ್ರೆಟರಿ ಅವರು, ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಲಭ್ಯವಿದ್ದರೆ ಆ ಕುರಿತು ಯೋಚಿಸಲಾಗುತ್ತದೆ. ಇಲ್ಲದೇ ಇದ್ದರೆ ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಲಾಗುತ್ತದೆ ಎಂದು ಬಂಟ್ವಾಳ ಸಹಾಯಕ ನಿರ್ದೇಶಕರಿಗೆ ಭರವಸೆ ನೀಡಿದ್ದಾರೆ.

ಬಂಟ್ವಾಳ ತಾಲೂಕಿನಲ್ಲಿ ಒಟ್ಟು 7,810 ಹೈನುಗಾರರಿದ್ದು, ಅದರಲ್ಲಿ ಸುಮಾರು 550 ಮಂದಿ ಹಾಲು ಕರೆಯುವ ಯಂತ್ರವನ್ನು ಉಪಯೋಗಿಸುತ್ತಿದ್ದಾರೆ. ಅಂದರೆ ದಿನವೊಂದಕ್ಕೆ ಕನಿಷ್ಠ 25 ಲೀ. ಹಾಲು ಪೂರೈಕೆ ಮಾಡುವ ಹೈನುಗಾರರಿಗೆ ಕೆಎಂಎಫ್‌ನಿಂದ ಸಬ್ಸಿಡಿ ದರದಲ್ಲಿ ಹಾಲು ಕರೆಯುವ ಯಂತ್ರ ನೀಡಲಾಗುತ್ತಿದೆ ಎಂದು ಕೆಎಂಎಫ್‌ ವಿಸ್ತರಣಾಧಿಕಾರಿ ಜಗದೀಶ್‌ ತಿಳಿಸಿದ್ದಾರೆ.

ಆರ್ಥಿಕ ವರ್ಷದ ಅರ್ಧದಲ್ಲಿ ಪ್ರಸ್ತಾವನೆ
ಬಂಟ್ವಾಳ ಪಶುಸಂಗೋಪನ ಇಲಾಖೆ ಆರ್ಥಿಕ ವರ್ಷದ ಅರ್ಧ ಭಾಗದಲ್ಲಿ ಹಾಲು ಕರೆಯುವ ಯಂತ್ರಕ್ಕೆ ಪ್ರಸ್ತಾವನೆ ಸಲ್ಲಿಸಿರುವು ದರಿಂದ ಈ ಬಾರಿಯ ಬಜೆಟ್‌ನಲ್ಲಿ ಅದು ಕಷ್ಟಸಾಧ್ಯ. ಆದರೆ ಮುಂದಿನ ಬಾರಿಯ ಬಜೆಟ್‌ನಲ್ಲಿ ಅದಕ್ಕೆ ಅನುದಾನ ಹೊಂದಾಣಿಕೆ ಮಾಡಿಕೊಂಡು ಬಜೆಟ್‌ನಲ್ಲೇ ಸೇರಿಸಿ ಘೋಷಣೆ ಮಾಡುವ ಸಾಧ್ಯತೆ ಇದೆ.

Advertisement

ಇಲಾಖೆಯ ಪ್ರಕಾರ ಸಾಮಾನ್ಯವಾಗಿ ಹಾಲು ಕರೆಯುವ ಯಂತ್ರಕ್ಕೆ 70 ಸಾವಿರ ರೂ.ವರೆಗೆ ತಗಲುತ್ತದೆ. ಆದರೆ ಪುತ್ತೂರಿನವರೊಬ್ಬರು ತಯಾರಿಸುವ ಯಂತ್ರವು 30 ಸಾವಿರ ರೂ.ಗೆ ಲಭ್ಯವಾಗಲಿದ್ದು, ಅದು ಸಣ್ಣ ಹೈನುಗಾರರಿಗೂ ಅನುಕೂಲವಾಗಲಿದೆ. ಹೀಗಾಗಿ ಸರಕಾರ ಸಬ್ಸಿಡಿಗೆ ಅವಕಾಶ ನೀಡಿದ್ದಲ್ಲಿ ಸಣ್ಣ ಹೈನುಗಾರರು ಹಾಲು ಕರೆಯುವ ಯಂತ್ರ ಖರೀದಿಸಬಹುದಾಗಿದೆ ಎಂದು ಇಲಾಖೆ ಹೇಳುತ್ತಿದೆ.

ಬಜೆಟ್‌ನಲ್ಲಿ ಸೇರಿಸುವ ಭರವಸೆ
ಸಣ್ಣ ಹೈನುಗಾರರಿಂದ ಹಾಲು ಕರೆಯುವ ಯಂತ್ರಕ್ಕೆ ಬೇಡಿಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸರಕಾರದ ಕಾರ್ಯದರ್ಶಿಗಳಿಂದ ಸಕಾರಾತ್ಮಕ ಸ್ಪಂದನೆ ದೊರಕಿದ್ದು, ಈ ಬಾರಿ ಸಾಧ್ಯವಾಗದಿದ್ದರೆ ಮುಂದಿನ ಬಜೆಟ್‌ನಲ್ಲಿ ಸೇರಿಸುವ ಕುರಿತು ಭರವಸೆ ನೀಡಿದ್ದಾರೆ. ಈ ಹಿಂದೆ ಇಲಾಖೆಯು ಹಾಲು ಕರೆಯುವ ಯಂತ್ರಕ್ಕೆ ಸಬ್ಸಿಡಿ ನೀಡುತ್ತಿರಲಿಲ್ಲ.
 - ಡಾ| ಹೆನ್ರಿ, ಸ. ನಿರ್ದೇಶಕರು, ಪಶುಸಂಗೋಪನ , ಇಲಾಖೆ, ಬಂಟ್ವಾಳ

- ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next