ಉಡುಪಿ: ಮೀನುಗಾರರಿಗೆ ಸಹಾಯ ಧನ ಮಂಜೂರು ಮಾಡಲು ಮೀನುಗಾರಿಕೆ ದೋಣಿಗಳು ಬಳಸುವ ಡೀಸೆಲ್ ಮೇಲೆ 100 ಕೋ.ರೂ. ಹಾಗೂ ಸೀಮೆ ಎಣ್ಣೆ ಮೇಲೆ 50 ಕೋ.ರೂ. ಸಹಾಯಾನುದಾನವನ್ನು ಕೇಂದ್ರ ಸರಕಾರ ದಿಂದ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಮೀನುಗಾರರಿಗೆ ಸಹಾಯಕವಾಗಲು ಹಾಗೂ ಸುಗಮ ಆಡಳಿತ ವ್ಯವಸ್ಥೆಗಾಗಿ ಉಡುಪಿಯಲ್ಲಿ ಮೀನುಗಾರಿಕೆ ಉಪನಿರ್ದೇಶಕರ ಕಚೇರಿಯನ್ನು ಸೃಷ್ಟಿಸಿ ಆದೇಶವನ್ನು ಹೊರಡಿಸಲಾಗಿದೆ. ಮೀನುಗಾರರು ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆದ ಸಾಲದ ಮೇಲಿನ ಶೇ. 2ಕ್ಕಿಂತ ಹೆಚ್ಚಿನ ಬಡ್ಡಿ ಯನ್ನು ಪಾವತಿಸುವ ಯೋಜನೆಯಲ್ಲಿ 2016- 17ನೇ ಸಾಲಿನಲ್ಲಿ 100 ಲ.ರೂ.ಗಳನ್ನು ಮೀನು
ಗಾರರ ಪರವಾಗಿ ಬ್ಯಾಂಕ್‌ಗಳಿಗೆ ಪಾವತಿಸಲಾಗಿದೆ. ಸರಕಾರ ಪುನಃ 596.51 ಲ.ರೂ. ಅನುದಾನ ಒದಗಿಸಿದ್ದು ಇದನ್ನು ಮೀನುಗಾರರ ಬ್ಯಾಂಕ್ ಸಾಲಕ್ಕೆ ಪಾವತಿಸಲು ಕ್ರಮವಹಿಸಲಾಗಿದೆ ಎಂದಿದ್ದಾರೆ.
ಮೀನುಗಾರಿಕೆ ದೋಣಿಗಳಿಗೆ ಡೀಸೆಲ್ ಮಾರಾಟ ತೆರಿಗೆ ಮರುಪಾವತಿ ಯೋಜನೆಯಡಿ 2016-17ನೇ ಸಾಲಿಗೆ 10,050 ಲ.ರೂ. ಅನುದಾನ ನಿಗದಿಗೊಳಿಸಲಾಗಿದೆ. ಇದರಲ್ಲಿ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆಯಡಿ ಇತರ ಕಾರ್ಯಕ್ರಮಗಳಿಗೆ ನಿಗದಿಪಡಿಸಿದ ಮೊತ್ತ ಹೊರತುಪಡಿಸಿ 9,552 ಲ.ರೂ. ಡೀಸೆಲ್ ಮಾರಾಟ ತೆರಿಗೆ ಮರುಪಾವತಿ ಗಾಗಿ ಲಭ್ಯವಾಗಿದೆ. ಆದರೆ 2016 ಎಪ್ರಿಲ್‌ನಿಂದ ಅನ್ವಯವಾಗುವಂತೆ ಡೀಸೆಲ್ ಮೇಲಿನ ಮಾರಾಟ ಕರವನ್ನು ಹೆಚ್ಚಿಸಿದ ಕಾರಣ ಹಾಗೂ ಡೀಸೆಲ್ ದರದಲ್ಲಿ ಹೆಚ್ಚಳವಾದ ಕಾರಣ ಪ್ರಸ್ತುತ ಪ್ರತಿ ಲೀಟರ್ ಡೀಸೆಲ್ ಮೇಲೆ 9.27 ರೂ. ಮಾರಾಟ ಕರವನ್ನು ಮರುಪಾವತಿ ಮಾಡಬೇಕಾಗಿದೆ. ಈ ವರೆಗೆ ಲಭ್ಯವಿರುವ ಅನುದಾನದಲ್ಲಿ 7,143 ಲ.ರೂ. ಸಹಾಯಧನವನ್ನು ಮೀನುಗಾರರ ಖಾತೆಗಳಿಗೆ ಜಮಾ ಮಾಡಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಬಾಕಿ ಇದ್ದ ಹಾಗೂ ನವೆಂಬರ್ ತಿಂಗಳ ಸಹಾಯಧನ ಪಾವತಿಗಾಗಿ ಒಟ್ಟು 2,363 ಲ.ರೂ. ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಲಾಗಿದೆ. ಇದರಿಂದ ನವೆಂಬರ್ ಅಂತ್ಯದವರೆಗೆ ಒಟ್ಟು 1.15 ಲ.ಕಿ.ಲೀ. ಡೀಸೆಲ್ ಮೇಲೆ ಒಟ್ಟು
9,523 ಲ.ರೂ. ಸಹಾಯಧನವನ್ನು ಮೀನುಗಾರ ರಿಗೆ ಪಾವತಿ ಮಾಡಿದಂತಾಗುತ್ತದೆ. ಡಿಸೆಂಬರ್, ಜನವರಿ, ಫೆಬ್ರವರಿಯ ಡೀಸೆಲ್ ಸಹಾಯಧನ ಪಾವತಿಗಾಗಿ ಹೆಚ್ಚುವರಿಯಾಗಿ 33 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲು ಸರಕಾರವನ್ನು ಕೋರಲಾಗಿದೆ.
ಡೀಸೆಲ್ ಮತ್ತು ಸೀಮೆಎಣ್ಣೆ ದರಗಳು ತೀವ್ರವಾಗಿ ಹೆಚ್ಚುತ್ತಿದ್ದು ಮೀನುಗಾರರಿಗೆ ಮೀನುಗಾರಿಕೆ ನಡೆಸಲು ವೆಚ್ಚವು ಹೆಚ್ಚಳವಾಗುತ್ತಿದೆ. ವಾರ್ಷಿಕ ಸುಮಾರು 1.80 ಲ.ಕಿ.ಲೀ. ಡೀಸೆಲ್ ಹಾಗೂ ಸುಮಾರು 28,000 ಕಿ.ಲೀ. ಸೀಮೆಎಣ್ಣೆ ಮೀನುಗಾರಿಕೆ ದೋಣಿಗಳಿಗೆ ಬೇಕಾಗುತ್ತದೆ. ಆದ್ದರಿಂದ ಮೀನುಗಾರರಿಗೆ ಅನುದಾನ ಮಾಡಲು ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಪ್ರಕಟನೆ ತಿಳಿಸಿದೆ.